Karnataka CM: ಜಾತಿ ರಾಜಕೀಯದ ವಿರುದ್ಧ ಜನಾಕ್ರೋಶ!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆ ಮಾಡುವುದೇ ಪಕ್ಷಕ್ಕೆ ಕಗ್ಗಂಟಾಗಿದ್ದು, ಸಿಎಂ ಆಯ್ಕೆಯಲ್ಲಿ ಭಾರಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಸಿಎಂ ಸ್ಥಾನ ತನಗೇ ಬೇಕೆಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದು, 2 ದಿನದಿಂದ ಹೈಡ್ರಾಮ ನಡೆಯುತ್ತಿದೆ.
ಶಾಸಕಾಂಗ ಸಭೆಯ ನಂತರ ಮುಖ್ಯಮಂತ್ರಿ ಆಯ್ಕೆ ವಿಚಾರ ದೆಹಲಿಗೆ ಶಿಫ್ಟ್ ಆಗಿದೆ. ಸಿದ್ದರಾಮಯ್ಯ ಸೋಮವಾರವೇ ದೆಹಲಿಗೆ ತೆರಳಿದ್ದು, ಸಿಎಂ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಇದ್ದು ರಾಜಕೀಯ ದಾಳಗಳನ್ನು ಉರುಳಿಸಿದ್ದ ಡಿಕೆಶಿ ಮಂಗಳವಾರ ದೆಹಲಿಗೆ ಪ್ರಯಾಣ ಮಾಡಿದ್ದು, ಸಿಎಂ ಸ್ಥಾನಕ್ಕೆ ಕಸರತ್ತು ನಡೆಸುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಎಐಸಿಸಿ ವೀಕ್ಷಕರು ಮತ್ತು ರಾಹುಲ್ ಗಾಂಧಿ ಚರ್ಚೆ ಮಾಡಿದ ಬಳಿಕ, ಸಂಜೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇಬ್ಬರೂ ಕೂಡ ಸಿಎಂ ಸ್ಥಾನ ತನಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಕಗ್ಗಂಟು ಮತ್ತಷ್ಟು ಜಠಿಲವಾಗಿದೆ.
ಸ್ವಾಮೀಜಿಗಳ ರಾಜಕೀಯಕ್ಕೆ ಜನಾಕ್ರೋಶ
ಇನ್ನು ಎಲ್ಲಾ ಜಾತಿಯ ಸ್ವಾಮೀಜಿಗಳು, ಮಠಾಧೀಶರು, ವಕ್ಫ್ ಬೋರ್ಡ್ ಕೂಡ ತಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಿ, ನಮ್ಮ ಸಮುದಾಯದ ನಾಯಕರನ್ನು ಡಿಸಿಎಂ ಮಾಡಿ, ಸಚಿವ ಸ್ಥಾನ ಕೊಡಿ ಎಂದು ಬೇಡಿಕೆ ಇಟ್ಟಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾಮೀಜಿಗಳು ರಾಜಕೀಯ ಬಿಟ್ಟು ಮಠ ನೋಡಿಕೊಂಡು ಇರಬೇಕು ಎಂದು ಹೇಳಿದ್ದಾರೆ.
ಜನಗಳು ಮತ ಹಾಕಿ ಒಂದು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾರಾದರೂ ಸಿಎಂ ಆಗಲಿ, ಡಿಸಿಎಂ ಆಗಲಿ ಆದರೆ ಜನರ ಕೆಲಸ ಆಗಬೇಕು. ಮಠಾಧೀಶರು, ಧಾರ್ಮಿಕ ಮುಖಂಡರು ಈ ರೀತಿ ಜಾತಿ ರಾಜಕೀಯ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ಮುನ್ನ ಜೋಡೆತ್ತುಗಳಂತೆ ಇದ್ದ ಸಿದ್ದು ಮತ್ತು ಡಿಕೆಶಿ ಈಗ ಒಬ್ಬರ ಮುಖವನ್ನು ಒಬ್ಬರು ನೋಡದೆ ಅಂತರ ಕಾಯ್ದುಕೊಂಡಿದ್ದಾರೆ. ಇದರ ಜೊತೆಗೆ ದಲಿತ ಸಿಎಂ ಕೂಗು ಕೂಡ ಕೇಳಿಬಂದಿದೆ. ಹಲವು ಜಾತಿ ಸಂಘಟನೆಗಳು ಕೂಡ ಇಂತವರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳುತ್ತಿವೆ.
ಸಿಎಂ ಆಯ್ಕೆ ಮಾಡುವಾಗಲೇ ಇಷ್ಟು ಗೊಂದಲ ಇದ್ದರೆ, ಇನ್ನು ಸಚಿವ ಸ್ಥಾನ ಹಂಚಿಕೆ ಮಾಡುವಾಗ ಕಾಂಗ್ರೆಸ್ ಪಕ್ಷದಲ್ಲಿ ಇನ್ನೆಷ್ಟು ಅಸಮಾಧಾನ ಸ್ಫೋಟಗೊಳ್ಳಬಹುದು, ಹೀಗಾದ್ರೆ ಇವರು ಅಧಿಕಾರ ಹೆಂಗೆ ನಡೆಸ್ತಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications