KKRTC: ಕಲ್ಯಾಣ ಕರ್ನಾಟಕಕ್ಕೆ ಗುಡ್ನ್ಯೂಸ್: 400 ಹೊಸ ಬಸ್ ಖರೀದಿಗೆ ಸರ್ಕಾರ ಒಪ್ಪಿಗೆ, ಸಾರಿಗೆಗೆ ಬಲ
ಬೆಂಗಳೂರು: ಕರ್ನಾಟಕದಲ್ಲಿ ವಿಧಾನಮಂಡಲ (ಮುಂಗಾರು) ಅಧಿವೇಶನ ಆರಂಭವಾಗಿದ್ದು, ಎರಡನೇ ದಿನವೇ ಕಲ್ಯಾಣ ಕರ್ನಾಟಕ ಭಾಗದ ಸುಮಾರು 8 ಜಿಲ್ಲೆಗಳ ಸಾರ್ವಜನಿಕರಿಗೆ ಕಾಂಗ್ರೆಸ್ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟವು 400 ಹೊಸ ಬಸ್ಗಳ ಖರೀದಿಗೆ ಅನುಮೋದನೆ ನೀಡುವ ಮೂಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಗೆ ಬಲ ನೀಡಲು ಸಜ್ಜಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣದಿಂದ ಹಿಡಿದು ನಗರ ಸಾರಿಗೆ, ಅಂತರ್ ಜಿಲ್ಲಾ ಸಾರಿಗೆ ಸಂಪರ್ಕ ಕ್ರಾಂತಿಗಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಬರೋಬ್ಬರಿ 152 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 400 ಹೊಸ ಬಸ್ಗಳ ಖರೀದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸಾಮಾಜಿಕ ಜಾಲತಾಣ 'ಎಕ್ಸ್' ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗಗಳ ಜನರಿಗೆ ಹೆಚ್ಚಿನ ಹಾಗೂ ಸುಗಮ ಸಾರಿಗೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳ ಸಂಪರ್ಕ ಸುಧಾರಣೆ
KKRTC ಗೆ ಹೊಸ ಬಸ್ಗಳ ಸೇರ್ಪಡೆಯಿಂದ ಗ್ರಾಮೀಣ ಪ್ರದೇಶಗಳ ಸಾರಿಗೆ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ರೈತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ 'ಶಕ್ತಿ ಯೋಜನೆ' ಫಲಾನುಭವಿಗಳಾದ ಎಲ್ಲ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ದೈನಂದಿನ ಪ್ರಯಾಣವು ಶೀಘ್ರವೇ ಮತ್ತಷ್ಟು ಸುಗಮವಾಗಲಿದೆ. ನಗರ, ಅಂತರ ಜಿಲ್ಲಾ ಮತ್ತು ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಚಿವರು ವಿವರಿಸಿದರು.
ಕಲ್ಯಾಣ ಕರ್ನಾಟಕದ ಪ್ರತಿಯೊಂದು ಗ್ರಾಮವೂ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಬೇಕು ಎಂಬ ಆಶಯ ಕಾಂಗ್ರೆಸ್ ಸರ್ಕಾರ ಹೊಂದಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದು ಗ್ಯಾರಂಟಿ ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.
ಯಾವೆಲ್ಲ ಜಿಲ್ಲೆಗಳಿಗೆ ಅನುಕೂಲ?
ಉತ್ತಮ ರೈಲು ಸೇವೆ ಇಲ್ಲ, ಹೆಚ್ಚುವರಿ ರೈಲುಗಳನ್ನು ಬಿಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಈ ಮಾರ್ಗದಲ್ಲಿ ರೈಲುಗಳಿಲ್ಲ, ಕಲಬುರಗಿ ಮತ್ತು ಬೀದರ್ ನಿಂದ ಇತರ ಭಾಗಗಳಿಗೆ ಬಸ್ ಸೇವೆ ಇಲ್ಲ ಎಂದು ಸದಾ ಆಕ್ರೋಶ ಹೊರ ಹಾಕುತ್ತಿದ್ದ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಎಲ್ಲ ಜಿಲ್ಲೆಗಳಿಗೂ ಸರ್ಕಾರದ ಈ ಹೊಸ ಬಸ್ ಖರೀದಿ ನಿರ್ಧಾರದಿಂದ ಸಹಾಯವಾಗಲಿದೆ.
ಈ ಭಾಗದ ಬೀದರ್, ಕಲಬುರಗಿ, ಕೊಪ್ಪಳ, ವಿಜಯನಗರ, ಬಳ್ಳಾರಿ, ಯಾದಗಿರಿ, ರಾಯಚೂರು ಸೇರಿ ಒಟ್ಟು ಎಂದು ಜಿಲ್ಲೆಗಳ ಸಾರ್ವಜನಿಕರಿಗೆ ಹೊಸ ಬಸ್ಗಳು ಸೇರ್ಪಡೆಯಾದರೆ ಸಂಚಾರ ಅನುಕೂಲವಾಗಲಿದೆ. ಹೊಸ ಬಸ್ಗಳು ಕೇವಲ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರವೇ ಸೀಮಿತವಾದೇ, ಅಲ್ಲಿಂದ ಬೆಂಗಳೂರು, ಹುಬ್ಬಳ್ಳಿಯಂತಹ ದೂರದ ಮಾರ್ಗಗಳಲ್ಲೂ ಓಡಿಸುವ ಚಿಂತನೆ ಸರ್ಕಾರಕ್ಕೆ ಇದೆ ಎನ್ನಲಾಗಿದೆ. ಹೊಸ್ ಬಸ್ಗಳು ಖರೀದಿ ಬಳಿಕ ಮಾರ್ಗಗಳ ಕುರಿತು ಸಾರಿಗೆ ಇಲಾಖೆ ಸಚಿವರು, ಅಧಿಕಾರಿಗಳು ತೀರ್ಮಾನಿಸಲಿದ್ದಾರೆ.


Click it and Unblock the Notifications
