Karnataka CM: ಕರ್ನಾಟಕ ಸಿಎಂ ಇವರಲ್ಲ ಇವರು: ಸುಳ್ಳಾಯ್ತು ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯ!
ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗಳಿಗೆ ರಾಜ್ಯದ ಖ್ಯಾತ ಜ್ಯೋತಿಷಿಗಳು ನುಡಿದ ಭವಿಷ್ಯ ಸದ್ಯ ಮುನ್ನೆಲೆಗೆ ಬಂದಿವೆ. ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಗೆ ಹಲವಾರು ಜ್ಯೋತಿಷಿಗಳು ಹಾಗೂ ಕೆಲ ನಾಯಕರು ಈ ಹಿಂದೆ ಭವಿಷ್ಯ ನುಡಿದಿದ್ದರು. ಅವುಗಳ ಅವಲೋಕನ ಮಾಡುವುದಾದರೆ ಕೆಲವು ಸತ್ಯವಾದರೆ ಕೆಲವು ಭವಿಷ್ಯಗಳು ಸುಳ್ಳಾಗಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ಭರದ ಪ್ರಚಾರ ಮಾಡಿದವು. ಬಿಜೆಪಿಯಿಂದ ಮೋದಿ, ಅಮಿತ್ ಶಾ, ನಡ್ಡಾ ಮುಂತಾದವರು ಪ್ರಚಾರದಲ್ಲಿ ಮೇಲಿಂದ ಮೇಲೆ ಭಾಗವಹಿಸಿದರು. ಕಾಂಗ್ರೆಸ್‌ನಿಂದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ವಾಹನಗಳು ರಾಜ್ಯದಲ್ಲಿ ಓಡಾಡದೆ ಇರಲಿಲ್ಲ. ತೆನೆ ಹೊತ್ತ ಮಹಿಳೆ ಪಕ್ಷ ಕೂಡ ಬಿಸಿಲು ಮಳೆ ಎನ್ನದೆ ಆರೋಗ್ಯ ಹಾಳಾದರೂ ಜನರ ಬಳಿ ಹೋಗಿ ಮತಯಾಚನೆ ಮಾಡಿತ್ತು.

ರಾಜ್ಯದಾದ್ಯಂತ ಸರಣಿ ಸಮಾವೇಶ, ರೋಡ್ ಶೋ, ಪ್ರಚಾರದಲ್ಲಿ ಭಾಗಿಯಾದ ಘಟಾನುಘಟಿ ನಾಯಕರಿಗೆ ಕಾಂಗ್ರೆಸ್ ಬಿಗ್ ಶಾಕ್ ಕೊಟ್ಟಿದೆ. ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೆ ಏರಲು ಕಾಂಗ್ರೆಸ್ ಸಿದ್ದವಾಗಿದೆ.
'ಬರೆದಿಟ್ಟುಕೊಳ್ಳಿ ನಾನೇ ಸಿಎಂ' ಕುಮಾರಸ್ವಾಮಿ
ಒಂದೆಡೆ 'ಬರೆದಿಟ್ಟುಕೊಳ್ಳಿ, ಮೇ ಹದಿನೆಂಟರಂದು ಮುಖ್ಯಮಂತ್ರಿಯಾಗಿ ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ' ಎನ್ನುವ ಖಚಿತ ವಿಶ್ವಾಸದ ಮಾತನ್ನು ಹೆಚ್‌ಡಿ ಕುಮಾರಸ್ವಾಮಿ ಆಡಿದ್ದರು. ಇನ್ನೊಂದು ಕಡೆ ಅವರ ತಂದೆ ದೇವೇಗೌಡ್ರು ಕೂಡಾ ನನ್ನ ಮಗನೇ ಮುಂದಿನ ಸಿಎಂ ಎಂದು ಹೇಳಿಕೊಂಡಿದ್ದರು. ಕೆಲ ಜ್ಯೋತಿಷಿಗಳೂ ಕೂಡ ಕಿಂಗ್ ಮೇಕರ್ ಹೆಚ್‌ಡಿ ಕುಮಾರ್ ಸ್ವಾಮಿ ಎಂದು ಹೇಳಿ ಭವಿಷ್ಯ ನುಡಿದ್ದಿದ್ದರು.

ಮತ್ತೊಂದು ಕಡೆ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಪಕ್ಕಾ ಎಂದು ವೈಜ್ಞಾನಿಕ ಭವಿಷ್ಯ ಮಾತ್ರವಲ್ಲದೆ, ಹಲವಾರು ಜ್ಯೋತಿಷಿಗಳು ಹೇಳಿದ್ದರು. ಆದರೆ ಅವರೆಲ್ಲರ ಹೇಳಿಕೆ ಇಂದು ಸುಳ್ಳಾಗಿದೆ. ಇಂದು ದೆಹಲಿಯಲ್ಲಿ ನಡೆದು ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಂದು ನಿರ್ಧರಿಸಲಾಗಿದೆ. ನಾಳೆ ಅಂದರೆ ಗುರುವಾರ ಮಧ್ಯಾಹ್ನ 3.30ಕ್ಕೆ ಕಂಠೀರವ ಕ್ರೀಡಾಂಗಳನದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದರೆ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಚುನಾವಣೆಗೂ ಮುನ್ನ ಖ್ಯಾತ ಜ್ಯೋಷಿಯಾದ ಡಾ. ದ್ವಾರಾಕನಾಥ್ ಗುರೂಜಿಯವರು ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, ಪ್ರಸಕ್ತ ಹೊತ್ತಿನಲ್ಲಿ ಅತ್ಯಂತ ಉತ್ತಮ ಜಾತಕ ಎನ್ನುವುದಿದ್ದರೆ ಅದು ಕುಮಾರಸ್ವಾಮಿಯವರದ್ದು. ಆದ್ರಾ ನಕ್ಷತ್ರ, ಮಿಥುನ ರಾಶಿ, ಈ ರಾಶಿಗೆ ಏಕಾದಶದಲ್ಲಿ ಗುರುವಿದ್ದಾನೆ. ಹಾಗಾಗಿ, ಅವರ ಜಾತಕ ಬಹಳ ಉತ್ತಮವಾಗಿದೆ ಎಂದು ಗುರೂಜಿಗಳು ಹೇಳಿದ್ದರು.

ಖಾಸಗಿ ವಾಹಿನಿಯ ಜೊತೆಗೆ ಮಾತನಾಡುತ್ತಿದ್ದ ಗುರೂಜಿ, ಈಗಿನ ಅವರ ರಾಶಿಫಲ ಕುಮಾರಸ್ವಾಮಿಯವರನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ರಾಹು ಉತ್ತಮ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಅವರು ತಾಳ್ಮೆಯಿಂದ ಇರಬೇಕು. ಬೇಕಾಬಿಟ್ಟಿ ನಿರ್ಧಾರ ಅಥವಾ ಹೇಳಿಕೆಯನ್ನು ನೀಡಬಾರದು ಎನ್ನುವ ಸಲಹೆಯನ್ನು ಗುರೂಜಿ ನೀಡಿದ್ದರು.
ನಿಖಿಲ್ ಬಗ್ಗೆ ಹೇಳಿದ ಭವಿಷ್ಯ ನಿಜವಾಯ್ತು...
ನಿಖಿಲ್ ಕುಮಾರಸ್ವಾಮಿ ಅವರದ್ದು ಉತ್ತರಾಷಾಢ ನಕ್ಷತ್ರ, ಆ ವೇಳೆ ಅವರ ಸಮಯ ಸರಿಯಿರಲಿಲ್ಲ. ಸ್ಪರ್ಧಿಸುವುದು ಬೇಡ ಎನ್ನುವ ಸಲಹೆಯನ್ನು ಅಂದು ನೀಡಿದ್ದೆ ಎಂದು ಗುರೂಜಿ ಹೇಳಿದ್ದಾರೆ. ಈ ಬಾರಿ ರಾಮನಗರದಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಹೀನಾಯ ಸೋಲು ಕಂಡಿದ್ದಾರೆ. ಆದರೆ ಸಿಎಂ ಸ್ಥಾನ ಮಾತ್ರ ಗುರೂಜಿ ಹೇಳಿದಂತೆ ಕುಮಾರಸ್ವಾಮಿಗೆ ದಕ್ಕಲಿಲ್ಲ.

ಇನ್ನಷ್ಟು ಹೇಳಿದ ಗುರೂಜಿ, ಮಹಿಳೆಯ ಮುಂದೆ ಕಣಕ್ಕಿಳಿಯುವುದು ಬೇಡ ಎಂದು ಹೇಳಿದ್ದೆ, ಆದರೆ ಅಷ್ಟೊತ್ತಿಗೆ ಸ್ಪರ್ಧಿಸುವ ನಿರ್ಧಾರಕ್ಕೆ ಅವರು ಬಂದಿದ್ದರು. ಮುಖ್ಯಮಂತ್ರಿಗಳ ಮಗ ಸೋಲುತ್ತಾರೆ ಎಂದು ನಾನು ಟಿವಿಯ ಮುಂದೆ ಹೇಳಲು ಸಾಧ್ಯವಾಗುವುದಿಲ್ಲ. ಉತ್ತರಾಷಾಢ ನಕ್ಷತ್ರದಲ್ಲಿ ಶನಿ ಮುಂದೆ ದಾಟಿದ್ದಾನೆ, ಆದರೆ ಅವರ ಪ್ರಭಾವ ಇನ್ನೂ ಕಮ್ಮಿಯಾಗಿಲ್ಲ. ಆದರೆ, ಬೇರೆ ನಕ್ಷತ್ರಕ್ಕೆ ಹೋಗುವ ಮುನ್ನ ಒಳ್ಳೆಯದನ್ನು ಮಾಡಿ ಶನಿ ಹೋಗುತ್ತಾನೆ ಎಂದು ಪರೋಕ್ಷವಾಗಿ ರಾಮನಗರ ಚುನಾವಣೆಯಲ್ಲೂ ಗೆಲ್ಲಲು ಪ್ರಯಾಸ ಪಡಬೇಕಾದೀತು ಎನ್ನುವ ಮುನ್ಸೂಚನೆಯನ್ನು ದ್ವಾರಕಾನಾಥ್ ಗುರೂಜಿ ನೀಡಿದ್ದರು.












Click it and Unblock the Notifications