PM Modi: ಕಾರ್ಯಕರ್ತರೊಂದಿಗೆ ಇಂದು ನರೇಂದ್ರ ಮೋದಿ ಸಂವಾದ
ಬೆಂಗಳೂರು ಏಪ್ರಿಲ್ 27: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೆ ರಾಜ್ಯದ ಕಾರ್ಯಕರ್ತರೊಂದಿಗೆ ಇಂದು ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 9.30ಕ್ಕೆ ರಾಜ್ಯದ ಎಲ್ಲ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು 'ನಮೋ ಆ್ಯಪ್' ಮೂಲಕ ಮಾತನಾಡಲಿದ್ದಾರೆ.
ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಇದಕ್ಕಾಗಿ 24 ಲಕ್ಷ ಕಾರ್ಯಕರ್ತರು 'ನಮೋ ಆ್ಯಪ್' ಡೌನ್'ಲೋಡ್ ಮಾಡಿಕೊಂಡಿದ್ದಾರೆ. ಈ ವೇಳೆ ನರೇಂದ್ರ ಮೋದಿಯವರು ಸ್ಪೂರ್ತಿಯುತ ಮಾತುಗಳನ್ನು ಆಡಲಿದ್ದಾರೆ. ಡಬಲ್ ಇಂಜಿನ್ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

ರಾಜ್ಯದ 58,112 ಬೂತ್‌ಗಳು ಹಾಗೂ 1,680 ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಈ ಸಂವಾದ ಹಮ್ಮಿಕೊಳ್ಳಲಾಗಿದೆ. ಬೂತ್‌ಗಳಲ್ಲಿ ಟೀವಿಗಳು ಹಾಗೂ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುವುದು. ಜನ ಮೋದಿ ಮಾತನ್ನು ತಮ್ಮ ಸ್ಥಳಗಳಿಂದಲೇ ಕೇಳಲಿದ್ದಾರೆ.
ಇದೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿಕೊಂಡು ನೇರ ಸಂವಾದ ಏರ್ಪಡಿಸಲಾಗಿದೆ. 'ನಮೋ ಆ್ಯಪ್'ಗಳ ಮುಖಾಂತರ ಕಾರ್ಯಕರ್ತರು ಬೂತ್ ಮಟ್ಟದ 58 ಸಾವಿರ ಸ್ಥಳಗಳಲ್ಲಿ ಸಂವಾದ ವೀಕ್ಷಿಸಲಿದ್ದಾರೆ ಎಂದು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರೂ ಆಗಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಎಲ್‌ಇಡಿ ಸ್ಕ್ರೀನ್ ಇರುವ ಕಡೆ ಕಾರ್ಯಕರ್ತನ್ನು ಸೇರಿಸಲಾಗುತ್ತಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಸುಮಾರು 58 ಸಾವಿರ ಕಾರ್ಯಕರ್ತರು ಹಾಗೂ ಬೂತ್‌ಗಳಲ್ಲಿ 200 ಕಾರ್ಯಕರ್ತರನ್ನು ಈ ಕಾರ್ಯಕ್ರಮಕ್ಕಾಗಿ ಸಂಯೋಜಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ನಮೋ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ 15 ಕಡೆ ಪ್ರಧಾನಿ ಮೋದಿ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಏಪ್ರಿಲ್ 29ರಿಂದ ಮೋದಿ ಪ್ರಚಾರ
ಈ ತಿಂಗಳು ಚುನಾವಣಾ ಪ್ರಚಾರ ಕಣಕ್ಕೆ ಇಳಿಯಲಿರುವ ಪ್ರಧಾನಿ ಮೋದಿ ಏಪ್ರಿಲ್ 29 ರಿಂದ ಮೇ 7ರ ವರೆಗೆ ರಾಜ್ಯದ ಹಲವು ಭಾಗಗಳಲ್ಲಿ ರೋಡ್ ಶೋಗಳು ಮತ್ತು ರ‍್ಯಾಲಿಗಳ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಈ ಆರು ದಿನಗಳ ಅಂತರದಲ್ಲಿ 20 ಕ್ಕೂ ಹೆಚ್ಚು ರೋಡ್ ಶೋಗಳು, ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಈ ಪ್ರಚಾರದ ವಿಶೇಷತೆಯೆಂದರೇ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಪ್ರಭಾವ ಜಾಸ್ತಿಯಿರುವ, ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಹಳೇ ಮೈಸೂರು ಭಾಗದಲ್ಲಿಯೂ ಈ ಬಾರಿ ಮೋದಿ ಸಮಾವೇಶ ಆಯೋಜನೆಯಾಗಿದೆ. ರಾಜ್ಯದ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಿಂದದ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪ್ರಾರಂಭಿಸಲಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications