ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದ ಆರೋಪದ ತನಿಖೆಗೆ ನಾನು ಸಿದ್ಧ, ಆದರೆ, ಬಿಜೆಪಿ ನಾಯಕರೇ ನನ್ನ ಪ್ರಶ್ನೆಗೆ ಉತ್ತರಿಸಿ: ಸಿದ್ದರಾಮಯ್ಯ ಸವಾಲ್

ಚುನಾವಣೆ ಹತ್ತಿರದಲ್ಲಿದ್ದ ಹಾಗೆ ರಾಜಕೀಯ ನಾಯಕರು ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಬಿಜೆಪಿ ನಾಯಜರು ಸಿದ್ದರಾಮಯ್ಯ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪ ತೀವ್ರವಾಗಿ ಸ್ಫೋಟಗೊಂಡಿದೆ.

|
Google Oneindia Kannada News

ಬೆಂಗಳೂರು, ಜನವರಿ. 24: ರಾಜ್ಯ ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದು ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. ಸಚಿವರಾದ ಡಾ.ಅಶ್ವತ್ಥ್ ನಾರಾಯಣ, ಡಾ.ಕೆ.ಸುಧಾಕರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಮಂಗಳವಾರ ವಾಗ್ದಾಳಿ ನಡೆಸಿ ಸವಾಲು ಹಾಕಿದ್ದಾರೆ.

ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವುದರ ತನಿಖೆಗೆ ನಾನು ಸಿದ್ಧನಿದ್ದೇನೆ. ಆದರೆ, ಅದಕ್ಕೂ ಮೊದಲು ಬಿಜೆಪಿ ನಾಯಕರು ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

Karnataka assembly election: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ, ನಾಟಕವಾಡುತ್ತಿದ್ದಾರೆ ಎಂದ ಯಡಿಯೂರಪ್ಪKarnataka assembly election: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ, ನಾಟಕವಾಡುತ್ತಿದ್ದಾರೆ ಎಂದ ಯಡಿಯೂರಪ್ಪ

"ರಾಜ್ಯ ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ನಾನು ಸಿದ್ಧನಿದ್ದೇನೆ. ಆದರೆ...ಇದಕ್ಕಿಂತ ಮೊದಲು ನನ್ನ ಸರಳ ಪ್ರಶ್ನೆಯೊಂದಕ್ಕೆ ಉತ್ತರಿಸಿ. ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿರುವವರು ಈಗ ಯಾಕೆ ಬಾಯಿ ಬಡಿದುಕೊಳ್ಳುತ್ತಿದ್ದೀರಿ..?" ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಕಳಂಕ ತೊಳೆದುಕೊಳ್ಳಲು ನನ್ನ ಮೇಲೆ ಆರೋಪ

"ಅಧಿಕಾರಕ್ಕೆ ಬಂದು ಮೂರು ಮುಕ್ಕಾಲು ವರ್ಷ ತೆಪ್ಪಗಿದ್ದ ಬಿಜೆಪಿ ನಾಯಕರು ಈಗ ಯಾಕೆ ಈ ಆರೋಪ ಮಾಡುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳುವಷ್ಟು ರಾಜ್ಯದ ಜನ ಪ್ರಬುದ್ಧರಿದ್ದಾರೆ. ತಮ್ಮ ಮೈತುಂಬಾ ಮೆತ್ತಿಕೊಂಡಿರುವ ಕಳಂಕವನ್ನು ತೊಡೆದುಹಾಕಲು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ. ಮಾತುಮಾತಿಗೆ ಧಮ್, ತಾಖತ್ ಎಂದು ಬೊಬ್ಬಿಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ಇಲ್ಲಿಯವರೆಗೆ ತನಿಖೆ ಮಾಡದೆ ಸುಮ್ಮನಿದ್ದುದು ಯಾಕೆ..? ಧಮ್ ತಾಖತ್ ಇರಲಿಲ್ಲವೇ..?" ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ನನ್ನ ರಾಜಕೀಯ ಜೀವನ ತೆರೆದ ಕನ್ನಡಿ- ಸಿದ್ದರಾಮಯ್ಯ

ನನ್ನ ರಾಜಕೀಯ ಜೀವನ ತೆರೆದ ಕನ್ನಡಿ- ಸಿದ್ದರಾಮಯ್ಯ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಸ್ಥಾನವೂ ಸೇರಿದಂತೆ ಹಲವಾರು ಅಧಿಕಾರ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹದಿಮೂರು ಬಜೆಟ್ ಮಂಡಿಸಿದ್ದೇನೆ. ಇಲ್ಲಿಯವರೆಗೆ ಯಾರಾದರೂ ಒಬ್ಬ ಗುತ್ತಿಗೆದಾರ ನನ್ನ ವಿರುದ್ಧ ಲಂಚದ ಆರೋಪ ಮಾಡಿದ್ದಾರೆಯೇ? ನನ್ನ ರಾಜಕೀಯ ಜೀವನ ತೆರೆದ ಕನ್ನಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಸುಧಾಕರ್ ನನ್ನ ವಿರುದ್ಧ 35 ಸಾವಿರ ಕೋಟಿ ರೂಪಾಯಿಯ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಬಿಡದೆ ಖಜಾನೆ ಲೂಟಿ ಮಾಡಿದವರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಪ್ರಸಂಗದಂತೆ ಕಾಣುತ್ತಿದೆ. ಸಚಿವ ಸುಧಾಕರ್ ಮೊದಲು ನಾವು ಬಯಲು ಮಾಡಿದ ಸುಮಾರು ಐದು ಸಾವಿರ ಕೋಟಿ ಮೊತ್ತದ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ದುಡ್ಡಿನ ಲಾಲಸೆಗಾಗಿ ಅಮಾಯಕ ಜನರ ಪ್ರಾಣದ ಜೊತೆ ಚೆಲ್ಲಾಟ ನಡೆಸಿದವರಿಗೆ ನನ್ನ ವಿರುದ್ಧ ಆರೋಪ ಮಾಡಲು ಯಾವ ನೈತಿಕತೆ ಇದೆ..? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ವಿರುದ್ಧ ಲಂಚದ ಆರೋಪ ದೇಶದಲ್ಲಿಯೇ ಮೊದಲು

ಸರ್ಕಾರದ ವಿರುದ್ಧ ಲಂಚದ ಆರೋಪ ದೇಶದಲ್ಲಿಯೇ ಮೊದಲು

"ಆಕ್ಸಿಜನ್ ಇಲ್ಲದೆ ಚಾಮರಾಜನಗರದಲ್ಲಿ 36 ಅಮಾಯಕ ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದು ಹತ್ಯೆಗೆ ಸಮನಾದುದು. ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ ಡಾ.ಸುಧಾಕರ್ ಜೈಲಿಗೆ ಹೋಗಬೇಕಾದೀತು ಎನ್ನುವುದು ನೆನಪಿರಲಿ. ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯದಿಂದ ನಾವು ದುಡ್ಡು ಕೊಟ್ಟಿದ್ದೆವು ಎಂದು ಸಚಿವ ಸುಧಾಕರ್ ಆರೋಪ ಮಾಡಿದ್ದಾರೆ. ಯಾರು ಯಾರಿಗೆ ದುಡ್ಡು ಕೊಟ್ಟಿದ್ದರು ಎನ್ನುವುದನ್ನು ದಿವಂಗತ ಅನಂತಕುಮಾರ್ ಮತ್ತು ಬಿಎಸ್ ವೈ ಮಾತನಾಡಿಕೊಂಡಿದ್ದ ಲೀಕ್ ಡ್ ವಿಡಿಯೋ ಮೊದಲು ನೋಡಲಿ" ಎಂದಿದ್ದಾರೆ.

"ಈಗಿನ ಸರ್ಕಾರದ ಅವಧಿಯಲ್ಲಿ ವಿಧಾನಸೌಧದ ಗೋಡೆ, ಗೋಡೆಗಳು ಕೂಡಾ ಲಂಚ, ಲಂಚ ಎಂದು ಪಿಸುಗುಡುತ್ತಿವೆ. ಬೀದಿಯಲ್ಲಿ ಜನ ಇದು 40% ಸರ್ಕಾರ ಎಂದು ಗೇಲಿ ಮಾಡುತ್ತಿದ್ದಾರೆ. ಸರ್ಕಾರಿ ಕಾಮಗಾರಿ ನಡೆಸುವವರೇ ಸರ್ಕಾರದ ವಿರುದ್ಧ ಲಂಚದ ಆರೋಪ ಮಾಡುತ್ತಿರುವುದು ದೇಶದಲ್ಲಿಯೇ ಮೊದಲ ಪ್ರಕರಣ. ಲಂಚಕ್ಕಾಗಿ ಪೀಡಿಸುವ ಸಚಿವ-ಶಾಸಕರಿಂದ ಬೇಸತ್ತು ಗುತ್ತಿಗೆದಾರರು ಮತ್ತು ವರ್ಗಾವಣೆಯಲ್ಲಿ ದುಡ್ಡು ಕಳೆದುಕೊಂಡು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದೊಂದು ಕೊಲೆಗಡುಕ ಸರ್ಕಾರವಲ್ಲದೆ ಮತ್ತೇನು..?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕ ಅಧಿಕಾರ ಬಿಜೆಪಿಗಿಲ್ಲ

ಲೋಕಾಯುಕ್ತ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕ ಅಧಿಕಾರ ಬಿಜೆಪಿಗಿಲ್ಲ

"ಹಿಂದಿನ ಯಡಿಯೂರಪ್ಪ ಸರ್ಕಾರ ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಎಂದು ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿತ್ತು. ಈಗೇನಾದರೂ ಸಮೀಕ್ಷೆ ನಡೆದರೆ ವಿಶ್ವದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಕುಖ್ಯಾತಿ ಗಳಿಸಬಹುದು. ನಾನು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಲೋಕಾಯುಕ್ತರ ಮೇಲೆ ಆರೋಪಗಳು ಬಂದಿದ್ದ ಹಿನ್ನೆಲೆಯಲ್ಲಿ ಸುಧಾರಣೆ ದೃಷ್ಟಿಯಿಂದ ಎಸಿಬಿಯನ್ನು ರಚಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯದ ಆದೇಶವನ್ನು ನಾವು ಒಪ್ಪಿಕೊಂಡಿದ್ದೇವೆ" ಎಮದು ಹೇಳಿದ್ದಾರೆ.

"ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸೇರಿದಂತೆ ಹದಿನೆಂಟು ರಾಜ್ಯಗಳಲ್ಲಿ ಈಗಲೂ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಗಳು ಜೊತೆಯಾಗಿಯೇ ಕೆಲಸ ಮಾಡುತ್ತಿವೆ. ಹನ್ನೊಂದು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳೇ ಎಸಿಬಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕ ಅಧಿಕಾರ ಬಿಜೆಪಿಗೆ ಇಲ್ಲ. ರಾಜ್ಯ ಹೈಕೋರ್ಟ್ ಆದೇಶದ ಮೇರೆಗೆ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತರ ಹಿಂದಿನ ಸ್ಥಾನಮಾನ ನೀಡಲಾಗಿದೆಯೇ ಹೊರತು, ಇದರಲ್ಲಿ ಬಿಜೆಪಿಯ ಪಾತ್ರ ಇಲ್ಲ" ಎಂದು ಹೇಳಿದ್ದಾರೆ.

"ಪ್ರಧಾನಿ ನರೇಂದ್ರಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹತ್ತು ವರ್ಷಗಳ ಕಾಲ ಆ ರಾಜ್ಯದಲ್ಲಿ ಲೋಕಾಯುಕ್ತರನ್ನೇ ನೇಮಕ ಮಾಡಿರಲಿಲ್ಲ ಎನ್ನುವುದು ನೆನಪಿರಲಿ. ಅಲ್ಲಿನ ಲೋಕಾಯುಕ್ತವನ್ನು ಮುಷ್ಠಿಯಲ್ಲಿಟ್ಟುಕೊಳ್ಳಲು ಮೋದಿಯವರು ಏನೆಲ್ಲ ಕಸರತ್ತು ನಡೆಸಿದ್ದಾರೆ ಎನ್ನುವುದು ಇತಿಹಾಸದ ಪುಟದಲ್ಲಿದೆ. ಕೇಂದ್ರದಲ್ಲಿ ಲೋಕಪಾಲ ಕಾಯ್ದೆಯನ್ನು ಜಾರಿಗೆ ತರುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಅವರು ಇಲ್ಲಿಯವರೆಗೆ ಲೋಕಪಾಲರ ನೇಮಕದ ಬಗ್ಗೆ ಬಾಯಿ ಬಿಟ್ಟಿಲ್ಲ ಯಾಕೆ..? ಜೈಲಿಗೆ ಹೋಗುವ ಭಯವೇ..?" ಎಂದು ಪ್ರಶ್ನೆ ಮಾಡಿದ್ದಾರೆ.

English summary
Karnataka assembly elections 2023: Congress leader Siddaramaiah slams karnataka BJP leaders over corruption allegations on him. he said he will ready to face probe . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X