ಬೆಳಗಾವಿಯಲ್ಲಿ ಐತಿಹಾಸಿಕ ಸಮಾವೇಶ: ರಾಹುಲ್‌ರಿಂದ ಕಾಂಗ್ರೆಸ್ಸಿನ ಹೊಸ ‘ಗ್ಯಾರೆಂಟಿ’ ಅನಾವರಣ: ಈ ಬಾರಿ ಯುವಕರೇ ಟಾರ್ಗೆಟ್
ಈಗಾಗಲೇ ಮೂರು ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್, ಹೊಸ ಗ್ಯಾರಂಟಿ ಘೋಷಣೆಗೆ ಸಜ್ಜಾಗಿದೆ. ಇದು ಯುವಕರನ್ನು ಗುರಿಯಾಗಿಸಿ ನೀಡುವ ಗ್ಯಾರಂಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು, ಮಾರ್ಚ್ 16: ಕರ್ನಾಟಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಬೆಳಗಾವಿಯಲ್ಲಿ ತಮ್ಮ ಮೊದಲ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿ ಅವರು ಯುವಕರಿಗೆ ಪಕ್ಷದ ಹೊಸ ಗ್ಯಾರಂಟಿಯನ್ನು ಅನಾವರಣಗೊಳಿಸುವ ನಿರೀಕ್ಷೆ ಇದೆ. ಈಗಾಗಲೇ ಮೂರು ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್, ಹೊಸ ಗ್ಯಾರಂಟಿ ಘೋಷಣೆಗೆ ಸಜ್ಜಾಗಿದೆ. ಇದು ಯುವಕರನ್ನು ಗುರಿಯಾಗಿಸಿ ನೀಡುವ ಗ್ಯಾರಂಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಗ್ಲೆಂಡ್‌ನಿಂದ ದೆಹಲಿಗೆ ಮರಳಿದ ರಾಹುಲ್
ಯುನೈಟೆಡ್ ಕಿಂಗ್‌ಡಂನಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ರಾಷ್ಟ್ರ ರಾಜಧಾನಿ ನವದೆಹಲಿಗೆ ಮರಳಿದ್ದಾರೆ. ಅವರು ಶೀಘ್ರದಲ್ಲೇ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ ಎಂದು 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ವರದಿ ಮಾಡಿದೆ.

ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆ
ಈ ಬಾರಿ ಯುವಕರಿಗೆ ಅನುಕೂಲವಾಗುವಂತೆ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿನ ನಾಲ್ಕನೇ ಭರವಸೆಯನ್ನು ರಾಹುಲ್ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆಯನ್ನು ರಾಹುಲ್ ಘೋಷಿಸುವ ನಿರೀಕ್ಷೆಯಿದೆ ಎಂದು ಕರ್ನಾಟಕದ ಕಾಂಗ್ರೆಸ್ ಘಟಕದ ನಾಯಕರೊಬ್ಬರು ಹೇಳಿದ್ದಾರೆ. ಆದರೆ, ಪಕ್ಷದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಭತ್ಯೆ
ಇತ್ತೀಚೆಗೆ, ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಸರ್ಕಾರವು ತನ್ನ ಬಜೆಟ್‌ನಲ್ಲಿ ನಿರುದ್ಯೋಗಿ ಯುವಕರಿಗೆ ಗರಿಷ್ಠ ಎರಡು ವರ್ಷಗಳವರೆಗೆ ಮಾಸಿಕ 2,500 ರೂ. ಭತ್ಯೆ ಘೋಷಿಸಿತ್ತು. ಚುನಾವಣಾ ಪೂರ್ವದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಕರ್ನಾಟಕದಲ್ಲಿ ಸರಣಿ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಐದು ಭರವಸೆಗಳ ಅನಾವರಣ
ಪಕ್ಷವು ಐದು ಭರವಸೆಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಇದುವರೆಗೆ ಮೂರು ಭರವಸೆಗಳನ್ನು ಘೋಷಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 'ಗೃಹ ಲಕ್ಷ್ಮಿ' ಯೋಜನೆಯನ್ನು ಅನಾವರಣ ಗೊಳಿಸಿದ್ದರು. ಇದು ಮಹಿಳೆಗೆ ತಿಂಗಳಿಗೆ 2,000 ರೂ. ನೀಡುವ ಖಾತರಿಯಾಗಿದೆ. ಕಾಂಗ್ರೆಸ್ ಪಕ್ಷವು 'ಗೃಹ ಜ್ಯೋತಿ' ಗ್ಯಾರೆಂಟಿಯನ್ನು ಘೋಷಿಸಿದೆ. ಇದು 200 ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡಲಿದೆ. ಕಾಂಗ್ರೆಸ್‌ನಿಂದ 'ಅನ್ನ ಭಾಗ್ಯ' ಘೋಷಣೆಯಾಗಿದೆ. ಇದು ಪ್ರತಿ ತಿಂಗಳಿಗೆ ಬಡವರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಘೋಷಿಸಿದೆ.

ಖಾತ್ರಿ ಕಾರ್ಡ್ ನೀಡುವ ಅಭಿಯಾನ
ಪ್ರಸ್ತುತ, ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ 'ಖಾತ್ರಿ ಕಾರ್ಡ್' ಅನ್ನು ನೀಡುವ ಅಭಿಯಾನದಲ್ಲಿ ತೊಡಗಿದ್ದಾರೆ. ಅವರು ಅಧಿಕಾರಕ್ಕೆ ಬಂದ ನಂತರ ಘೋಷಣೆಗಳನ್ನು ಈಡೇರಿಸುವುದಾಗಿ ಜನರಿಗೆ ಭರವಸೆಯನ್ನೂ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ರಾಜ್ಯದ ಎಲ್ಲ ಮನೆ-ಮನೆಗಳಿಗೂ ತಲುಪಲು ‘ಬಾಗಿಲು ತಟ್ಟಿ' ಕಾರ್ಯಕ್ರಮವನ್ನೂ ಕಾಂಗ್ರೆಸ್ ಪಕ್ಷ ಆಯೋಜಿಸಿತ್ತು.

ಕಾಂಗ್ರೆಸ್‌ನಿಂದ ಹಲವು ಅಭಿಯಾನಗಳು
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ನೇತೃತ್ವದಲ್ಲಿ ಮೂರು ‘ಯಾತ್ರೆ' ಕೈಗೊಳ್ಳಲಾಗಿದೆ. ಪಕ್ಷವು ಈ ಹಿಂದೆ '40 ಪರ್ಸೆಂಟ್ ಸರ್ಕಾರ' ಮತ್ತು 'PayCM' ಅಭಿಯಾನಗಳನ್ನು ಪ್ರಾರಂಭಿಸಿತ್ತು.

ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ
ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಚುನಾವಣೆ ಆಯೋಗವು ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಿದೆ. ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್ ಘೋಷಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಮುಂದಿನ ವಾರದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಘೋಷಿಸಲಿದೆ. ಈ ಬಾರಿಯೂ ಮೂರು ಪಕ್ಷಗಳ ನಡುವೆ ಹಣಾಹಣಿ ಏರ್ಪಟ್ಟಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷವೂ ತನ್ನ ಅದೃಷ್ಟವನ್ನು ಪರೀಕ್ಷಿಸಲು ಹೊರಟಿದೆ.












Click it and Unblock the Notifications