ರಾಜ್ಯದ ಪ್ರಮುಖ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಿಎಂ ಸಭೆ: ಪ್ರಮುಖಾಂಶಗಳು
ಬೆಂಗಳೂರು, ಮೇ 1: ಕರ್ನಾಟಕದಲ್ಲಿ ಕೊರೊನಾವೈರಸ್ ಮಹಾಮಾರಿ ಮರಣ ಮೃದಂಗ ಬಾರಿಸುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ ನೂರಾರು ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಡುತ್ತಿದ್ದು, ಈ ಪೈಕಿ ಹಲವು ಸೂಕ್ತ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಲಭ್ಯವಾಗದೇ ಮೃತಪಟ್ಟಿದ್ದಾರೆ.
ಕರ್ನಾಟಕದ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ರೋಗಿಗಳಿಗೆ ಹಾಸಿಗೆ, ಆಕ್ಸಿಜನ್, ಐಸಿಯು ಬೆಡ್ ಸೇರಿದಂತೆ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಿದೆ.
ವೈದ್ಯಕೀಯ ವ್ಯವಸ್ಥೆ ಲೋಪದೋಷ ಒಂದು ಕಡೆಯಾದರೆ ಇನ್ನೊಂದು ಕಡೆ ಎರಡನೇ ದಿನವೂ ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ 40,000ದ ಗಡಿ ದಾಟಿ ಹೋಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಒಂದು ವರದಿ ಇಲ್ಲಿದೆ ಓದಿ.

Recommended Video
ಕೆ.ಆರ್ ಮಾರುಕಟ್ಟೆಯಲ್ಲಿ ಜನಜಾತ್ರೆ-ಹೂ, ಹಣ್ಣು, ತರಕಾರಿ ದಿನಸಿ ಖರೀದಿಗೆ ಮುಗಿಬಿದ್ದ ಜನ | Oneindia Kannada
ಸಿಎಂ ಮತ್ತು ಆಸ್ಪತ್ರೆ ಮುಖ್ಯಸ್ಥರ ಸಭೆ ಮುಖ್ಯಾಂಶಗಳು:* ಆಮ್ಲಜನಕ ಸಾಂದ್ರಕಗಳನ್ನು ಬಳಸಿಕೊಂಡು ಹೋಟೆಲ್ ಗಳಲ್ಲಿ ಆಮ್ಲಜನಕ ಸಹಿತ ಬೆಡ್ ಮಾದರಿಯ ಸಿದ್ಧಪಡಿಸಿ ಕೊವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದು
* ಕೇಂದ್ರೀಕೃತ ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳನ್ನು ಐಸಿಯು ಹಾಸಿಗೆಗಳನ್ನಾಗಿ ಪರಿವರ್ತಿಸಲು ಕ್ರಮ
* ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗ್ರೇಸ್ ಅಂಕಗಳನ್ನು ನೀಡಿ ಕೊವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವುದು. ಇದಕ್ಕೆ ಸಹಕಾರಿಯಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಮತ್ತು ಸೂಕ್ತ ಗೌರವಧನ ನೀಡಲು ಕ್ರಮ ಕೈಗೊಳ್ಳುವುದು
* ನರ್ಸಿಂಗ್ ಕೋರ್ಸ್, ಫಾರ್ಮಸಿ ಕೋರ್ಸ್, ಫಿಜಿಯೋಥೆರಪಿ ಕೋರ್ಸ್, ಆಯುಷ್ ವೈದ್ಯ ಕೋರ್ಸ್, ದಂತ ವೈದ್ಯಕೀಯ ಕೋರ್ಸ್ ಹಾಗೂ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೊವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವುದು
* ವಿದೇಶಗಳಲ್ಲಿ ವೈದ್ಯಕೀಯ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಕೊವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿ ಅವರನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಲು ಪರಿಶೀಲಿಸುವುದು
* ರೋಗ ಲಕ್ಷಣರಹಿತ ಸೋಂಕಿತರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದು, ಇದನ್ನು ಕಡಿಮೆಗೊಳಿಸಲು ಟ್ರಯಾಜಿಂಗ್ ಮಾಡಿ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಉಳಿದ ಲಕ್ಷಣರಹಿತ ಸೋಂಕಿತರನ್ನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿ ಚಿಕಿತ್ಸೆ ಮುಂದುವರೆಸಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಟೆಲಿ ಮೆಡಿಸಿನ್ ಸೌಲಭ್ಯ ಬಲಪಡಿಸುವುದು
* ವೈದ್ಯಕೀಯ ಕಾಲೇಜುಗಳ ಹಾಸ್ಟೇಲ್ ಸಾಮಾನ್ಯ ಹಾಸಿಗೆಗಳನ್ನು ಆಮ್ಲಜನಕ ಸಹಿತ ಹಾಸಿಗೆಗಳಾಗಿ ಪರಿವರ್ತಿಸಲು ಕ್ರಮ
* ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಅಳವಡಿಸಲು ಸರ್ಕಾರದಿಂದ ಧನ ಸಹಾಯ ನೀಡುವುದು
* ಕಡಿಮೆ ಕಾರ್ಯಭಾರವಿರುವ ವೈದ್ಯಕೀಯ ಸಿಬ್ಬಂದಿಯನ್ನು ಗುರುತಿಸಿ ಅವರುಗಳನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲು ಕ್ರಮ
* ರೆಮ್ಡೆಸಿವಿರ್ ಮತ್ತು ಆಕ್ಸಿಜನ್ ಅನಗತ್ಯವಾಗಿ ಬಳಕೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸೂಕ್ತ ಆಡಿಟ್ ವ್ಯವಸ್ಥೆ ರೂಪಿಸುವುದು
* 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಒಂದು ತಜ್ಞರ ಸಮಿತಿಯನ್ನು ರಚಿಸಲು ತೀರ್ಮಾನ
* ಕೊವಿಡ್ ಲಸಿಕೆಯನ್ನು ಹಾಕುವ ವೇಗವನ್ನು ಹೆಚ್ಚಿಸುವುದು
* ಕೊವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಈಗ ನೀಡುತ್ತಿರುವ ಗೌರವಧನವನ್ನು ಹೆಚ್ಚಿಸಲು ನಿರ್ಧಾರ
* ಕೊವಿಡ್ ಕರ್ತವ್ಯದಲ್ಲಿ ತೊಡಗಿರುವ ವೈದ್ಯರು/ವೈದ್ಯಕೀಯ ಸಿಬ್ಬಂದಿ ಸೋಂಕಿತರಾದಲ್ಲಿ ಅವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಕ್ರಮ
* ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಂಡಲ್ಲಿ ಅವರಿಗೆ ಆದ್ಯತೆಯ ಮೇಲೆ ಕೊವಿಡ್ ಲಸಿಕೆ ನೀಡಲು ಕ್ರಮ












Click it and Unblock the Notifications