ಸಿದ್ದರಾಮಯ್ಯ ಬೇಡ ಅಂದ್ರೆ ಪರಮೇಶ್ವರ್ ಸಿಎಂ ಆಗ್ಲಿ: ಸಚಿವ ಕೆಎನ್ ರಾಜಣ್ಣ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡ ಬೆಂಕಿ
ಬೆಂಗಳೂರು, ನವೆಂಬರ್ 03: ರಾಜ್ಯದಲ್ಲಿ ಬಲಿಷ್ಠವಾಗಿದ್ದ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಿ ಗೆದ್ದು ಬೀಗಿದ್ದ ಕಾಂಗ್ರೆಸ್‌ನಲ್ಲಿ ಈಗ ಒಡಕು ಮೂಡಿದೆ. ಅಧಿಕಾರಕ್ಕೆ ಬಂದ ಆರೇ ಆರು ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತು ಕೇಳಿಬರುತ್ತಿದೆ. ಐದು ವರ್ಷ ನಾನೇ ಸಿಎಂ ಎನ್ನುವ ಸಿದ್ದರಾಮಯ್ಯ ಹೇಳಿಕೆ ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮಲ್ಲಿ ಒಡಕಿಲ್ಲ, ನಾವೆಲ್ಲ ಒಂದೇ ಎಂದು ಎಷ್ಟೇ ಬಾರಿ ಪಕ್ಷದ ಮುಖಂಡರು ಮಾಧ್ಯಮಗಳ ಮುಂದೆ ಹೇಳಿಕೊಂಡರೂ ಸಹ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ ಶಿವಕುಮಾರ್ ಬಣ ಎಂದು ಎರಡು ಬಣ ಇದೆ ಎನ್ನುವುದು ಎದ್ದು ಕಾಣುತ್ತಿತ್ತು. ಟಿಕೆಟ್ ಹಂಚಿಕೆ, ಚುನಾವಣೆ ಮಗಿದ ಬಳಿಕ ಸಚಿವ ಸ್ಥಾನ, ಖಾತೆ ಹಂಚಿಕೆ ಎಲ್ಲಾ ಸಮಯದಲ್ಲೂ ಈ ವಿಚಾರ ಬಹಿರಂಗವಾಗಿತ್ತು.

ಇದೀಗ ಇದೇ ಎರಡು ಬಣಗಳ ನಡುವೆ ನಾನೇ ಸಿಎಂ ಎನ್ನುವ ವಿವಾದ ಆರಂಭವಾಗಿದೆ. ಐದು ವರ್ಷ ನಮ್ಮದೇ ಸರ್ಕಾರ ಇರಲಿದೆ. ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಂತೆ ಇತ್ತ ಡಿ.ಕೆ ಶಿವಕುಮಾರ್ ಬೆಂಬಲಿತ ಬಣ ಆ್ಯಕ್ಟಿವ್ ಆಗಿದೆ. ಒಂದೂವರೆ ವರ್ಷದ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಆಗಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈ ಬಗ್ಗೆ ನೇರವಾಗಿ ಹೇಳಿಕೆಗಳನ್ನು ಸಹ ನೀಡುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಚಿವ ಕೆ.ಎನ್ ರಾಜಣ್ಣ ನೀಡಿರುವ ಹೇಳಿಕೆ ಕಾಂಗ್ರೆಸ್‌ನಲ್ಲಿ ಮತ್ತೊಂದು ಕಿಡಿ ಹೊತ್ತಿಸಿದೆ. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರೆ, ಗೃಹ ಸಚಿವರಾಗಿರುವ ಪರಮೇಶ್ವರ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯ ನಂತರ ಪರಮೇಶ್ವರ ಅವರೇ ಮುಖ್ಯಮಂತ್ರಿಯಾಗಬೇಕು. ಬೇರೆಯವರಿಗೆ ಆ ಸ್ಥಾನ ನೀಡಬಾರದು ಎಂದು ಹೇಳಿದ್ದಾರೆ.
ನಾನು ನನ್ನ ಜೀವನದಲ್ಲಿ ಏನೆಲ್ಲಾ ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ಎಲ್ಲಾ ವಿಚಾರದಲ್ಲೂ ನಾನು ಹೇಳಿದ ಯಾವ ವಿಚಾರವೂ ಅಸತ್ಯವಾಗಿಲ್ಲ. ಪರಮೇಶ್ವರ್ ಸಿಎಂ ಆಗುತ್ತಾರೆ ಎನ್ನುವ ವಿಚಾರವೂ ಅಸತ್ಯವಾಗಲ್ಲ. ಅವರು ಈ ಅವಧಿಯಲ್ಲಿ ಸಿಎಂ ಆಗುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಸರ್ಕಾರದ ವಿಚಾರದಲ್ಲಿ ಏನೂ ಮಾತನಾಡಬಾರದು ಎಂದು ಎಐಸಿಸಿ ಮುಖಂಡರು ಹೇಳಿದ್ದಾರೆ. ನಾನು, ಇಂತಹ ಯಾವ ಸೂಚನೆಗೂ ಭಯಪಡುವುದಿಲ್ಲ. ಏನೂ ಬೇಕಾದರೂ ಮಾಡಿಕೊಳ್ಳಲಿ ಮುಂದೆ ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಈಗ ನಾನು ಮಾತನಾಡುತ್ತೇನೆ. ಪರಮೇಶ್ವರ ಅವರಿಗೆ ಅದೃಷ್ಟ ಇದೆ ಮುಂದೆ ಏನು ಬೇಕಾದರೂ ಆಗಬಹುದು. ಜಿಲ್ಲೆಯಿಂದ ಒಬ್ಬರು ಮುಖ್ಯಮಂತ್ರಿಯಾದರೆ, ನಾನು ಮುಖ್ಯಮಂತ್ರಿಯಾದಂತೆ ಅವರಿಗೆ ಉಜ್ವಲ ರಾಜಕೀಯ ಭವಿಷ್ಯ ಇದೆ ಎಂದು ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಇನ್ನು ಕಾಂಗ್ರೆಸ್‌ನಲ್ಲಿ ಈವರೆಗೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ದಲಿತ ಸಿಎಂ ಕೂಗು ಕೇಳಿ ಬರುತ್ತಿತ್ತು. ಇದೀಗ ಈ ಸಾಲಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು, ಗೃಹ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಯಾಗಲಿ ಎಂದು ಸಚಿವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಒಳಗಿನ ಈ ಒಡಕು ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ.












Click it and Unblock the Notifications