
ಬಿಎಸ್ ಯಡಿಯೂರಪ್ಪ ದೆಹಲಿ ಭೇಟಿ: ಚುನಾವಣೆ ಸಂಪುಟದ ಮಹತ್ವದ ಚರ್ಚೆ!
ಬೆಂಗಳೂರು, ಆಗಸ್ಟ್ 26: ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದ್ದರು ಪಕ್ಷದಲ್ಲಿ ಚಾರ್ಮ್ ಕಂಡುಬರುತ್ತಿಲ್ಲ. ಬಿಜೆಪಿ ಪಾಲಿಗೆ ಚುನಾವಣೆ ಎಂದರೆ ರಣೋತ್ಸಾಹ ತುಂಬಿ ಬರುತ್ತೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದೆ. ಬಿಬಿಎಂಪಿ ಚುನಾವಣೆ ಮುಗಿದ ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಎದುರಾಗಲಿದೆ. ಇದಕ್ಕಾಗಿ ಚುನಾವಣಾ ಸಂಪುಟ ರಚನೆ ವಿಚಾರ ದಟ್ಟವಾಗುತ್ತಿದೆ. ಯಡಿಯೂರಪ್ಪ ದೆಹಲಿ ಯಾತ್ರೆಯಲ್ಲಿ ನಿರ್ಧಾರವಾಗಲಿದೆ ಸಂಪುಟದ ಹಣೆಬರಹ ಎನ್ನಲಾಗುತ್ತದೆ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಸ್ಥಾನವನ್ನು ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪರ ತಾಕತ್ತು ಹೈಕಮಾಂಡ್‌ಗೆ ಚನ್ನಾಗಿಯೇ ತಿಳಿದಿದೆ. ವಯಸ್ಸಿನ ಕಾರಣದಿಂದ ಯಡಿಯೂರಪ್ಪರನ್ನು ಕೆಳಗಿಳಿಸಿದಾಗ ಅವರು ಸೂಚಿಸಿದ ಬೊಮ್ಮಾಯಿಯನ್ನೇ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಲಾಯ್ತು. ಚುನಾವಣೆಯಲ್ಲಿ ಯಡಿಯೂರಪ್ಪರನ್ನು ಸಮರ್ಥವಾಗಿ ಬಳಸಿಕೊಳ್ಳಲು ಪಕ್ಷದಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿದೆ.
ಬಿಎಸ್ ಯಡಿಯೂರಪ್ಪ ದೆಹಲಿಯ ಪ್ರವಾಸದಲ್ಲಿ ಬಿಜೆಪಿಯ ಹೈಕಮಾಂಡ್‌ರನ್ನು ಭೇಟಿಯಾಗಿ ರಾಜ್ಯಾಧ್ಯಕ್ಷ ಹುದ್ದೆ, ರಾಜ್ಯದಲ್ಲಿ ಖಾಲಿ ಇರುವ ಐದು ಸಚಿವ ಸ್ಥಾನಗಳ ಭರ್ತಿ ಸಂಬಂದವೂ ಚರ್ಚಿಸಲಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯಡಿಯೂರಪ್ಪ ಕೆಲ ಹೆಸರುಗಳನ್ನು ಸೂಚಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಹೊಸ ಸಾರಥಿಗೆ ರಾಜಹುಲಿ ಬೆಂಬಲ
ಬಿಜೆಪಿ ಹೈಕಮಾಂಡ್ ರಾಜಹುಲಿ ಬಿಎಸ್‌ವೈ ರನ್ನು ಎದುರಾಕಿಕೊಂಡು ಯಾವುದೇ ಮಹತ್ವದ ತೀರ್ಮಾನವನ್ನು ಕೈಗೊಳ್ಳವು ಸ್ಥಿತಿಯಲ್ಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೂರು ವರ್ಷದ ಅವಧಿ ಮುಕ್ತಾಯವಾಗುತ್ತಿದೆ. ಇದರಿಂದ ಬಿಎಸ್‌ವೈ ಮತ್ತು ಹೈಕಮಾಂಡ್ ಜೊತೆ ಸಮನ್ವಯ ಸಾಧಿಸುವ ವ್ಯಕ್ತಿಯನ್ನು ಆರ್‍ಎಸ್‌ಎಸ್ ಸಹ ಒಪ್ಪಬಹುದಾದ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸಲು ಹೈಕಮಾಂಡ್ ಸಜ್ಜಾಗಿದೆ. ರಾಜ್ಯಧ್ಯಕ್ಷ ಹುದ್ದೆ ಒಕ್ಕಲಿಗರಾದ ಸಿಟಿ ರವಿ, ಶೋಭಾ ಕರಂದ್ಲಾಜೆ ಹೆಸರು ಮುಂಜೂಣಿಯಲ್ಲಿ ಕೇಳಿಬರುತ್ತಿದೆ. ಇನ್ನು ಆರ್‍ಆಸ್‌ಎಸ್ ಅಂಗಳದಲ್ಲಿ ದಲಿತ ಅರವಿಂದ ಲಿಂಬಾವಳಿ ಹೆಸರು ಕೇಳಿಬರುತ್ತಿದೆ. ಇದರಿಂದಾಗಿ ರಾಜಹುಲಿ ಬಿಎಸ್‌ವೈ ಯಾರ ಹೆಸರನ್ನು ಸೂಚಿಸುತ್ತಾರೆ. ಆ ಹೆಸರಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಗಳಿದ್ದೂ ಹೈಕಮಾಂಡ್ ಮತ್ತು ಬಿಎಸ್‌ವೈ, ಬಿಎಲ್ ಸಂತೋಷ್ ಜೊತೆಗೆ ಸಮನ್ವಯ ಸಾಧಿಸುವ ವ್ಯಕ್ತಿಯೇ ನೂತನ ರಾಜ್ಯಾಧ್ಯಕ್ಷ ಹುದ್ದೆ ಒಲಿಯುವ ಸಾಧ್ಯತೆಗಳಿವೆ.

ಹೈಕಮಾಂಡ್ ಅಂಗಳದಲ್ಲಿ ಚುನಾವಣೆ ಸಂಪುಟ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲೆ ಹಲವು ಆರೋಪ , ಹಗರಣ, 40% ಕಮೀಷನ್ ಆರೋಪ ಸೇರಿದಂತೆ ಹಲವು ವಿಚಾರದಲ್ಲಿ ಹೈಕಮಾಂಡ್ ಗರಂ ಆಗಿತ್ತು. ಆಡಳಿತಕ್ಕೆ ಚುರಕನ್ನು ನೀಡಲು ತೀರ್ಮಾನವನ್ನು ಮಾಡಿದೆ. ಆದರೆ ಇದೇ ವೇಳೆಯಲ್ಲಿ ಬೊಮ್ಮಾಯಿಯನ್ನು ಬದಲಾಯಿಸಿದರೇ ಲಿಂಗಾಯಿತ ಸಮುದಾಯದಲ್ಲಿ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ಅನ್ನೋ ಮಾತು ಸತ್ಯವಾಗಲಿದೆ. ಇದಕ್ಕಾಗಿಯೇ ಬೊಮ್ಮಾಯಿಯನ್ನು ಮುಂದಿಟ್ಟುಕೊಂಡೇ ಬಿಎಸ್‌ವೈರನ್ನು ಸಂಪೂರ್ಣವಾಗಿ ಚುನಾವಣೆಗೆ ಬಳಸಿಕೊಂಡು ಸಂಪುಟ ಭರ್ತಿ ಮಾಡುವಾಗ ಮತ್ತು ಕೆಲವು ಹಿರಿಯ ಮುಖಂಡರಿಗೆ ಕೊಕ್ ಕೊಟ್ಟು ಚುನಾವಣೆ ಸಂಪುಟ ರಚಿಸಲು ಹೈಕಮಾಂಡ್ ಸಿದ್ದವಾಗಿದೆ. ಬಿಎಸ್‌ವೈ ಸಹ ಈ ಸಂಬಂಧ ಹೈಕಮಾಂಡ್ ಜೊತೆಯಲ್ಲಿ ಮಹತ್ವದ ಮಾತುಕತೆಯನ್ನು ನಡೆಸಲಿದ್ದಾರೆ.

ಸಚಿವರ ತವರು ಜಿಲ್ಲೆಗೆ ಉಸ್ತುವಾರಿ ನೇಮಕ?
ರಾಜ್ಯ ಸಚಿವ ಸಂಪುಟದಲ್ಲಿರುವ ಬಹುತೇಕ ಸಚಿವರಿಗೆ ಸ್ವಂತ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಇದರಿಂದಾಗಿ ಸಚಿವರಿಗೆ ತವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಮಾಡಲು ಮತ್ತು ಅಭಿವೃದ್ದಿ ಕಾರ್ಯಕ್ರಮಕ್ಕೆ ಹಿನ್ನೆಡೆಯಾಗುತ್ತಿದೆ. ಆಯಾ ಜಿಲ್ಲೆಯ ಸಚಿವರಿಗೆ ತವರು ಜಿಲ್ಲೆಗೆ ಉಸ್ತುವಾರಿಯನ್ನು ನೀಡಿದರೇ ಚುನಾವಣಾ ವರ್ಷದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಿದೆ ಎಂಬ ಚಿಂತನೆಯನ್ನು ಹೈಕಮಾಡ್ ನಡೆಸಿದೆ. ಬಿಜೆಪಿ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವುದರಿಂದ ಬೆಂಗಳೂರಿನ ಸಚಿವರೊಬ್ಬರಿಗೆ ಬೆಂಗಳೂರು ಉಸ್ತುವಾರಿ ನೀಡುವಂತೆ ಸಹ ಕೇಳಿಕೊಳ್ಳಲಾಗಿತ್ತು.

ಬಿಎಸ್ ಯಡಿಯೂರಪ್ಪ, ಬಿಎಲ್ ಸಂತೋಷ್ ಆಟ
ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ನರೇಂದ್ರ ಮೋದಿ , ಅಮಿತ್ ಶಾ ಹೇಗೆ ಬಿಗ್ ಬಾಸ್‌ಗಳಾಗಿದ್ದರೇಯೋ ಹಾಗಯೇ ಕರ್ನಾಟಕ ಬಿಜೆಪಿ ಪಾಲಿಗೆ ಇಬ್ಬರು ಬಿಗ್ ಬಾಸ್‌ಗಳಿದ್ದಾರೆ. ಬಿಎಸ್ ಯಡಿಯೂರಪ್ಪ, ಬಿಎಲ್ ಸಂತೋಷ್. ಇಬ್ಬರು ಹೈಕಮಾಂಡ್ ಮಟ್ಟದಲ್ಲಿ ಮತ್ತು ರಾಜ್ಯದಲ್ಲಿ ತಮ್ಮದೇ ಹಿಡಿತವನ್ನು ಹೊಂದಿದ್ದಾರೆ. ರಾಜಹುಲಿಗೆ ವಯಸ್ಸಾಗಿದ್ದರು ಸಂಘಟನಾ ಚಾತುರ್ಯತೆ ಕುಂದಿಲ್ಲ. ಪ್ರಲ್ಹಾದ್ ಜೋಶಿ ಮತ್ತು ಬಿಎಲ್ ಸಂತೋಷ್ ದೊಡ್ಡ ಸ್ಥಾನದ ನಿರೀಕ್ಷೆಯನ್ನು ಹೊಂದಿದ್ದರು ಆ ಆಸೆ ಸದ್ಯಕ್ಕಂತೂ ಈಡೇರುವುದಿಲ್ಲ. ಇದಕ್ಕಾಗಿಯೇ ಪ್ರತ್ಯೇಕವಾಗಿ ಎಲ್ಲರೊಂದಿಗೆ ಚರ್ಚಿಸಿ ಬಿಜೆಪಿ ಹೈಕಮಾಂಡ್ ಕರ್ನಾಟಕ ಬಿಜೆಪಿ , ಬೊಮ್ಮಾಯಿ ಸರ್ಕಾರದಲ್ಲಿ ಒಂದಷ್ಟು ಮಹತ್ವದ ಬದಲಾವಣೆ ಮಾಡಲಿದೆ. ಬಿಎಸ್ ಯಡಿಯೂರಪ್ಪ ದೆಹಲಿಯಲ್ಲಿ ಯಾವೆಲ್ಲಾ ಚುನಾವಣೆಗಾಗಿ ಯಾವೆಲ್ಲಾ ಮಾಹಿತಿ ನೀಡಿಬರತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.