BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಹೆಸರು ಫೈನಲ್
ಬಣ ಬಡಿದಾಟದಿಂದ ಒಡೆದ ಮನೆಯಾಗಿರುವ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಯ ಹಿನ್ನೆಲೆ ಬಿ.ವೈ.ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವೆ ಜಿದ್ದಾಜಿದ್ದಿ ಜೋರಾಗಿದೆ. ರಾಜ್ಯಾಧ್ಯಕ್ಷರ ಚುನಾವಣೆಗೆ ಯತ್ನಾಳ್ ಬಣದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಭರ್ಜರಿ ತಯಾರಿ ನಡೆದಿದ್ದು, ಇಂದು ಸಭೆ ನಡೆಸಿದೆ.
ಯತ್ನಾಳ್ ಬಣದ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಇಂದು ಸಭೆ ನಡೆದಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್ ಸೇರಿದಂತೆ ಬಿಜೆಪಿಯ ಬಂಡಾಯ ನಾಯಕರು ಸಭೆಯಲ್ಲಿ ಹಾಜರಾಗಿದ್ದರು. ಈಗಾಗಲೇ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನ ಪಡೆಯಲು ತೊಡೆ ತಟ್ಟಿರುವ ಈ ಬಣವು ಪ್ರಬಲ ಅಭ್ಯರ್ಥಿಯನ್ನೇ ರಾಜ್ಯಾಧ್ಯಕ್ಷ ಚುನಾವಣೆಗೆ ಇಳಿಸಲು ಸಜ್ಜಾಗಿದೆ.

ಈ ಹಿನ್ನೆಲೆ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ವಿಜಯೇಂದ್ರ ಅವರ ಎದುರು ಚುನಾವಣೆಗೆ ಯಾರನ್ನು ಕಣ್ಣಕ್ಕಿಳಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಯತ್ನಾಳ್ ಬಣದಿಂದ ಅಭ್ಯರ್ಥಿ ಹೆಸರು ಇನ್ನೆರಡು ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮುನ್ನ ಯತ್ನಾಳ್ ಬಣ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಇಂದು ಅಥವಾ ನಾಳೆ ಯತ್ನಾಳ್ ಬಣದ ರೆಬೆಲ್ಸ್ ಎಲ್ಲರೂ ದೆಹಲಿಗೆ ಹಾರಲಿದ್ದು, ಹೈಕಮಾಂಡ್ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ದೆಹಲಿಯಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಹೆಸರನ್ನು ಘೋಷಿಸುವುದಾಗಿಯೂ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ದೆಹಲಿಯಲ್ಲೇ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಯಡಿಯೂರಪ್ಪ ಅವರನ್ನು ಬಿಟ್ಟರೆ ಬಿಜೆಪಿ ಉಳಿಯಲ್ಲ ಅನ್ನೋ ಕಾಲ ಹೋಯ್ತು. ಯಡಿಯೂರಪ್ಪ ಅವರು ಇಲ್ಲದಿದ್ರೂ ಬಿಜೆಪಿ ನಡೆಯುತ್ತೆ. ಈಗಿರುವ ಹಾಲಿ ರಾಜ್ಯಾಧ್ಯಕ್ಷರು ಉದ್ಧಟತನ ಮೆರೆಯುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲೂ ಇದೇ ನಡೆ ಪ್ರದರ್ಶಿಸಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ವಿಜಯೇಂದ್ರ ಅವರು ಕೇಂದ್ರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಪದಾಧಿಕಾರಿಗಳು ಆಯ್ಕೆ ಬಗ್ಗೆಯೂ ಯಾರೂ ಕೇಳಲಿಲ್ಲ. ಸ್ಟೇರಿಂಗ್ ಇಲ್ಲದ ಗಾಡಿಯಂತೆ ವಿಜಯೇಂದ್ರ ಅವರು ಮನಬಂದಂತೆ ನಿರ್ಧಾರ ತೆಗೆದುಕೊಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಬಿಟ್ರೆ ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಅನ್ನೋ ವಾತಾವರಣ ಸೃಷ್ಟಿ ಮಾಡಿಬಿಟ್ಟಿದ್ದರು. ಆದರೆ ಈಗಿನ ಸ್ಥಿತಿ ಹಾಗಿಲ್ಲ. ಯಡಿಯೂರಪ್ಪ ಅವರ ಕುಟುಂಬ ಇಲ್ಲದಿದ್ದರೂ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಶಕ್ತಿ ನಮಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಎಸ್‌ವೈ ಕುಟುಂಬದ ವಿರುದ್ಧ ತೊಡೆತಟ್ಟಿದ್ದಾರೆ.
ಈಗಾಗಲೇ ವಿಜಯೇಂದ್ರ ವಿರುದ್ಧ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆಯಲಾಗಿದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಇದರಲ್ಲಿ ಯಾರೆಲ್ಲ ಸಹಿ ಹಾಕಿದ್ದಾರೆ ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಪಕ್ಷದ ಆಂತರಿಕ ವಿಚಾರವಾದ್ದರಿಂದ ತಮ್ಮ ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ವಿಜಯೇಂದ್ರ ಅವರ ನಡೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.












Click it and Unblock the Notifications