ಸದನದಲ್ಲಿ ಡಿಕೆ ಶಿವಕುಮಾರ್ ಬಾಯಲ್ಲಿ ಸರ್ವಜ್ಞ ವಚನ!
ಬೆಂಗಳೂರು, ಜು. 15 : ಮುಂಗಾರು ಅಧಿವೇಶನದ ಮಂಗಳವಾರದ ಕಲಾಪಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಲಿಂಬೆ ಹಣ್ಣು ಹಿಡಿದುಕೊಂಡು ಬಂದಿದ್ದರು. ಇಂಧನ ಇಲಾಖೆ ಬಗ್ಗೆ ಸೋಮವಾರ ನಡೆದ ಚರ್ಚೆಗೆ ಉತ್ತರಿಸಲು ಸಕಲ ರೀತಿಯಲ್ಲಿ ಸಜ್ಜಾಗಿ ಬಂದಿದ್ದ ಸಚಿವರು, ಹಿಂದೆ ನಡೆದದ್ದನ್ನು ಕೆದಕುವುದು ಬೇಡ, ವಿದ್ಯುತ್ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು.
ವಿಧಾನಸಭೆ ಕಲಾಪ ಇಂಧನ ಇಲಾಖೆ ಮೇಲಿನ ಚರ್ಚೆಗೆ ಉತ್ತಿರಿಸಲು ಎದ್ದುನಿಂತ ಡಿ.ಕೆ.ಶಿವಕುಮಾರ್, ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಏನು ಅಧ್ಯಕ್ಷರೇ ಬಹಳ ನಗುಮುಖದಿಂದಲೇ ಬಂದಿದ್ದೀರಿ? ಎಂದು ಪ್ರಶ್ನಿಸಿದರು. ನಿಮ್ಮನ್ನೆಲ್ಲ ಸಂಭಾಳಿಸಬೇಕಾದರೆ, ನಗುಮುಖ ಇಲ್ಲದೆ ಇದ್ದರೆ ಹೇಗಪ್ಪ? ಎಂದು ಸ್ಪೀಕರ್ ಮರು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಯುತ್ತಿರುವ ಮಳೆಯ ಬಗ್ಗೆ ಮಾತನಾಡಿದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಇಂಧನ ಸಚಿವರು ಕಿಗ್ಗಾಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನೂ ಸ್ವಲ್ಪ ಕಾಲ ಅವರು ಅಲ್ಲೇ ಇದ್ದರೆ ರಾಜ್ಯದ ತುಂಬ ಮಳೆಯೂ ಬರಬಹುದು ಎಂದರು. [ಸೋಮವಾರದ ಕಲಾಪದ ಮುಖ್ಯಾಂಶಗಳು]
ತಾವು ತಂದ ನಿಂಬೆಹಣ್ಣಿನ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಸಚಿವರು, ಸದನಕ್ಕೆ ಬರಬೇಕಾದರೆ ಯಾರೋ ನಿಂಬೆಹಣ್ಣು ಕೊಟ್ಟರು, ನನಗೆ ಸುಗಂಧರಾಜ ಹೂವಿನ ಹಾರ ಆಗುವುದಿಲ್ಲ. ಅದು ಅಲರ್ಜಿ. ಅದಕ್ಕೆ ನಿಂಬೆಹಣ್ಣೇ ತೆಗೆದುಕೊಂಡು ಬಂದೆ ಎಂದು ಹೇಳುತ್ತಲೇ "ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕರಿಯಿಲ್ಲ, ಶಂಭುಗಿಂತ ದೇವರಿಲ್ಲ" ಎಂದು ಸರ್ವಜ್ಞನ ವಚನವನ್ನು ಹೇಳಿದರು. [ಮೋದಿ ತರ ನೀವೂ ಕೆಲಸ ಮಾಡಿ : ಡಿಕೆಶಿಗೆ ಎಚ್ಡಿಕೆ ಸಲಹೆ]
ವಿದ್ಯುತ್ ಸಮಸ್ಯೆ ಬಗ್ಗೆ ಡಿ.ಕೆ.ಶಿವಕುಮಾರ್ ಉತ್ತರ : ಬೆಂಗಳೂರು ನಗರವನ್ನು ಸೋಲಾರ್ ಸಿಟಿಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ಸದನಕ್ಕೆ ಮಾಹಿತಿ ನೀಡಿದ್ದಾರೆ. ಮನೆಗಳ ಮೇಲೆ ಸೋಲಾರ್ ಫಲಕ ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವಂತಹ ಯೋಜನೆ ಇದಾಗಿದೆ. ರೈತರು ಸಹ ತಮ್ಮ ಜಮೀನಿನಲ್ಲಿ ಸೋಲಾರ್ ಘಟಕ ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು ಇದಕ್ಕೆ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು ಮಹಾನಗರದ ವಿದ್ಯುತ್ ಸಮಸ್ಯೆ ನಿವಾರಣೆಗಾಗಿ 2027 ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಹಂತ-ಹಂತವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.












Click it and Unblock the Notifications