Karnataka Bandh Tomorrow: ಕರ್ನಾಟಕ ಬಂದ್: ಡಿ.ಕೆ ಶಿವಕುಮಾರ್ ಮೇಲೆ ಕನ್ನಡಪರ ಸಂಘಟನೆಗಳು ಗರಂ!
Karnataka Bandh March 22: ಕರ್ನಾಟಕ ಬಂದ್ ವಿಚಾರವು ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಕರ್ನಾಟಕ ಬಂದ್‌ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಂಬಲ ನೀಡದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಅವರು ಡಿ.ಕೆ ಶಿವಕುಮಾರ್ ಅವರ ಮೇಲೆ ಗರಂ ಆಗಿದ್ದಾರೆ. ಕರ್ನಾಟಕ ಬಂದ್ ಮಾಡುತ್ತೇವೆ ಎಂದು ನಾವು ಕಳೆದ 20 ದಿನಗಳಿಂದಲೂ ಹೇಳುತ್ತಿದ್ದೇವೆ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆಗೆ ಕ್ರಮ ಆಗಬೇಕು. ರಾಜ್ಯದಲ್ಲಿ ಮರಾಠಿ ಪುಂಡರ ಹಾವಳಿ ಹಾಗೂ ಎಂಇಎಸ್ ಪುಂಡರ ಪುಂಡಾಟ ನಿಲ್ಲಬೇಕು. ಮೇಕೆದಾಟು ಯೋಜನೆ ಜಾರಿಯಾಗಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಮಾರ್ಚ್ 22ಕ್ಕೆ / ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ, ಈ ಬಂದ್‌ಗೆ ಸರ್ಕಾರ ತಟಸ್ಥ ನಿಲುವು ಕನ್ನಡಪರ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ.

ನಿಮ್ಮ ಬೆಂಬಲ ಯಾರು ಕೇಳಿದ್ರು..
ಇನ್ನು ಕರ್ನಾಟಕ ಬಂದ್‌ಗೆ ಸರ್ಕಾರ / ನಮ್ಮ ಬೆಂಬಲ ಇಲ್ಲ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದಕ್ಕೆ ಸಾರಾ ಗೋವಿಂದು ಅವರು ಗರಂ ಆಗಿದ್ದಾರೆ. ನಿಮ್ಮ ಬೆಂಬಲ ಕೇಳಿದ್ದಾದರೂ ಯಾರು. ನಾವು ಕಳೆದ 20 ದಿನಗಳಿಂದ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. ನೀವು ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡಿದ್ದು ನೆನಪಿದ್ಯಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕನ್ನಡಪರ ಒಕ್ಕೂಟಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬೆಂಬಲ ನೀಡುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸಾರ್ವಜನಿಕರು ಕಾನೂನು ಬಾಹಿರವಾಗಿ ನಡೆದುಕೊಳ್ಳಬಾರದು. ಕಾನೂನು ಉಲ್ಲಂಘನೆ ಮಾಡಬಾರದು. ಸರ್ಕಾರ ಅಥವಾ ನ್ಯಾಯಾಲಯ ಬಂದ್‌ಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಬಂದ್ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅವರಿಗೆ ಮನವರಿಕೆ ಮಾಡುತ್ತೇವೆ ಎಂದಿದ್ದಾರೆ. ಇದು ಕನ್ನಡಪರ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ.
ನಮ್ಮೊಂದಿಗೆ ಚರ್ಚೆ ಮಾಡಿಲ್ಲ: ಇನ್ನು ಇದೇ ಸಂದರ್ಭದಲ್ಲಿ ಕನ್ನಡಪರ ಒಕ್ಕೂಟಗಳು ಕರ್ನಾಟಕ ಬಂದ್ ವಿಚಾರವಾಗಿ ನಮ್ಮೊಂದಿಗೆ ಮಾತುಕತೆಯನ್ನೇ ನಡೆಸಿಲ್ಲ ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳು ಹೇಳಿವೆ. ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸಂಬಂಧಿಸಿದಂತೆ ನಮ್ಮೊಂದಿಗೆ ಯಾರೂ ಮಾತುಕತೆ ನಡೆಸಿಲ್ಲ. ಈ ಕಾರಣದಿಂದಾಗಿ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳು ಹೇಳಿವೆ.
ಕರ್ನಾಟಕ ಬಂದ್ ಕಾವು ಶುಕ್ರವಾರ ಸಂಜೆಯಿಂದಲೇ ಜೋರಾಗುವ ಸಾಧ್ಯತೆ ಇದೆ. ಇನ್ನು ಬಂದ್‌ಗೆ ಸಂಬಂಧಿಸಿದಂತೆ ಖಾಸಗಿ ಕಂಪನಿಗಳು ಯಾವುದೇ ಸ್ಪಷ್ಟತೆ ನೀಡಿಲ್ಲ. ಬಂದ್‌ಗೆ ಬೆಂಬಲ ನೀಡುವ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಬಂದ್‌ಗೆ ಮನವಿ
ಅಖಂಡ ಕರ್ನಾಟಕ ಬಂದ್ ಅಂಗವಾಗಿ ಬೆಂಗಳೂರಿನ ಪ್ರಮುಖ ಮಾಲ್‌ಗಳಾದ ಒರಿಯನ್ ಮಾಲ್, ಮಂತ್ರಿ ಮಾಲ್, ಯಶವಂತಪುರದ ಮೆಟ್ರೋ ಹೋಲ್ ಸೇಲ್ ಮಾರ್ಕೆಟ್, ರಾಜಾಜಿನಗರದ ರಾಮೇಶ್ವರ ಕೆಫೆ, ಅಧಿಕಾರಿಗಳೊಂದಿಗೆ ಕನ್ನಡ ಒಕ್ಕೂಟದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಹಾಗೂ ಕನ್ನಡಪರ ಹೋರಾಟಗಾರರು ಭೇಟಿ ನೀಡಿ ಬಂದ್‌ಗೆ ಬೆಂಬಲಿಸುವಂತೆ ಆಗ್ರಹಿಸಿದ್ದಾರೆ.
ಕನ್ನಡಿಗರಿಗೆ ಉದ್ಯೋಗ, ಕನ್ನಡಿಗರ ಮೇಲಾಗುತ್ತಿರುವ ಅನ್ಯಾಯಕ್ಕೆ, ಪರಭಾಷೆಗೆ ದಬ್ಬಾಳಿಕೆ ರಾಜ್ಯದ ಜ್ವಲಂತ ಸಮಸ್ಯೆಗಳ ಬೇಡಿಕೆಗಳನ್ನು ಇಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ಶಕ್ತಿಯನ್ನು ಪ್ರದರ್ಶಿಸಲು ಇದೇ ತಿಂಗಳ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಎಲ್ಲಾ ಸಿಬ್ಬಂದಿ ವ್ಯಾಪಾರಸ್ಥರು ಬಂದ್‌ಗೆ ಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಂಗಡಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಕನ್ನಡಪರ ಸಂಘಟನೆಯ ಸದಸ್ಯರು ನಾಳೆ ನಡೆಯಲಿರುವ ಬಂದ್‌ಗೆ ಬೆಂಬಲ ಕೊಡಿ ಎಂದು ಹೂವು ನೀಡುವ ಮೂಲಕ ಮನವಿ ಮಾಡುತ್ತಿದ್ದಾರೆ. ನಾಳೆ ಕನ್ನಡಿಗರಿಗಾಗಿ ಬಂದ್ ಮಾಡಲಾಗುತ್ತಿದೆ. ನೀವೆಲ್ಲರೂ ಬಂದ್‌ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇನ್ನು ಹುಬ್ಬಳ್ಳಿಯಲ್ಲಿ ಸಾರಿಗೆ ವ್ಯವಸ್ಥೆ ಎಂದಿನಂತೆ ಇರಲಿದೆ ಎಂದು ಹೇಳಲಾಗಿದೆ. ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ವಿಚಾರವಾಗಿ ಹುಬ್ಬಳ್ಳಿಯಲ್ಲಿ NWKSRTC MD ಪ್ರಿಯಾಂಗ್ ಅವರು ಮಾತನಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಎಂದಿನಂತೆ ಸಾರಿಗೆ ವ್ಯವಸ್ಥೆ
ನಾಳೆ ಎಂದಿನಂತೆ ಸಾರಿಗೆ ಸಂಚಾರ ಇರುತ್ತದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸಂಚಾರ ಇರುತ್ತದೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ, ಉತ್ತರ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿನ ಸಾರಿಗೆ ಸಂಸ್ಥೆ ಏಳು ಜಿಲ್ಲೆಯ ವ್ಯಾಪ್ತಿಯ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ ಹಾಗೂ ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿನ ಸಂಸ್ಥೆಯಲ್ಲಿ ಯಥಾಸ್ಥಿತಿ ಸಾರಿಗೆ ಸೇವೆ ಇರಲಿದೆ. ಸಾರಿಗೆ ಸಚಿವರು ಸಾರಿಗೆ ಸಂಚಾರ ಕುರಿತು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾವುದೇ ರೀತಿಯ ತೊಂದರೆ ಆಗಬಾರದು ಜನರಿಗೆ. ಏನಾದರೂ ಅಹಿತಕರ ಘಟನೆಗಳು ನಡೆಯಂತೆ ಭದ್ರತೆ ವ್ಯವಸ್ಥೆ ಆಗಿದೆ. ಪೊಲೀಸ್ ಇಲಾಖೆಗೆ ಭದ್ರತೆ ನೀಡಲು ಕೇಳಿಕೊಂಡಿದ್ದೇವೆ ಹಾಗೂ ನಮ್ಮ ಇಲಾಖೆಯ ಭದ್ರತಾ ವಿಭಾಗ ಸಹ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾರಿಗೆ ಇನ್ನೂ ಗೊಂದಲ: ಇನ್ನು ರಾಜ್ಯದಲ್ಲಿ ಬಂದ್‌ಗೆ ಕ್ಷಣಗಣನೆ ಪ್ರಾರಂಭವಾಗಿದ್ದರೂ ನಾಳೆ ಸಾರಿಗೆ ಸೇವೆ ಇರಲಿದೆಯೇ ಇಲ್ಲವೇ ಎನ್ನುವ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ರಾಜ್ಯದಲ್ಲಿ ನಾಳೆ ಮಾರ್ಚ್ 22ಕ್ಕೆ ಕರ್ನಾಟಕ ಬಂದ್‌ಗೆ ಶುಕ್ರವಾರ ಸಂಜೆಯಿಂದಲೇ ಜನ ಸಿದ್ಧರಾಗುತ್ತಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಯನ್ನು ಪ್ರಾರಂಭಿಸಿದ್ದಾರೆ.












Click it and Unblock the Notifications