Karnataka Budget 2023: ಬೆಂಗಳೂರಿನಲ್ಲಿ 'ಶ್ರೀ ಭುವನೇಶ್ವರಿ' ಬೃಹತ್ ಮೂರ್ತಿ, ಥೀಮ್ ಪಾರ್ಕ್ ನಿರ್ಮಾಣ
ಕರ್ನಾಟಕ ರಾಜ್ಯದ ಕನ್ನಡ ಮಾತೆಯಾದ 'ಶ್ರೀ ಭುವನೇಶ್ವರಿ' ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. 3,09,182 ಕೋಟಿ ರೂಪಾಯಿ ಗಾತ್ರದ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ವಲಯಕ್ಕೆ ವಿಶೇಷ ಯೋಜನೆಗಳ ಘೋಷಣೆ ಮಾಡಲಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಶಿಕ್ಷಣ, ಮಹಿಳಾ ಅಭಿವೃದ್ಧಿ, ಮೀನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಧಾನಸೌಧದಲ್ಲಿ ಬಜೆಟ್ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯವು ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಈ ಸಂಪನ್ಮೂಲಗಳನ್ನು ಅತ್ಯಂತ ಸಮರ್ಥವಾಗಿ, ಸುಸ್ಥಿರವಾಗಿ ಬಳಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ವಲಯಕ್ಕೆ ನೀಡಿದ ವಿಶೇಷ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.
ನಮ್ಮ ನಾಡು, ನುಡಿ, ಸಂಸ್ಕೃತಿ ಬಿಂಬಿಸಲು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕರ್ನಾಟಕದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಹಾಗೂ ಉಡುಪಿ ಜಿಲ್ಲೆಯಲ್ಲಿ ಯಕ್ಷರಂಗಾಯಣವನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಕರ್ನಾಟಕ ರಾಜ್ಯದ ಕನ್ನಡ ಮಾತೆಯಾದ 'ಶ್ರೀ ಭುವನೇಶ್ವರಿ' ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗುವುದು. 'ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ' ಎಂಬ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಜಾನಪದ ಹಬ್ಬವನ್ನು ಆಯೋಜನೆ ಮಾಡಲಾಗುವುದು. ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ಯವನ್ನು ನೀಡಲಾಗುವುದು. ಹಾಗೆಯೇ ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗುವುದು. ಕರ್ನಾಟಕ ಜಗತ್ತಿನೆಲ್ಲೆಡೆ ಒಂದು ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದು, ಕನ್ನಡವನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೆಮ್ಮೆಯ ಕನ್ನಡಿಗರನ್ನು ಒಳಗೊಂಡ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇನ್ನು ಬೆಂಗಳೂರಿನ ಸಂಸ್ಕೃತಿ ಹಾಗೂ ಧಾರ್ಮಿಕ ಶ್ರದ್ಧೆಯ ಅವಿಭಾಜ್ಯ ಅಂಗವಾಗಿರುವ ಕರಗ ಉತ್ಸವ ಆಚರಣೆಗೆ ಸರ್ಕಾರದಿಂದ ವಿಶೇಷ ಅನುದಾನವನ್ನು ಒದಗಿಸಲಾಗುವುದು. ಆಡಳಿತದಲ್ಲಿ, ಕೈಗಾರಿಕೋದ್ಯಮಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ವ್ಯಾಪಕ ಬಳಕೆಗಾಗಿ ಹಾಗೂ ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಿ 'ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತರಲಾಗುವುದು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಬದುಕು ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವರ ಜೀವನಗಾಥೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗುವುದು ಎಂದರು.
ನಾಡು ನುಡಿ ಸಂಸ್ಕೃತಿ ಕುರಿತು ಅಮೂಲ್ಯ ಕೃತಿಗಳನ್ನು ಪ್ರಕಟಿಸುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ 2 ಕೋಟಿ ರೂ. ನೆರವು ನೀಡಲಾಗುವುದು. ದೇಶವನ್ನು ಆಳಿದ ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ ಮತ್ತಿತರ ಕನ್ನಡದ ರಾಜವಂಶಗಳ ಇತಿಹಾಸ ಹಾಗೂ ಕೊಡುಗೆಗಳ ಬಗ್ಗೆ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಅಧ್ಯಯನ ಮಾಡಲಾಗುವುದು. ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಹಾಗೂ ಇಂದಿಗೂ ಕನ್ನಡ ನಾಡು-ನುಡಿಯ ಸೇವೆಯಲ್ಲಿ ಸಕ್ರಿಯವಾಗಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಿಗೆ ನೆರವು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಬಜೆಟ್ ಭಾಷಣದ ವೇಳೆ ವಿವರಿಸಿದ್ದಾರೆ.












Click it and Unblock the Notifications