Cabinet Meeting: ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ದಿಢೀರ್ ರದ್ದು, ಹಾಗಾದ್ರೆ ಮತ್ತೆಲ್ಲಿ?
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ದಿಢೀರ್ ರದ್ದು ಮಾಡಲಾಗಿದೆ. ಕಾರಣಾಂತರಗಳಿಂದ ಸಚಿವ ಸಂಪುಟ ಸಭೆಯನ್ನು ರದ್ದು ಮಾಡಲಾಗಿದ್ದು, ಈ ಸಭೆಯನ್ನು ಬೇರೆ ಸ್ಥಳದಲ್ಲಿ ಆಯೋಜಿಸಲು ಮುಂದಾಗಿದೆ.
ಈ ಹಿಂದೆ ಮಲೆ ಮಹದೇಶ್ವರ ಬೆಟ್ಟದಲ್ಲೇ ಸಚಿವ ಸಂಪುಟ ಸಭೆ ನಡೆಯಲು ಎಲ್ಲ ತಯಾರಿ ನಡೆದಿತ್ತು. ಸರ್ಕಾರ ಕೂಡ ಅಲ್ಲಿಯೇ ಸಭೆ ನಡೆಸುವ ಹುರುಪಿನಲ್ಲಿತ್ತು. ನಿನ್ನೆವರೆಗೂ ಬಹುತೇಕ ಮಲೆ ಮಹದೇಶ್ವರ ಬೆಟ್ಟದಲ್ಲೇ ಸಭೆ ನಡೆಯುವ ಬಗ್ಗೆ ಮಾತುಕತೆಗಳು ಜೋರಾಗಿ ನಡೆದಿದ್ದವು. ಆದರೆ, ಇದ್ದಕ್ಕಿದ್ದಂತೆ ಅಲ್ಲಿ ಸಭೆ ರದ್ದು ಮಾಡಲಾಗಿದೆ.

ಮಲೆ ಮಹದೇಶ್ವರ ಬೆಟ್ಟದ ಬದಲಿಗೆ ಬೆಂಗಳೂರಿನ ಸಮೀಪದಲ್ಲೇ ಸಚಿವ ಸಂಪುಟ ಸಭೆ ನಡೆಸಲು ಪ್ಲ್ಯಾನ್ ಶಿಫ್ಟ್ ಮಾಡಿದೆ. ಅದರಂತೆ ಪ್ರೇಮಿಗಳ ಸ್ವರ್ಗ ಎಂದೇ ಕರೆಯಲ್ಪಡುವ ಬೆಂಗಳೂರಿಗೆ ಹತ್ತಿರವಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ (Nandi Hills) ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಲು ಹಲವು ತೊಡಕುಗಳು ಇರುವ ಕಾರಣದಿಂದ ದಿಢೀರ್ ಸ್ಥಳ ಬದಲಾವಣೆ ಮಾಡಿರುವುದಾಗಿ ತಿಳಿದುಬಂದಿದೆ. ಹಾಗಾಗಿ ಬಹುತೇಕ ಈ ಸಭೆಯು ನಂದಿ ಬೆಟ್ಟದಲ್ಲೇ ನಡೆಯಲಿದೆಯಂತೆ.

ಬೆಂಗಳೂರಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಸುಮಾರು 4.5 ಗಂಟೆಯಷ್ಟು ಪ್ರಯಾಣದ ಅವಧಿ ಇದೆ. ಮತ್ತೊಂದೆಡೆ ಇಲ್ಲಿ ಕಳಪೆ ರಸ್ತೆ ಕೂಡ ಇರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಅಲ್ಲಿ ನಡೆಯಬೇಕಿದ್ದ ಸಂಪುಟ ಸಭೆಯನ್ನು ದಿಢೀರನೆ ನಂದಿಬೆಟ್ಟಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಸದ್ಯಕ್ಕೆ ಮಾತ್ರವೇ ಸಚಿವ ಸಂಪುಟ ಸಭೆಯನ್ನು ಚಾಮರಾಜನಗರದಿಂದ ಶಿಫ್ಟ್ ಮಾಡಿದ್ದು, ಮುಂದಿನ ಬಾರಿ ಮಲೆಮಹದೇಶ್ವರ ಬೆಟ್ಟದಲ್ಲೇ ಸಭೆ ನಡೆಯಲು ಸಹ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.
ಚಾಮರಾಜನಗರದ ಬಗ್ಗೆ ರಾಜಕೀಯವಾಗಿ ಹಲವು ಮಿತ್ಯಗಳಿವೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಸಿಎಂ ಕುರ್ಚಿ ಕಳೆದುಕೊಳ್ತಾರೆ ಎನ್ನುವ ಗಾಳಿಮಾತು ಕೂಡ ಇತ್ತು. ಇದಕ್ಕೆ ಸೆಡ್ಡು ಹೊಡೆದಿದ್ದ ಸಿಎಂ ಸಿದ್ದರಾಮಯ್ಯ ಅವರು ಹಲವು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಈ ಹಿಂದೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಚಾಮರಾಜನಗರ ಜಿಲ್ಲೆಯಲ್ಲಿ ಮಿನಿ ಸಚಿವ ಸಂಪುಟ ಸಭೆ ನಡೆದಿತ್ತು. ಇಲ್ಲಿನ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮಿನಿ ಸಂಪುಟ ಸಭೆ ನಡೆದಿತ್ತು.
ಅದರಂತೆ ಫೆಬ್ರವರಿ 15ರಂದು ಮಲೆಮಹದೇಶ್ವರ ಬೆಟ್ಟ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಇದೀಗ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಪ್ರವಾಸಿಗರ ಸ್ವರ್ಗ ನಂದಿ ಬೆಟ್ಟದಲ್ಲೇ ಸಚಿವ ಸಂಪುಟ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಕೇವಲ ಒಂದು ಗಂಟೆಯೊಳಗೆ ನಂದಿಬೆಟ್ಟಕ್ಕೆ ಪ್ರಯಾಣ ಮಾಡಬಹುದಾದ ಕಾರಣ ಈ ಬಾರಿಯೇ ಇಲ್ಲಿಯೇ ಸಭೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಲಿದೆ ಎಂದು ಹೇಳಲಾಗುತ್ತಿದೆ. ಈ ದಿಢೀರ್ ಬೆಳವಣಿಗೆಯ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications