Karnataka By Election Results 2024: ಉಪಚುನಾವಣೆ ಫಲಿತಾಂಶ ರಾಜ್ಯಕ್ಕೆ ರವಾನಿಸಿದ ಸಂದೇಶವೇನು?

ಬೆಂಗಳೂರು, ನವೆಂಬರ್‌ 23: ರಾಜ್ಯದಲ್ಲಿ ಹಗರಣಗಳ ಆರೋಪ, ಪ್ರತಿಭಟನೆ, ಹೋರಾಟಗಳ ನಡುವೆಯೂ ಆಡಳಿತರೂಢ ಕಾಂಗ್ರೆಸ್ ನ್ನು ಮತದಾರರು ಬೆಂಬಲಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಕೊಟ್ಟಿದೆ ಎನ್ನುವುದನ್ನು ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನವನ್ನು ಗೆಲ್ಲಿಸಿಕೊಂಡು, ತಮ್ಮ ಒಂದು ಸ್ಥಾನವನ್ನು ಉಳಿಸಿಕೊಳ್ಳುವುದಲ್ಲದೆ, ಇನ್ನೆರಡು ಸ್ಥಾನವನ್ನು ಬಗಲಿಗೆ ಹಾಕಿಕೊಳ್ಳುವುದರ ಮೂಲಕ ಕಾಂಗ್ರೆಸ್ ಇನ್ನಷ್ಟು ಬಲವಾಗಿದೆ ಎಂಬ ಸಂದೇಶವನ್ನು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಗೆ ರವಾನಿಸಿದೆ.

ಮೂರು ಕ್ಷೇತ್ರಗಳ ಉಪಚುನಾವಣೆ ಬಳಿಕ ನಡೆದ ಚುನಾವಣೋತ್ತರ ಸಮೀಕ್ಷೆಗಳು ಇಲ್ಲಿ ಸುಳ್ಳಾಗಿವೆ. ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿಶ್ವಾಸವೂ ನಿಜವಾಗಿದೆ. ಅಲ್ಲಿಗೆ ಒಂದು ಹಂತದಲ್ಲಿ ವಿಪಕ್ಷಗಳಿಗೆ ನಾವು ಇನ್ನಷ್ಟು ಗಟ್ಟಿಯಾಗಿದ್ದೇವೆ ಎಂಬುದನ್ನು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ತೋರಿಸಿದೆ. ಒಂದೂವರೆ ವರ್ಷದಲ್ಲಿ ಆಡಳಿತರೂಢ ಕಾಂಗ್ರೆಸ್ ಬಗ್ಗೆ ಹತ್ತು ಹಲವು ಟೀಕೆಗಳನ್ನು ಮಾಡುತ್ತಾ ಬಂದಿದ್ದ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಸ್ಥಾನಗಳನ್ನು ಬಿಟ್ಟುಕೊಡಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.

Karnataka By Election Results What Message Did The By-Election Result Send To The State

ಪ್ರತಿಷ್ಠೆಯನ್ನು ಪಣಕ್ಕಿಟ್ಟು ಈ ಬಾರಿ ಮೂರು ಪಕ್ಷಗಳು ಉಪಚುನಾವಣೆಯನ್ನು ಎದುರಿಸಿದ್ದವು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಹೋರಾಟ ನಡೆಸಿದ್ದರೂ 2019ರಲ್ಲಿ ಪಡೆದ ಸ್ಥಾನವನ್ನು ಪಡೆಯಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಆದರೆ ಕಾಂಗ್ರೆಸ್ ನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದವು. ಇದೀಗ ವಿಧಾನಸಭಾ ಕ್ಷೇತ್ರದ ಉಪಸಮರದಲ್ಲಿ ಜತೆಯಾಗಿ ಚುನಾವಣೆ ಎದುರಿಸಿ ಗೆಲುವು ಪಡೆದರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ವಿಧಾನಸಭಾ ಚುನಾವಣೆ ವೇಳೆಗೆ ಗಟ್ಟಿಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಎಲ್ಲೋ ಒಂದು ಕಡೆ ಅದು ಹುಸಿಯಾದಂತೆ ಕಾಣುತ್ತಿದೆ.

ವಿಪಕ್ಷಗಳನ್ನು ಹಣಿಯಲು 'ಕೈ'ಗೆ ಗೆಲುವಿನ ಅಸ್ತ್ರ

ಇಷ್ಟಕ್ಕೂ ಈ ಉಪಚುನಾವಣೆಯಿಂದ ಮಹತ್ತರ ಬದಲಾವಣೆಯಂತು ಆಗುವುದಿಲ್ಲ. ಗೆದ್ದವರ ಪ್ರತಿಷ್ಠೆ ಉಳಿಯುತ್ತದೆ. ಜತೆಗೆ ಆಡಳಿತ ಪಕ್ಷಕ್ಕೆ ವಿಪಕ್ಷವನ್ನು ಹಣಿಯಲು ಇದು ಅಸ್ತ್ರವಾಗಲಿದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಆಡಳಿತವನ್ನು ಜನ ಮೆಚ್ಚಿದ್ದಾರೆ ಎಂದು ಬೆನ್ನುತಟ್ಟಿಕೊಳ್ಳಲು ಅನುಕೂಲವಾಗಬಹುದು. ಅದರಾಚೆಗೆ ವಿಪಕ್ಷಗಳಿಗೆ ಇದೊಂದು ಬಹುದೊಡ್ಡ ಪಾಠವಂತು ಆಗಲಿದೆ. ಕಾರಣ ತಮ್ಮದೇ ಕ್ಷೇತ್ರ ಕೈಬಿಟ್ಟು ಹೋಗಿದೆ. ಹೀಗಾಗಿ ಈ ಕ್ಷೇತ್ರವನ್ನು ಮತ್ತೆ ಕಸಿದು ಕೊಳ್ಳುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಮಾಜಿ ಸಿಎಂ ಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಸವರಾಜಬೊಮ್ಮಾಯಿ ಅವರಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.

Karnataka By Election Results What Message Did The By-Election Result Send To The State

ಇಲ್ಲಿ ಮತದಾರರು ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಬೆಂಬಲಿಸಿದ್ದಾನೆ, ಆಡಳಿತವನ್ನು ಮೆಚ್ಚಿದ್ದಾನೆ ಎಂದೆಲ್ಲ ಹೇಳುವ ಜತೆಗೆ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ತಮ್ಮ ಪುತ್ರರನ್ನು ನಿಲ್ಲಿಸಿದ್ದ ಮಾಜಿ ಸಿಎಂಗಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರ ಕುಟುಂಬ ರಾಜಕಾರಣವನ್ನು ವಿರೋಧಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ಎನ್ ಡಿಎಗೆ ಅರ್ಥಾತ್ ಬಿಜೆಪಿಗೆ ಸ್ಠಾನವನ್ನು ಬಿಟ್ಟುಕೊಟ್ಟಿದ್ದರೆ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲವೇನೋ? ಎಲ್ಲೋ ಒಂದು ಕಡೆ ಪುತ್ರ ವ್ಯಾಮೋಹವೂ ಸೋಲಿಗೆ ಕಾರಣವಾಗಿದೆ ಎನ್ನುವುದನ್ನು ತಳ್ಳಿಹಾಕಲಾಗದು.

ಒಡೆದು ಹೋಳಾಗಿರುವ ಬಿಜೆಪಿಗೆ ತಕ್ಕಪಾಠ

ಇನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ಬಸವರಾಜಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ನೀಡದೆ ಬೇರೆ ನಾಯಕರಿಗೆ ನೀಡ ಬಹುದಾದ ಅವಕಾಶವಿತ್ತು. ಆದರೆ ಸ್ಥಳೀಯ ಬಿಜೆಪಿ ನಾಯಕರ ಅಸಮಾಧಾನದ ನಡುವೆಯೂ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಯಿತು. ಇದರ ಪರಿಣಾಮಗಳನ್ನು ಪಕ್ಷ ಅನುಭವಿಸಬೇಕಾಗಿ ಬಂದಿದೆ.

Karnataka By Election Results What Message Did The By-Election Result Send To The State

ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿನ್ ಪಠಾಣ್ ತಮ್ಮದೇ ಪಕ್ಷದ ನಾಯಕರ ವಿರೋಧವಿದ್ದರೂ ಅದೆಲ್ಲವನ್ನು ಸರಿಪಡಿಸಿಕೊಂಡು ಗೆದ್ದಿದ್ದಾರೆ. ಆದರೆ ಪರಿಣಾಮಗಳು ಮಾತ್ರ ಬಿಜೆಪಿ ಮೇಲೆಯೇ ಬಿದ್ದಿದೆ ಕಾರಣ ಬಿಜೆಪಿ ಪಕ್ಷ ರಾಜ್ಯದ ಮಟ್ಟಿಗೆ ಒಡೆದ ಮನೆಯಾಗಿದೆ. ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ನೇರಾ ನೇರಾ ಹೋರಾಟಗಳು ನಡೆಯುತ್ತಿದ್ದು ಪಕ್ಷ ಎರಡು ಬಣಗಳಾಗಿ ಹೋಳಾಗಿದ್ದು, ಅದರ ಪರಿಣಾಮಗಳು ಕೂಡ ಉಪಚುನಾವಣೆ ಮೇಲೆ ಪರಿಣಾಮ ಬೀರಿದೆ.

ಸಂಡೂರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಅಲ್ಲಿ ಸಂಸದ ತುಕರಾಂ ಪತ್ನಿ ಅನ್ನಪೂರ್ಣ ತುಕರಾಂ ಅವರ ಗೆಲುವು ನಿರೀಕ್ಷೆಯಂತೆಯೇ ಆಗಿದೆ. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತು ಪೈಪೋಟಿಯನ್ನು ನೀಡಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಮೂರು ಕ್ಷೇತ್ರಗಳ ಉಪಚುನಾವಣೆಯಿಂದ ಕಾಂಗ್ರೆಸ್ ಗೆ ಇನ್ನಷ್ಟು ಬಲ ಬಂದಂತಾಗಿದೆ. ಆದರೆ ಬಲವನ್ನು ವೃದ್ಧಿಸಿಕೊಳ್ಳಬಹುದಾಗಿದ್ದ ಎನ್ ಡಿಎ ಕೈಚೆಲ್ಲಿ ಕೂತಿದೆ. ಇಲ್ಲಿ ಬಿಜೆಪಿ ನಾಯಕರು ಮಾಡಿದ ಯಾವ ತಂತ್ರವೂ ಫಲಕೊಟ್ಟಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಬಿಜೆಪಿ, ಜೆಡಿಎಸ್‌ಗೆ ಪಾಠ ಕಲಿಸಿದ ಮತದಾರರು

ಶಿಸ್ತಿನ ಪಕ್ಷ ಎಂದು ಬಡಾಯಿಕೊಚ್ಚಿಕೊಳ್ಳುತ್ತಿರುವ ಬಿಜೆಪಿಯಲ್ಲಿ ಒಳಬಣಗಳ ಕಚ್ಚಾಟಗಳು ತಾರಕಕ್ಕೇರಿವೆ. ಅದು ನಾಯಕರ ನಡುವಿನ ಹೇಳಿಕೆಗಳಿಂದ ಮತ್ತು ಪ್ರತ್ಯೇಕ ಹೋರಾಟಗಳಿಂದ ಗೊತ್ತಾಗುತ್ತಿದೆ. ಬಿಜೆಪಿ ಹೈಕಮಾಂಡ್ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಸುಮ್ಮನಿರುವುದು ಪಕ್ಷದೊಳಗಿನ ಭಿನ್ನಮತದ ಹುಣ್ಣು ಇನ್ನಷ್ಟು ಹರಡಲು ಕಾರಣವಾಗಿದೆ. ಮಧ್ಯಸ್ಥಿಕೆ ವಹಿಸಿ ಎರಡು ಬಣಗಳ ಅಸಮಾಧಾನವನ್ನು ಬಗೆಹರಿಸಿ ಒಂದಾಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಹೀನಾಯ ಮಟ್ಟಕ್ಕೆ ಹೋಗುವುದರಲ್ಲಿ ಅಚ್ಚರಿಯಿಲ್ಲ.

ಇದೆಲ್ಲದರ ನಡುವೆ ಪ್ರಾದೇಶಿಕ ಪಕ್ಷವಾಗಿ ನಿರ್ಣಾಯಕ ಹಂತದಲ್ಲಿದ್ದ ಜೆಡಿಎಸ್‌ನ ಪ್ರಾಬಲ್ಯ ಚುನಾವಣೆಯಿಂದ ಚುನಾವಣೆಗೆ ಕುಸಿಯುತ್ತಾ ಹೋಗುತ್ತಿರುವುದು ಪಕ್ಷದ ಅಳಿವು ಉಳಿವನ್ನು ಪ್ರಶ್ನೆ ಮಾಡುವಂತೆ ಮಾಡಿದೆ. ಹಳೆ ಮೈಸೂರು ಭಾಗವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡು ಮೆರೆದಿದ್ದ ಪಕ್ಷ ಹೀನಾಯ ಸ್ಥಿತಿಯತ್ತ ಮುಖ ಮಾಡುತ್ತಿದೆ. ಎನ್ ಡಿಎ ಜತೆ ಸೇರಿದ ಬಳಿಕ ಪಕ್ಷ ಸಂಘಟನೆ ನಡೆಯುತ್ತಿಲ್ಲ. ಸಣ್ಣಪುಟ್ಟ ನಾಯಕರು, ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಮುಂದೆ ನಿಂತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಇದೆಲ್ಲವನ್ನು ಗಮನಿಸಿದರೆ ವಿಪಕ್ಷಗಳ ದೌರ್ಬಲ್ಯಗಳು ಆಡಳಿತರೂಢ ಕಾಂಗ್ರೆಸ್ ನ್ನು ಇನ್ನಷ್ಟು ಗಟ್ಟಿಯಾಗುವಂತೆ ಮಾಡುತ್ತಿರುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+