KSRTC: ಕರ್ನಾಟಕದಲ್ಲಿ ಬಸ್ ಟಿಕೆಟ್ ದರ ಏರಿಕೆಗೆ ಸಾರಿಗೆ ಇಲಾಖೆ ಕೊಟ್ಟ ಕಾರಣಗಳು, ಅಂಕಿ ಸಂಖ್ಯೆ ಹೀಗಿವೆ
ಬೆಂಗಳೂರು, ಜನವರಿ 03: ಕರ್ನಾಟಕ ರಾಜ್ಯ ಸರ್ಕಾರ ನಾಲ್ಕು ವರ್ಷಗಳ ಬಳಿಕ ಸಾರಿಗೆ ಬಸ್ ಟಿಕೆಟ್ ದರವನ್ನು ಪರಿಷ್ಕರಣೆ ಮಾಡಿ ಆದೇಶಿಸಿದೆ. ಇದಕ್ಕೆ ಒಂದಷ್ಟು ಆಕ್ರೋಶಗಳು ಕೇಳಿ ಬಂದಿದೆ. ಈ ಕಾರಣಕ್ಕೆ ರಾಜ್ಯ ಸಾರಿಗೆ ಇಲಾಖೆಯು ಸ್ಪಷ್ಟನೆ ಜೊತೆಗೆ ಸರ್ಕಾರಕ್ಕೆ ಯಾಕೆ ದರ ಏರಿಕೆ ಅನಿವಾರ್ಯವಾಯಿತು ಎಂದು ತಿಳಿಸಿದೆ. ಟಿಕೆಟ್ ದರ ಹೆಚ್ಚಳಕ್ಕೆ ಕಾರಣಗಳನ್ನು ತಿಳಿಸಿ ವಿವರಿಸಿದೆ. ತನ್ನ ನಡೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಗುರುವಾರ ರಾಜ್ಯದ ಎಲ್ಲ ನಾಲ್ಕು ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಏರಿಕೆ ಮಾಡಿ ಆದೇಶಿಸಿದೆ. ಜನವರಿ 5ರಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಬೆಲೆ ಏರಿಕೆಗೆ ಸಾರಿಗೆ ಇಲಾಖೆ ಕೊಟ್ಟ ಕಾರಣಗಳು, ಪಟ್ಟಿ
* ಕೋವಿಡ್ ಸಂದರ್ಭದಲ್ಲಿ ಸಂಪೂರ್ಣ ಬಸ್ಸುಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
* ಕೋವಿಡ್ ಸಂದರ್ಭದಲ್ಲಿ ಸರ್ಕಾರವು ನಿವ್ವಳ ವೇತನ ಪಾವತಿಗೆ ಅನುದಾನ ನೀಡಿದೆ. ಇದರಿಂದ ಒಟ್ಟು ಮೂಲ ವೇತನ ಹಾಗೂ ನಿವ್ವಳ ವೇತನದ ವ್ಯತ್ಯಾಸದ ಮೊತ್ತವು ಕ್ರೋಢೀಕರಿಸಲಾಗಿದೆ.
* ಕಳೆದ ಐದು ವರ್ಷಗಳಿಂದ ಟಿಕೆಟ್ ದರ ಪರಿಷ್ಕರಣೆ ಮಾಡದಿರುವುದು (ಬಿ.ಎಂ.ಟಿ.ಸಿ ಯಲ್ಲಿ 2014 ರಿಂದ ಟಿಕೆಟ್ ದರ ಪರಿಷ್ಕರಣೆ ಆಗಿಲ್ಲ.)
* ಡೀಸೆಲ್ ದರ ಹೆಚ್ಚಾಗಿದೆ. (ದರ ಪರಿಷ್ಕರಣೆ ಹಿಂದೆ ಪ್ರತಿದಿನದ ಸರಾಸರಿ ಡಿಸೆಲ್ ವೆಚ್ಚ : ರೂ.9.16 ಕೋಟಿ ಪ್ರಸ್ತುತ ಪ್ರತಿದಿನದ ಸರಾಸರಿ ಡಿಸೆಲ್ ವೆಚ್ಚ : ರೂ.13.21 ಕೋಟಿ)
* ಕಳೆದ 12 ವರ್ಷಗಳಿಂದ ವಿದ್ಯಾರ್ಥಿ ಪಾಸ್ ದರ ಹೆಚ್ಚಳ ಮಾಡಲಾಗಿದೆ.
* 2020-2023 ಅವಧಿಯಲ್ಲಿ 15% ವೇತನ ಪರಿಷ್ಕರಣೆಯಿಂದ ಸಿಬ್ಬಂದಿ ವೆಚ್ಚ ಹೆಚ್ಚಳವಾಗಿದೆ.
* ಪ್ರಯಾಣಿಕರ ಟಿಕೆಟ್ ದರ ಪರಿಷ್ಕರಣೆ ಹಿಂದೆ ಪ್ರತಿದಿನದ ಸರಾಸರಿ ಸಿಬ್ಬಂದಿ ವೆಚ್ಚ ರೂ.12.85 ಕೋಟಿ ಪ್ರಸ್ತುತ ಪ್ರತಿದಿನದ ಸರಾಸರಿ ಸಿಬ್ಬಂದಿ ವೆಚ್ಚ: ರೂ.18.36 ಕೋಟಿ ಆಗಿರುವುದು.
* 2023 ಮಾರ್ಚ್ ನಲ್ಲಿ 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡಿರುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
* ನಿವೃತ್ತಿ ಹೊಂದಿದ 11694 ಸಿಬ್ಬಂದಿಗಳಿಗೆ 2020 ರಿಂದ ಬಾಕಿ ಉಳಿದಿದ್ದ ಗಳಿಕೆ ರಜೆ ನಗದೀಕರಣ ಹಾಗೂ ಉಪಧನ ಹಿಂಬಾಕಿ ಮೊತ್ತ ರೂ.224.05 ಕೋಟಿ ಪಾವತಿಸಲಾಗಿದೆ.
ಶಕ್ತಿ ಯೋಜನೆ: ಉಚಿತ ಸಂಚಾರಕ್ಕೆ ಅವಕಾಶ
* ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಶಕ್ತಿ ಯೋಜನೆ ಮಹಿಳಾ ಉಚಿತ ಪ್ರಯಾಣವನ್ನು ದಿನಾಂಕ 11.06.2023 ರಿಂದ ಜಾರಿಗೊಳಿಸಿ ಮಹಿಳಾ ಸಬಲೀಕರಣದತ್ತ ಸರ್ಕಾರದ ನಡೆಗೆ ಪೂರಕವಾಗಿ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆಯು ಅತ್ಯಂತ ಯಶಸ್ವಿಯಾಗಿದೆ.
* 2ನೇ ಜನವರಿ-2025 ರವರೆಗೆ 363 ಕೋಟಿ ಮಹಿಳಾ ಪ್ರಯಾಣಿಕರು ನಿಗಮದ ಬಸ್ಸುಗಳಲ್ಲಿ "ಶಕ್ತಿ ಯೋಜನೆ" ಅಡಿಯಲ್ಲಿ ಪ್ರಯಾಣಿಸಿರುತ್ತಾರೆ. ಮಾನ್ಯ ಘನ ಸರ್ಕಾರವು ರೂ.8800 ಕೋಟಿ ಅನುದಾನ ನೀಡಲಾಗಿದೆ.

* ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರವು ಕೆಎಸ್‌ಆರ್‌ಟಿಸಿಗೆ - ರೂ.2481 ಕೋಟಿ ಬಿಎಂಟಿಸಿಗೆ - ರೂ. 1126 ಕೋಟಿ,, ವಾಯುವ್ಯ ಸಾರಿಗೆಗೆ - ರೂ 1613 ಕೋಟಿ. ಕಲ್ಯಾಣ ಕರ್ನಾಟಕ ಸಾರಿಗೆಗೆ- ರೂ 1321 ಕೋಟಿ ರೂ. ಅನುದಾನ, ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ರೂ 6543 ಕೋಟಿ ಅನುದಾನವನ್ನು ಸರ್ಕಾರ 2023ರ ಜೂನ್‌ನಿಂದ 2024ರ ನವೆಂಬರ್ ಬಿಡುಗಡೆ ಮಾಡಿದೆ.
* ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚದಲ್ಲಿ ಉಂಟಾಗುತ್ತಿರುವ ಗಣನೀಯ ಹೆಚ್ಚಳವು ಸಾರಿಗೆ ಸಂಸ್ಥೆಗಳಿಗೆ ಬಹುದೊಡ್ಡ ಹೊಡೆತ ನೀಡಿವೆ. ವಿವರ ಈ ಕೆಳಕಂಡಂತಿದೆ.
ಇಂದನ-ಸಿಬ್ಬಂದಿ ವೆಚ್ಚ ವಿವರ
2020ರಲ್ಲಿ ಪ್ರತಿ ದಿನ ಸಾರಿಗೆ ವೆಚ್ಚ ಪ್ರತಿ ಕಿಲೋ ಮೀಟರ್‌ಗೆ ಇಂಧನಕ್ಕೆ 9.16 ರೂಪಾಯಿ, ಆಗ ಡೀಸೆಲ್ ದರ 60.98 ರೂಪಾಯಿ ಇತ್ತು. ಸಿಬ್ಬಂದಿ ವೆಚ್ಚ 12.85 ರೂಪಾಯಿ ಆಗುತ್ತಿತ್ತು. ಒಟ್ಟು ಸೇರಿ ದಿನಕ್ಕೆ 21.01 ರೂಪಾಯಿ ಆಗುತ್ತಿತ್ತು.
2024ರಲ್ಲಿ ಪ್ರತಿ ದಿನ ಸಾರಿಗೆ ವೆಚ್ಚ ಪ್ರತಿ ಕಿಲೋ ಮೀಟರ್‌ಗೆ ಇಂಧನಕ್ಕೆ 13.21 ರೂಪಾಯಿ, ಈಗ ಡೀಸೆಲ್ ದರ 85.85 ರೂಪಾಯಿ ಇದೆ. ಸಿಬ್ಬಂದಿ ವೆಚ್ಚ 18.36 ರೂಪಾಯಿ ಆಗಿರುತ್ತದೆ. ಒಟ್ಟು ಸೇರಿ ಇಂದು 31.57 ರೂಪಾಯಿ ಖರ್ಚಾಗುತ್ತದೆ. ಈ ಕಾರಣದಿಂದಲೇ ಸರ್ಕಾರ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡಿದೆ ಎಂದು ಕಾರಣ ತಿಳಿಸಲಾಗಿದೆ.
ರಾಜ್ಯದಲ್ಲಿ ಪ್ರತಿ ಕಿ.ಮೀ.ಗೆ ಎಷ್ಟು ದರ ಇದೆ
ಇದಷ್ಟೇ ಅಲ್ಲದ ಕರ್ನಾಟಕದಲ್ಲಿ ಸಾರಿಗೆ ಪ್ರತಿ ಪೈಸೆಗೆ ಟಿಕೆಟ್ ದರ ವಿಧಿಸಿರುವುದು ಇತರ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗಿಂತಲೂ ಕಡಿಮೆ ಇದೆ. ನಗರ ಸಾರಿಗೆ ಬಸ್‌ಗೆ ಪ್ರೆತಿ ಕಿ.ಮೀಗೆ 81.47 ಪೈಸೆ, ಸಾಮಾನ್ಯ ಬಸ್‌ಗಳಿಗೆ ಪ್ರತಿ ಕಿ.ಮೀ.ಗೆ 65.90 ಪೈಸೆ, ವೇಗದೂತ ಬಸ್‌ಗಳಿಗೆ ಪ್ರತಿ ಕಿ.ಮೀ.ಗೆ 100.57.ಪೈಸೆ ಹಾಗೂ ರಾಜಹಂಸ ಅಥವಾ ಡಿಲಕ್ಸ್ ಬಸ್‌ಗಳಿಗೆ ಪ್ರತಿ ಕಿ.ಮೀ.ಗೆ 145 ಪೈಸೆ ಹಣ ನಿಗದಿ ಮಾಡಲಾಗಿದೆ.
ಮೇಲಿನ ಮೂರು ರಾಜ್ಯಗಳಲ್ಲಿ ಈ ಮೇಲಿನ ಎಲ್ಲ ವಿಧದ ಬಸ್‌ಗಳಿಗೆ ಕರ್ನಾಟಕಕ್ಕಿಂತಲೂ ಹೆಚ್ಚಿನ ಬಸ್ ದರ ನಿಗದಿ ಮಾಡಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಈ ಬಾರಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸರ್ಕಾರ ಮಾಹಿತಿ ನಿಡಿದೆ.












Click it and Unblock the Notifications