ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಭಿನ್ನಮತ!
ಬೆಂಗಳೂರು: ಅಂತೂ ಇಂತೂ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಈಗ ಸಚಿವ ಸಂಪುಟ ವಿಸ್ತರಣೆ ಮಾಡಿದೆ. ಆದ್ರೆ ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದು ಇನ್‌ಸೈಡ್ ಫೈಟ್ ಶುರುವಾಗಿದೆಯಂತೆ. ಅತ್ತ ಶಾಸಕರು ತಮಗೆ ಮಂತ್ರಿಪಟ್ಟ ಸಿಗಲಿಲ್ಲ ಅಂತಾ ರೊಚ್ಚಿಗೆದ್ದರೆ, ಇತ್ತ ನೂತನ ಸಚಿವರು ತಮಗೆ ಖಾತೆ ಬದಲಾಯಿಸಿ ಅಂತಾ ಕಿರಿಕ್ ಶುರು ಮಾಡಿದ್ದಾರಂತೆ.
ಕರ್ನಾಟಕದಲ್ಲಿ 135 ಸ್ಥಾನ ಗೆಲ್ಲುವ ಮೂಲಕ ಭರ್ಜರಿಯಾಗಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್, ತಮ್ಮ ಪಕ್ಷದ ಶಾಸಕರನ್ನ ಸುಧಾರಿಸಲು ಪರದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅತ್ತ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಶಾಸಕರು ಮುನಿಸಿಕೊಂಡರೆ, ಇತ್ತ ಸಚಿವ ಸ್ಥಾನ ಸಿಕ್ಕರೂ ನಮಗೆ ಬೇಕಾದ ಖಾತೆ ಕೊಡಬೇಕು ಅಂತಾ ಈಗ ನೂತನ ಸಚಿವರು ಪಟ್ಟು ಹಿಡಿದಿದ್ದರಂತೆ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ನೂತನ ಸಚಿವರಿಗೆ ಕಾಲ್ ಮಾಡಿ, ಕೊಟ್ಟಿರುವ ಖಾತೆಯನ್ನ ಒಪ್ಪಿಕೊಳ್ಳಿ ಅಂತಿದ್ದಾರೆ ಎನ್ನಲಾಗಿದೆ.

135 ಸ್ಥಾನ ಬಂದರೂ ತಳಮಳ!
ಹೌದು, ಕಾಂಗ್ರೆಸ್ ಈ ಬಾರಿ ಭರ್ಜರಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿದ್ದರೂ ತಳಮಳ ಮಾತ್ರ ಈ ಹೊತ್ತಿನ ತನಕ ತಣ್ಣಗಾಗಿಲ್ಲ. ಏಕೆಂದರೆ ಮುಂದೆ ಏನಾಗುತ್ತೋ ಎಂಬ ಭಯ ಪಕ್ಷದ ಒಳಗೆ ಕಾಡತೊಡಗಿದೆ. 135 ಶಾಸಕರನ್ನ ಸುಧಾರಿಸುವುದು ದೊಡ್ಡ ಸವಾಲಾಗುವ ಸಾಧ್ಯತೆ ಕೂಡ ದಟ್ಟವಾಗಿದೆ. ಅದರಲ್ಲೂ ಹಿರಿಯ ನಾಯಕರನ್ನೇ ಈ ಬಾರಿ ಸಚಿವ ಸಂಪುಟದಿಂದ ಹೊರಗಿಟ್ಟು ಸಂಪುಟ ವಿಸ್ತರಣೆ ಮಾಡಿರುವುದು ಭವಿಷ್ಯದಲ್ಲಿ ದೊಡ್ಡ ಹಿನ್ನಡೆ ತರುವ ಮುನ್ಸೂಚನೆ ನೀಡುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಹೊಸ ಅಸ್ತ್ರ ರೆಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಕಾಲ್ ಮಾಡಿದ್ದು ಯಾಕೆ?
ಪರಿಸ್ಥಿತಿಯನ್ನ ಪರೋಕ್ಷವಾಗಿ ನಿಭಾಯಿಸಲು ಮೊದಲು ಪ್ರಯತ್ನಿಸಿದ್ದರು ಸಿದ್ದರಾಮಯ್ಯ. ಆದರೆ ಅದ್ಯಾಕೋ ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಖುದ್ದಾಗಿ ಅಖಾಡಕ್ಕೆ ಇಳಿದು, ಪರಿಸ್ಥಿತಿ ಸರಿಪಡಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ನೂತನ ಸಚಿವರಿಗೆ ಕೊಟ್ಟಿರುವ ಖಾತೆ ಒಪ್ಪಿಕೊಳ್ಳುವಂತೆ ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೂ ಕೆಲ ಸಚಿವರು ತಮಗೆ ಸೂಕ್ತ ಖಾತೆ ಸಿಕ್ಕಿಲ್ಲ ಅಂತಾ ಕಿರಿಕ್ ಮುಂದುವರಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಸಿದ್ದರಾಮಯ್ಯ ನೂತನ ಸಚಿವರಿಗೆ ತಿಳಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಸರ್ಕಾರದ ನೂತನ ಸಚಿವರು
ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ, ಚೆಲುವರಾಯಸ್ವಾಮಿ, ಕೆ.ವೆಂಕಟೇಶ್, ಡಾ.ಹೆಚ್.ಸಿ.ಮಹದೇವಪ್ಪ ಈಶ್ವರ್ ಖಂಡ್ರೆ, ಕೆ.ಎನ್.ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ ಹಾಗೂ ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ್, ಎಸ್.ಎಸ್.ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್, ಮಾಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಂ ಖಾನ್, ಡಾ.ಡಿ.ಸುಧಾಕರ್, ಸಂತೋಷ್ ಲಾಡ್, ಎನ್.ಎಸ್.ಬೋಸರಾಜು, ಬಿ.ಎಸ್.ಸುರೇಶ್, ಸಾರೇಕೊಪ್ಪ ಮಧು ಬಂಗಾರಪ್ಪ, ಎಂ.ಸಿ.ಸುಧಾಕರ್ ಹಾಗೂ ಬಿ.ನಾಗೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಒಟ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿದಿದ್ದರೂ ಕರ್ನಾಟಕದ ನೂತನ ಸರ್ಕಾರದಲ್ಲಿ ಭಿನ್ನಮತದ ಹೊಗೆ ಆಡುತ್ತಿದೆ. ಇದು ಪ್ರತಿಯೊಂದು ಸರ್ಕಾರದಲ್ಲೂ ಇದ್ದಿದ್ದೇ ಅಂತಾ ಕೆಲ ಕಾಂಗ್ರೆಸ್ ನಾಯಕರು ಇದರ ಬಗ್ಗೆ ಸಮರ್ಥನೆ ನೀಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಪರಿಸ್ಥಿತಿ ಸುಧಾರಿಸಲು, ಭಿನ್ನಮತಕ್ಕೆ ಅಂತ್ಯ ಹಾಡಲು ಖುದ್ದಾಗಿ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಈ ಪ್ರಯತ್ನಗಳು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications