Karnataka Budget 2024 LIVE: 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಾಗಿಲಿಗೆ ಆಹಾರ: ಅನ್ನ ಸುವಿಧಾ ಯೋಜನೆ ಘೋಷಣೆ
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಮೇಲು ಸಾಕಷ್ಟು ನಿರೀಕ್ಷೆಗಳು ಹುಟ್ಟಿಸಿವೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಅನಿವಾರ್ಯತೆ ಇದೆ. ಇತ್ತ ನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳು, ಸರ್ಕಾರಿ ನೌಕರರು, ರೈತರು ಸೇರಿದಂತೆ ವಿವಿಧ ವಲಯಗಳಿಂದ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.
ಇತ್ತ ಹೆಚ್ಚು ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ತವಕದಲ್ಲಿರು ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಜನರನ್ನು ಸೆಳೆಯಲು ಹಲವು ತಂತ್ರಗಳನ್ನು ಮಾಡುತ್ತಿದೆ. ಹೀಗಾಗಿ ಇಂದು ಸಿದ್ದರಾಮಯ್ಯ ಅವರು ಬೆಳಗ್ಗೆ 10.15ಕ್ಕೆ ಮಂಡಿಸುತ್ತಿರುವ 15ನೇ ಬಜೆಟ್ ಸಾಕಷ್ಟು ಮಹತ್ವದ್ದಾಗಿದೆ.
ಕರ್ನಾಟಕ ಬಜೆಟ್‌ನ ಗಾತ್ರ, ಸರ್ಕಾರದ ಆದಾಯ- ವೆಚ್ಚಗಳ ವಿವರ, ಘೋಷಣೆಯಾದ ಪ್ರಮುಖ ಯೋಜನೆಗಳು ಸೇರಿದಂತೆ ಹಣಕಾಸು ಸಚಿವರ ಬಜೆಟ್ ಭಾಷಣದ ಕ್ಷಣಕ್ಷಣದ ಮಾಹಿತಿಗಾಗಿ ಓನ್ ಇಂಡಿಯಾ ಕನ್ನಡವನ್ನು ಫಾಲೋ ಮಾಡಿ.

ಬಜೆಟ್ ಮೂಲಕ ರಾಜ್ಯದ ವಿನಾಶಕ್ಕೆ ಬುನಾದಿ: ಹೆಚ್ಡಿಕೆ
ಸರಕಾರದ ಖಜಾನೆ ಖಾಲಿ ಆಗಿದೆ ಅಂತ ನಾವು ಹೇಳಲ್ಲ. ಜನರು ಸಮೃದ್ದಿಯಾಗಿ ಖಜಾನೆ ತುಂಬಿಸಿದ್ದಾರೆ. ಈ ಬಜೆಟ್ ನೋಡಿದರೆ ಜನರು ನಾವು ಎಷ್ಟು ತಪ್ಪು ಮಾಡಿದ್ದೇವೆ ಇವರನ್ನು ಗೆಲ್ಲಿಸಿ ಎಂದು ಜನ ಅಂದುಕೊಂಡಿದ್ದಾರೆ. ಕೇಂದ್ರ ಸರಕಾರ ಅಮೃತಕಾಲ ಅಂದರೆ ಸಿದ್ದರಾಮಯ್ಯ ಅವರು ವಿನಾಶಕಾಲ ಎಂದು ಹೇಳಿದರು. ಇವತ್ತಿನ ಸಿಎಂ ಬಜೆಟ್ ರಾಜ್ಯದ ವಿನಾಶಕಾಲಕ್ಕೆ ಬುನಾದಿ ಹಾಕಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸಮತೋಲನ ಹಣ ಹಂಚಿಕೆ-ಆರ್ಥಿಕ ಶಿಸ್ತು ಕಾಪಾಡಿದ್ದಾರೆ: ಡಾ. ಜಿ.ಪರಮೇಶ್ವರ
ರಾಜ್ಯದ ಬಡ, ಮಧ್ಯಮ ವರ್ಗದ ಜನರ ಹಾಗೂ ಮಹಿಳೆಯರು, ಯುವಕರು, ಕೃಷಿಕರು, ಕ್ರೀಡಾಪಟುಗಳು ಸೇರಿದಂತೆ ಸರ್ವಜನರ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ.
ಪರಿಪೂರ್ಣ ದೃಷ್ಟಿಯ ಬಜೆಟ್: ಎಂ ಬಿ ಪಾಟೀಲ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ ಮತ್ತು ಪ್ರಾದೇಶಿಕ ತಾರತಮ್ಯ ನಿವಾರಣೆಯ ಹೆಗ್ಗುರಿಗಳನ್ನುಳ್ಳ ಪರಿಪೂರ್ಣ ದೃಷ್ಟಿಯ ಜನಪ್ರಿಯ ಬಜೆಟ್ ಆಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಬಜೆಟ್ ತೀವ್ರ ನಿರಾಸೆ ಮೂಡಿಸಿದೆ: ಸುಧಾಕರ್

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅತ್ಯಂತ ನೀರಸವಾಗಿದ್ದು, ಬಯಲುಸೀಮೆ ಜಿಲ್ಲೆಗಳಿಗೆ ವಂಚಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ಇದು ತೀವ್ರ ನಿರಾಸೆ ಮೂಡಿಸಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್: ವಿಜಯೇಂದ್ರ

ಮುಖ್ಯಮಂತ್ರಿಗಳು ಮತ್ತು ರಾಜ್ಯದ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ರೈತವಿರೋಧಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಪ್ರಗತಿಯ ಬಜೆಟ್. ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದು ಎಂದು ವಿಜಯೇಂದ್ರ ಟೀಕಿಸಿದರು.
ಧಾರವಾಡ ಸಮೀಪ ಸುಮಾರು 6,000 ಎಕರೆ ಜಮೀನಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆಗೆ ನಿವಾರಣೆ ಸರ್ಕಾರ ಕ್ರಮವಹಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿ
ಕಾವೇರಿ ನೀರಾವರಿ ನಿಗಮದಡಿ ವಿಶ್ವೇಶ್ವರಯ್ಯ ನಾಲಾ ಜಾಲದ ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲ್ಲೂಕಿನ ಮಾದವಮಂತ್ರಿ ನಾಲೆಗಳ ಹಾಗೂ ಮದ್ದೂರು ತಾಲ್ಲೂಕು ಕೆಮ್ಮಣ್ಣುನಾಲಾ ಆಧುನೀಕರಣ, ಹುಣಸೂರು ತಾಲ್ಲೂಕಿನ ಮರದೂರು, ಕನಕಪುರದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆಗಳು, ಶ್ರೀರಂಗ ಕುಡಿಯುವ ನೀರು ಯೋಜನೆಗೆ ಪೈಪ್ಲೈನ್ ಮೂಲಕ ನೀರು ಒದಗಿಸುವ ಯೋಜನೆ, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿ, ಗುಬ್ಬಿಯ ಮಠದಹಳ್ಳಿ ಕುಡಿಯುವ ನೀರು ಯೋಜನೆ, ರಾಮನಗರದ ಬಳಿ ಅರ್ಕಾವತಿ ಯೋಜನೆಗಳನ್ನು ಅಂದಾಜು 2,000 ಕೋಟಿ ರೂ. ಮೊತ್ತದಲ್ಲಿ ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು.
ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನ ಕೈಗೆತ್ತಿಕೊಂಡ ಸರ್ಕಾರ
ಕೊಪ್ಪಳ ಜಿಲ್ಲೆಯ ಯಲಬುರ್ಗಾ-ಕುಕನೂರು ತಾಲ್ಲೂಕಿನ 38 ಕೆರೆಗಳನ್ನು ಕುಡಿಯುವ ನೀರು ಹಾಗೂ ಅಂತರ ಜಲ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ 970 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹಾಗೂ ಇತರ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ಅಂದಾಜು 990 ಕೋಟಿ ರೂ. ಮೊತ್ತದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು
ಎಸ್. ಬಂಗಾರಪ್ಪನವರ ಸ್ಮಾರಕವನ್ನು ನಿರ್ಮಾಣ

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು
80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಾಗಿಲಿಗೆ ಆಹಾರ

80 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ಅನ್ನ ಸುವಿಧಾ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಯೋಜನೆ ಮೂಲಕ ಅಂಥ ವೃದ್ಧರ ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ, 10 ಜಿಲ್ಲೆಗಳಲ್ಲಿ ವಲಸೆ ನಿರ್ಮಾಣ ಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ

ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ ಒದಗಿಸಲಾಗುವುದು. ಇದಕ್ಕೆ 430 ಪ್ರಯೋಗಾಲಯಗಳ ಸ್ಥಾಪನೆಗೆ 20 ಕೋಟಿ ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದರು.
1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ
1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ ಮಾಡಲಾಗುವುದು. ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆಗೆ 4 ಕೇಂದ್ರಗಳನ್ನು ಆರಂಭಿಸಲಾಗುವುದು. 4 ಅನುಪಾಲನಾ ಕೇಂದ್ರಗಳ ಸ್ಥಾಪನೆಗೆ 2 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಬಜೆಟ್ ಗೆ ವಿರೋಧ: ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ನಾಯಕರ ಪ್ರತಿಭಟನೆ
13 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ Hub and Spoke ಮಾದರಿಯಲ್ಲಿ ವಿಸ್ತರಿಸುವ ಮೂಲಕ STEMI (ತೀವ್ರ ಹೃದ್ರೋಗ) ಚಿಕಿತ್ಸೆಯನ್ನು ಬಲಪಡಿಸಲಾಗುವುದು. ಇದಲ್ಲದೇ STEMI and Stroke ಚಿಕಿತ್ಸೆಗಾಗಿ ಥ್ರಂಬೋಲಿಟಿಕ್ ಔಷಧಗಳ (Thrombolytic Drugs) ಸಂಗ್ರಹಣೆಗಾಗಿ 32 ಕೋಟಿ ರೂ.ಗಳನ್ನು ಒದಗಿಸಲಾಗುವುದು. ರಾಜ್ಯದ ಜಿಲ್ಲಾ ಆಸ್ಪತ್ರೆಗಳನ್ನು ಅಗ್ನಿ ಅವಘಡಗಳಿಂದ ರಕ್ಷಿಸಲು 13 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ವ್ಯವಸ್ಥೆಯನ್ನು 6 ಕೋಟಿ ರೂ.ಗಳ ವೆಚ್ಚದಲ್ಲಿ ಅಳವಡಿಸಲಾಗುವುದು.
ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ

• ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು 1500 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಿಸಲಾಗುವುದು.
• ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಪ್ಯಾಕೇಜ್ ಅನ್ನು ನೀಡಲಾಗುವುದು.
• ನಿವೇಶನ ಹೊಂದಿರುವ ವಸತಿರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುವುದು.
• ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಮರುಸಮೀಕ್ಷೆ ನಡೆಸಲಾಗುವುದು.
ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ.

ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ. ಒದಗಿಸಲು ನಿರ್ಧಾರ. ಜೈನ್ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ ಜತೆಗೆ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ನೀಡಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ತರಬೇತಿ ಕಾರ್ಯಾಗಾರ
ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು 10 ಕೋಟಿ ರೂ. ಗಳನ್ನು ಒದಗಿಸಲಾಗುವುದು.
ಬೆಂಗಳೂರು ಸುತ್ತ ಸ್ಯಾಟಲೈಟ್ ಟೌನ್‌ಗಳು

ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ಸ್ಯಾಟಲೈಟ್ ಟೌನ್‌ಶಿಪ್‌ಗಳಾಗಿ ಅಭಿವೃದ್ಧಿಪಡಿಸಲಾಗುವುದು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್

ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ಸುಗಮಗೊಳಿಸಲು 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಒದಗಿಸಲಾಗುವುದು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 130 ಕೋಟಿ

2024-25ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗಾಗಿ 400 ಕೋಟಿ ರೂ.ಗಳ ಅನುದಾನವನ್ನು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 130 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.
ಪ್ರತಿ ಜಿಲ್ಲೆಯಲ್ಲಿ ಕಿಮೊಥೆರಪಿ ಕೇಂದ್ರ ಸ್ಥಾಪನೆ

ಪ್ರತಿ ಜಿಲ್ಲೆಯಲ್ಲಿ ಒಟ್ಟು 20 ಕೋಟಿ ರೂಪಾಯಿ ವೆಚ್ಚದಲ್ಲಿ ಡೇ-ಕೇರ್ ಕಿಮೊಥೆರಪಿ ಕೇಂದ್ರ ಸ್ಥಾಪನೆ

ಬಹುನಿರೀಕ್ಷೆಯ ಪ್ರಸಕ್ತ ಸಾಲಿನ ಕರ್ನಾಟಕ ಬಜೆಟ್ ನಲ್ಲಿ ಬೆಂಗಳೂರಿನಲ್ಲಿ ನಾಲ್ಕು ಕಾರಿಡಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಉಪನಗರ ರೈಲು ಯೋಜನೆಗೆ ಚುರುಕುಗೊಳಿಸಲು ಕ್ರವಹಿಸಲಾಗಿದೆ. ಚಿಕ್ಕಬಾಣಾವರ-ಬೈಯಪ್ಪನಹಳ್ಳಿವರೆಗಿನ ಕಾರಿಡಾರ್ ಎರಡರ ತ್ವರಿತ ಕಾರ್ಯಾಚರಣೆಗೊಳಿಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ಗೋದಾಮುಗಳ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

76 ಗೋದಾಮುಗಳ ನಿರ್ಮಾಣಕ್ಕೆ 376 ಕೋಟಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಪೆಟ್ರೋಲ್ ಬಂಕ್ಗಳ ಮಾದರಿಯಲ್ಲಿ ಇವುಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
100 ಹಾಸಿಗೆಗಳ ತಾಲೂಕಾ ಆಸ್ಪತ್ರೆ
ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ, ಯಳಂದೂರು ತಾಲೂಕುಗಳಲ್ಲಿ ಒಟ್ಟು 280 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಿಸಲಾಗುವುದು.

2024-25ನೇ ಸಾಲಿನ ಆಯವ್ಯಯದ ಪ್ರತಿಗಳನ್ನು ಸಚಿವರು, ಸಭಾನಾಯಕರಾದ ಎಂ.ಎಸ್. ಭೋಸರಾಜು ಅವರು ಮೇಲ್ಮನೆಯಲ್ಲಿ ಪ್ರದರ್ಶಿಸಿದರು. ಆ ಸಂದರ್ಭದಲ್ಲಿ ಶಾಸಕರಾದ ದಿನೇಶ್ ಗೂಳಿಗೌಡ, ರಾಜೇಂದ್ರ ರಾಜಣ್ಣ, ಚನ್ನರಾಜ ಹಟ್ಟಿಹೊಳಿ, ಅನಿಲ್ ಕುಮಾರ್, ಸಲೀಂ ಅಹ್ಮದ್, ಯು.ಬಿ. ವೆಂಕಟೇಶ್ ಇದ್ದರು.

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ & ಪದವಿ ಪೂರ್ವ ಕಾಲೇಜುಗಳ ವಿವಿಧ ವಿಷಯಗಳ ಶೀಕ್ಷಕರು / ಉಪನ್ಯಾಸಕರ ನೇಮಕ ಮಾಡುವ ಪ್ರಕ್ರಿಯೆಯನ್ನ ಪ್ರಾರಂಭ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ 2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಬಂಪರ್ ಸಿಕ್ಕಂತಾಗಿದೆ.
ಹಣಕಾಸು ಖಾತೆ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಭಾಷಣದಲ್ಲಿ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದಾರೆ. 7ನೇ ರಾಜ್ಯ ವೇತನದ ಆಯೋಗದ ವರದಿ ಜಾರಿ ಮುನ್ಸೂಚನೆ ನೀಡಿದ್ದಾರೆ. ಸಮಿತಿ ವರದಿ ಆಧರಿಸಿ ಕ್ರಮ ಎಂದು ಘೋಷಣೆ ಮಾಡಿದ್ದಾರೆ.
ಮೀನುಗಾರರಿಗೆ ಸಮುದ್ರ ಆ್ಯಂಬುಲೆನ್ಸ್!

ಕರಾವಳಿಗೆ ಕೂಡ ಸಿಎಂ ಭರ್ಜರಿ ಬಂಪರ್ ಕೊಟ್ಟಿದ್ದಾರೆ. ಮೀನುಗಾರಿಕಾ ಕ್ಷೇತ್ರಕ್ಕಾಗಿ ಸಿಎಂ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂಪಾಯಿಯ ಭರ್ಜರಿಯಾದ ಯೋಜನೆ ಘೋಷಿಸಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭದಲ್ಲಿ ರಕ್ಷಣೆ ಮಾಡಲು ಅತ್ಯಾಧುನಿಕ ಸಮುದ್ರ ಆ್ಯಂಬುಲೆನ್ಸ್ ಖರೀದಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ

ಶಿಕ್ಷಣ- ೪೪೪೨೨ಕೋಟಿ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ-೩೪೪೦೬ಕೋಟಿ,
ಇಂಧನ-೨೩೧೫೯ ಕೋಟಿ,
ಗ್ರಾಮೀಣಾಭಿವೃದ್ಧಿ-೨೧೧೬೦ ಕೋಟಿ,
ಒಳಾಡಳಿತ ಸಾರಿಗೆ-೧೯೭೭೭ ಕೋಟಿ,
ನೀರಾವರಿ-೧೯೧೭೯ ಕೋಟಿ,
ನಗರಾಭಿವೃದ್ಧಿ -೧೮೧೫೫ ಕೋಟಿ,
ಕಂದಾಯ-೧೬೧೭೦ ಕೋಟಿ,
ಆರೋಗ್ಯ -೧೫೧೪೫ ಕೋಟಿ,
ಸಮಾಜ ಕಲ್ಯಾಣ-೧೩೩೩೪ ಕೋಟಿ,
ಲೋಕೋಪಯೋಗಿ-೧೦೪೨೪ ಕೋಟಿ,
ಆಹಾರ ಮತ್ತು ನಾಗರೀಕ ಪೂರೈಕೆ-೯೯೬೩ ಕೋಟಿ,ಕೃಷಿ ತೋಟಗಾರಿಕೆ-೬೬೮೮ ಕೋಟಿ,
ಪಶುಸಂಗೋಪನೆ-೩೩೦೭ ಕೋಟಿ,
ಇತರೆ-೧೨೪೫೯೩ ಕೋಟಿ ಹಂಚಿಕೆ
READ MORE













Click it and Unblock the Notifications