ಉತ್ತರ ಕರ್ನಾಕದಲ್ಲಿ ನಾನೇ ಪಕ್ಷ ಕಟ್ಟುತ್ತೇನೆ: ದೇವೇಗೌಡ
ನವದೆಹಲಿ, ನ.2: ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಮೂಲೆಗುಂಪಾಗಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದು ವಾರಕ್ಕೂ ಹೆಚ್ಚು ಕಾಲ ಸಿಂದಗಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದರು ಆದರೂ ಸಹ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4321 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದು, ಜೆಡಿಎಸ್‌ಗೆ ಮುಖಂಭಂಗವಾಗಿದೆ.
ಠೇವಣಿ ಕಳೆದುಕೊಂಡ ಜೆಡಿಎಸ್: ಎಚ್‌ಡಿಕೆ ಮಹತ್ವದ ಹೇಳಿಕೆ
ಫಲಿತಾಂಶದಿಂದ ಧೃತಿಗೆಟ್ಟಿಲ್ಲ
"ಈ ಉಪಚುನಾವಣೆ ಫಲಿತಾಂಶದಿಂದ ಧೃತಿಗೆಟ್ಟಿಲ್ಲ. ದೇವೆಗೌಡ ಇನ್ನು ಜೀವಂತ ಬದುಕಿದ್ದಾನೆ. 89 ವರ್ಷ ಆಗಿದ್ದರೂ ಹೋರಾಟ ಮಾಡುತ್ತೇನೆ ನಮ್ಮ ಪಕ್ಷದಲ್ಲಿ ನಾಯಕರಿದ್ದಾರೆ, ಹೋರಾಡುತ್ತೇವೆ'' ಎಂಬ ಸಂದೇಶವನ್ನು ಎಚ್.ಡಿ. ದೇವೇಗೌಡ ನೀಡಿದ್ದಾರೆ.
ಇದುವರೆಗೂ ನಾನು ಉಪಚುನಾವಣೆ ಪ್ರಚಾರ ಮಾಡಿರಲಿಲ್ಲ. ಆದರೆ, ಸಿಂದಗಿ ಉಪಚುನಾವಣೆ ಹೋಗಿದ್ದೆ. ಸಿಂದಗಿ ಜನರು ಹಿಂದೆ ಬಹಳ ಕಷ್ಟದಲ್ಲಿದ್ದರು, ಇಲ್ಲಿ ಕೆಲಸ ಸಿಗದೆ ಕೂಲಿಗೆ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು. ನಾನು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಈ ಭಾಗದ ನೀರಾರವರಿಗೆ ಹೆಚ್ಚಿನ ಪ್ರಶಾಸ್ತ್‌ಯ ನೀಡಿದ್ದೆ. ಸಿಂದಗಿಯಲ್ಲಿ ಹಸಿರು ತುಂಬಿದೆ, ಅಭಿವೃದ್ಧಿಯಾಗಿದೆ. ವಿಜಯಪುರ, ಬಾಗಲಕೋಟೆ ಪ್ರದೇಶದಲ್ಲಿ 20 ಸಕ್ಕರೆ ಕಾರ್ಖಾನೆ ಕೊಟ್ಟಿದ್ದೇನೆ. ಇದಕ್ಕೆ ಯಾರು ಕಾರಣ? ಎಂದು ಪ್ರಶ್ನಿಸಿದರು.
ಈ ಬಾರಿಯ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ಸಿಂದಗಿಯಲ್ಲಿ ಅಂಗಡಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ ಸಿಂದಗಿಯಲ್ಲಿ ಹಿಂದು ಮುಸ್ಲಿಂ ಎಂಬ ಭೇದ ಇಲ್ಲ ಹಾಗಾಗಿ ನಾವು ಅಂಗಡಿ ಫ್ಯಾಮಿಲಿಗೆ ಟಿಕೆಟ್ ಕೊಟ್ಟೆವು. ಫಲಿತಾಂಶ ಬಂದಾಗ ಅವರು ಮೂರನೆ ಸ್ಥಾನಕ್ಕೆ ಹೋಗಿದ್ದಾರೆ ಎಂದು ತಮ್ಮ ಅಭ್ಯರ್ಥಿಯನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಹಣ ಹಂಚುವ ಕೆಲಸವನ್ನು ಚೆನ್ನಾಗಿ ಮಾಡಿವೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದರು. ಉಪಚುನಾವಣೆಯಲ್ಲಿ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ, ಸಾರ್ವರ್ತಿಕ ಚುನಾವಣೆಯಲ್ಲಿ ಇಷ್ಟು ಹಣ ಸುರಿಯುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
"ಎಂ.ಸಿ. ಮನಗೊಳಿಯವರು ಸಮಾಜವಾದಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಸೋತಿದ್ದರು. ಮತ್ತೆ ನಮ್ಮ ಪಕ್ಷಕ್ಕೆ ಬಂದು ಗೆದ್ದರು. ಅವರನ್ನು 2 ಬಾರಿ ಮಂತ್ರಿ ಕೂಡ ಮಾಡಿದ್ದೆವು. ಆದರೆ ಈಗ ಅವರ ಮಗ ಕಾಂಗ್ರೆಸ್ ಗೆ ಹೋಗಿದ್ದನ್ನು ನಾನು ಚರ್ಚೆ ಮಾಡಲ್ಲ. ಅಲ್ಲಿನ ಜನತೆ ಮನಗೂಳಿ ಹಾಗೂ ನನ್ನ ಪ್ರತಿಮೆ ಮಾಡಿದ್ದಾರೆ ಆ ಕಾರ್ಯಕ್ರಮಕ್ಕೂ ಸಹ ನಾನು ಹೋಗಿದ್ದೆ. ಕಾಂಗ್ರೆಸ್ ಪಕ್ಷ ನಮ್ಮ ಅಭ್ಯರ್ಥಿ ಆಗಬೇಕಾಗಿದ್ದವರನ್ನು ಕರೆದುಕೊಂಟು ಹೋಗಿ ಎಷ್ಟು ಮತ ಪಡೆದಿದೆ?'' ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದಲ್ಲಿ ನಾನೇ ಪಕ್ಷ ಕಟ್ಟುತ್ತೇನೆ:
"ಮುಂದಿನ ಚುನಾವಣೆಗೆ ನಾನೇ ಪ್ರವಾಸ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗದಲ್ಲಿಯೇ ಹೆಚ್ಚಿನ ಪ್ರವಾಸ ಮಾಡುತ್ತೇನೆ. ಒಂದು ತಿಂಗಳಲ್ಲಿ ಎರಡು ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ" ಎಂದು ದೇವೇಗೌಡರು ಹೇಳಿದರು.
ದಕ್ಷಿಣ ಕರ್ನಾಟಕದ ಜಿಲ್ಲೆಗಳನ್ನು ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಾನೇ ಓಡಾಡಿ ಮತ್ತೆ ಪಕ್ಷ ಕಟ್ಟುತ್ತೇನೆ. ಜಿಲ್ಲಾವಾರು ಭೇಟಿ ಬಳಿಕ ನಾನೇ ಅಭ್ಯರ್ಥಿಗಳನ್ನೂ ಆಯ್ಕೆ ಮಾಡುತ್ತೇನೆ. ಎಲ್ಲಾ ಮುಖಂಡರು ಸೇರಿ ಒಟ್ಟಾಗಿ ಹೋರಾಡುತ್ತೇವೆ. ಚುನಾವಣೆಯ ಸೋಲು ಗೆಲುವುಗಳಿಂದ ನಾವು ಧೃತಿಗೆಡುವುದಿಲ್ಲ. ಬರೀ ಕಾಂಗ್ರೆಸ್ ,ಬಿಜೆಪಿ ಆದ್ರೆ ನಾವೇನು ಮನೆಗೆ ಹೋಗಬೇಕಾ..? ಎಂದು ಪ್ರಶ್ನಿಸಿದರು.