Karnataka BJP: ಡಾಲರ್ಸ್ ಕಾಲೋನಿ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಏನಾಯ್ತು?
ಬೆಂಗಳೂರು,ಡಿಸೆಂಬರ್ 01: ಕರ್ನಾಟಕದ ಬಿಜೆಪಿಯ ಬಣ ರಾಜಕೀಯ ಬೆಂಗಳೂರಿನಿಂದ ದೆಹಲಿ ತಲುಪಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಮುಂದುವರೆದಿರುವ ವಾಕ್ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ನಿವಾಸದಲ್ಲಿ ಭಾನುವಾರ ಹೈವೋಲ್ಟೇಜ್ ಮೀಟಿಂಗ್ ನಡೆದಿದ್ದು, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸಹ ಆಗಮಿಸಿದ್ದರು.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ 'ಧವಳಗಿರಿ' ನಿವಾಸದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧಿ ಬಣದ ಮಹತ್ವದ ಸಭೆ ನಡೆದಿದೆ. ಅನೇಕ ಮಾಜಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಉಪಹಾರ ಕೂಟದ ಜೊತೆ ಜೊತೆಗೆ ಈ ಸಭೆ ನಡೆದಿದ್ದು, ದೆಹಲಿಯಲ್ಲಿ ನಡೆದ ಬೆಳವಣಿಗೆ ಕುರಿತು ಸಹ ಮಾಜಿ ಶಾಸಕರಿಗೆ ವಿಜಯೇಂದ್ರ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವರಿಷ್ಠರನ್ನು ಭೇಟಿ ಮಾಡಿ ಶನಿವಾರ ರಾತ್ರಿ ಬಿ. ವೈ. ವಿಜಯೇಂದ್ರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಬೆಂಬಲಿಗರ ಜೊತೆ ಭಾನುವಾರ ಬೆಳಗಾವಿಯಲ್ಲಿದ್ದಾರೆ. ಕರ್ನಾಟಕ ಬಿಜೆಪಿ ಬಣ ರಾಜಕೀಯಕ್ಕೆ ದೆಹಲಿಯಲ್ಲಿಯೇ ತಡೆ ಹಾಕಲಾಗುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ.
ಯಾರು, ಯಾರು ಭಾಗಿ?; ಧವಳಗಿರಿ ನಿವಾಸದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾಜಿ ಶಾಸಕರಾದ ಎಂ. ಪಿ. ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಸೋಮಶೇಖರ ರೆಡ್ಡಿ, ಬಿ. ಸಿ. ಪಾಟೀಲ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಮಾಜಿ ಶಾಸಕರು, ಸಚಿವರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಜೊತೆ ಪಕ್ಷದ ಬೆಳವಣಿಗೆ ಕುರಿತು ವಿವರವಾಗಿ ಚರ್ಚಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಎಂ. ಪಿ. ರೇಣುಕಾಚಾರ್ಯ, "ಶಾಸಕ ಯತ್ನಾಳ್ಗೆ ಶಕ್ತಿ ಎಲ್ಲಿದೆ?. ಅವರು ಇರುವುದು ನಾಲ್ಕೇ ಜನರು. ಡಿಸೆಂಬರ್ 11ರಂದು ದಾವಣಗೆರೆಯಲ್ಲಿ ಮತ್ತೆ ಸಭೆ ಸೇರುತ್ತೇವೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಬೇಕೆ?, ಬೇಡವೇ? ಎಂದು ತೀರ್ಮಾನ ಮಾಡುತ್ತೇವೆ" ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, "ಯಾವುದೋ ಕಾರಣಕ್ಕೆ ಜನರು ನಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಜನರು ನಮ್ಮನ್ನು ತಿಪ್ಪೆಗೆ ಎಸೆದಿಲ್ಲ. ಆದರೆ ನಿಮ್ಮ ರೀತಿ ಪೇಪರ್ ಸಿಂಹ ನಾನಲ್ಲ. ಮೈಸೂರಲ್ಲಿ ಎಷ್ಟು ಸಂಘಟನೆ ಮಾಡಿದ್ದೀರಿ?, ಎಷ್ಟು ಜನರನ್ನು ಗೆಲ್ಲಿಸಿದ್ದೀರಿ?" ಎಂದು ಪ್ರಶ್ನಿಸಿದರು.
ಕರ್ನಾಟಕ ಬಿಜೆಪಿ ಬಣ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಆಪ್ತರ ಉಚ್ಚಾಟನೆಗೆ ಯಡಿಯೂರಪ್ಪ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.
ಶನಿವಾರ ಎಂ. ಪಿ. ರೇಣುಕಾಚಾರ್ಯ ಮತ್ತು ಇತರರು ಮೈಸೂರಿನಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದಿದ್ದರು. ದುಷ್ಟ ಸಂಹಾರ ಆಗುತ್ತದೆ ಎಂದು ಹೇಳಿದ್ದರು. ಭಾನುವಾರ ಡಾಲರ್ಸ್ ಕಾಲೋನಿಯಲ್ಲಿ ಯಡಿಯೂರಪ್ಪ, ವಿಜಯೇಂದ್ರ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದಾರೆ.
ಇತ್ತ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಸಭೆಯನ್ನು ನಡೆಸಿದರು. ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಯಾವ ಯಾವ ವಿಷಯ ಚರ್ಚಿಸಬೇಕು? ಎಂದು ಸಭೆಯಲ್ಲಿ ಮಾತುಕತೆ ನಡೆದಿದೆ.
ಇನ್ನು ಬಿಜೆಪಿ ಬೆಳವಣಿಗೆ ಬಗ್ಗೆ ಮಾಜಿ ಸಚಿವ, ಎಂಎಲ್‌ಸಿ ಸಿ. ಟಿ. ರವಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. "ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆ ಅಲ್ಲ, ಜೀವನದ ಜೀವಾಳ. ರಾಷ್ಟ್ರ ನಿಷ್ಠೆ - ಪಕ್ಷ ನಿಷ್ಠೆ ಅತ್ಯಂತ ಶ್ರೇಷ್ಠವಾದದ್ದು" ಇವತ್ತಿನ ಬಿಜೆಪಿಯ ಕೆಲವರ ಹೇಳಿಕೆ-ಪ್ರತಿಹೇಳಿಕೆ (ನಿಷ್ಠಾವಂತರ?) ಕೇಳುತ್ತಾ ಹಿರಿಯರಾದ ದಿವಂಗತ ಅನಂತ್ ಕುಮಾರ್ ಅವರು ಹೇಳುತ್ತಿದ್ದ ಮೇಲಿನ ಮಾತು ನೆನಪಾಯಿತು. #ಹಾಗೆಸುಮ್ಮನೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.












Click it and Unblock the Notifications