ಸಿಎಂ ಅಭ್ಯರ್ಥಿಯೆಂದು ಹರಿದಾಡುತ್ತಿದ್ದ ಸುದ್ದಿಗೆ ಅನಂತ್ ಕುಮಾರ್ ಹೆಗಡೆ ಸ್ಪಷ್ಟನೆ
ಶಿರಸಿ, ನ 7: ಕೇಂದ್ರ ಕೌಶಲಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ, ಕರ್ನಾಟಕದ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹರಿದಾಡುತ್ತಿದ್ದ ಸುದ್ದಿಗೆ ಖುದ್ದು ಹೆಗಡೆ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ (ನ 6) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅನಂತ್ ಕುಮಾರ್ ಹೆಗಡೆ, ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸು ನನಗೆ ಬಿದ್ದಿಲ್ಲ. ಈ ಸುಳ್ಳುಸುದ್ದಿ ಹೇಗೆ ಹರಿದಾಡಲಾರಂಭಿಸಿತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಸಿಎಂ ಅಭ್ಯರ್ಥಿ ಎನ್ನುವ ಯಾವುದೇ ಸೂಚನೆ ನನಗೆ ವರಿಷ್ಠರಿಂದ ಬಂದಿಲ್ಲ ಎಂದು ಸ್ಪಷ್ಟ ಪಡಿಸಿರುವ ಹೆಗಡೆ, ಈ ಬಗ್ಗೆ ನನಗೆ ಯಾವುದೇ ಆಲೋಚನೆ ಇಲ್ಲ ಎಂದು ಹೆಗಡೆ ಹೇಳಿದ್ದಾರೆ.
ಟಿಪ್ಪು ಜಯಂತಿ ಕಾರ್ಯಕ್ರಮದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಈ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಅತ್ಯಂತ ಸ್ಪಷ್ಟವಾಗಿ, ಲಿಖಿತ ರೂಪದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದರೂ ನನ್ನ ಹೆಸರು ಹಾಕಲಾಗಿದೆ. ನನ್ನ ನಿಲುವೇನು ಎಂದು ಟಿಪ್ಪುಜಯಂತಿಯ ದಿನದಂದೇ ಸ್ಪಷ್ಟಪಡಿಸುತ್ತೇನೆಂದು ಹೆಗಡೆ ಹೇಳಿದ್ದಾರೆ.
ರಾಜ್ಯ ಬಿಜೆಪಿ ಹಿರಿಯ ಮುಖಂಡರ ಒಳಜಗಳದಿಂದ ಬೇಸತ್ತು, ವರಿಷ್ಠರು ಅನಂತ್ ಕುಮಾರ್ ಹೆಗಡೆಯವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯಥಿ ಎಂದು ಗುರುತಿಸಿದ್ದಾರೆ. ಮುಂದಿನ ಅಸೆಂಬ್ಲಿ ಚುನಾವಣೆಯ ಮತದಾನ ಮುಗಿದ ಕೂಡಲೇ ಅನಂತ್ ಕುಮಾರ್ ಹೆಗಡೆ, ಸಿಎಂ ಅಭ್ಯರ್ಥಿ ಎಂದು ವರಿಷ್ಠರು ಘೋಷಿಸಲಿದ್ದಾರೆನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿತ್ತು ಮತ್ತು ಕೆಲವೊಂದು ಅಂತರ್ಜಾಲಗಳೂ ವರದಿ ಮಾಡಿದ್ದವು.












Click it and Unblock the Notifications