Haveri Constituency: ಸಿಎಂ ತವರು ಜಿಲ್ಲೆ-ಏಲಕ್ಕಿ ನಾಡಲ್ಲಿ ಮತ್ತೆ ಅರಳುತ್ತಾ ಕಮಲ?, ಯಾರಿಗೆ ಟಿಕೆಟ್, ಹೇಗಿರಲಿದೆ ಫೈಟ್, ವರದಿ
ಉತ್ತರ ಕರ್ನಾಟಕದ ಹೆಬ್ಬಾಗಿಲು ಜಿಲ್ಲೆ ಹಾವೇರಿ ಬಿಜೆಪಿಯ ಅಧಿಕಾರ ವಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ. ಇಲ್ಲಿ ಅಸ್ತಿತ್ವ ಕಂಡಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಅಬ್ಬರಿಸಲು ಸಜ್ಜಾಗಿವೆ.
ಹಾವೇರಿ, ಮಾರ್ಚ್ 15: ಕರ್ನಾಟಕದ ಮಧ್ಯ ಭಾಗದ ಜಿಲ್ಲೆ, ಉತ್ತರ ಕರ್ನಾಟಕದ ಹೆಬ್ಬಾಗಿಲು ಆಗಿರುವ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಯ ಅಧಿಕಾರ ವಿದೆ. ಅಲ್ಲದೇ ಜಿಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು. ಅವರದ್ದು ಶಿಗ್ಗಾವಿ ಕ್ಷೇತ್ರವಾದರೂ ಜಿಲ್ಲೆಯಾದ್ಯಂತ ಅವರ ಪ್ರಭಾವದ ಜೋರಾಗಿಯೇ ಇದೆ.
ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾವೇರಿ ಸೇರಿದಂತೆ ಒಟ್ಟು ಎಂಟು ತಾಲೂಕುಗಳಿವೆ. ಖ್ಯಾತ ಸಾಹಿತಿಗಳು, ಸರ್ವಜ್ಞರು ಮತ್ತು ಮೈಲಾರ ಮಹದೇವಪ್ಪರಂತಹ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿಬೆಳೆದ 'ಏಲಕ್ಕಿ' ಕಂಪಿನ ನಾಡು ಹಾವೇರಿ. ಕರ್ನಾಟಕದ ಉಕ್ಕಿನ ಮನುಷ್ಯ ಅಂತಲೇ ಕರೆಯುವ ಗಾಂಧಿಯವರಿಂದ ಪ್ರೆರೇಪಿತರಾದ ಗುದ್ಲೆಪ್ಪ ಹಳ್ಳಿಕೇರಿಯವರ ಹುಟ್ಟಿಬೆಳೆದ ಇಲ್ಲಿ ಜಾನಪತ, ಕಲಾ ಸಂಸ್ಕೃತಿಗೆ ಪ್ರಾತಿನಿಧ್ಯವಿದೆ. ಜಿಲ್ಲೆಯಲ್ಲಿ ಕೃಷಿ, ಸಣ್ಣ ಉದ್ಯಮ ಅವಲಂಬಿಸಿದ ರೈತಾಪಿ ವರ್ಗವಿದ್ದು, ಸುಮಾರು 1000 ಮಠಗಳು ಇಲ್ಲಿವೆ ಎಂದು ಉಲ್ಲೇಖವಿದೆ. ಜಗತ್ತಿನಲ್ಲಿ ಕೆಂಪು ಮೆಣಸಿನಕಾಯಿಗೆ ಬ್ಯಾಡಗಿ (ಬ್ಯಾಡಗಿ ಕೆಂಪು ಮೆಣಸಿನಕಾಯಿ) 2ನೇ ಸ್ಥಾನದಲ್ಲಿದೆ.
ಜಿಲ್ಲೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಬ್ಬು, ಮೆಕ್ಕೆ ಜೋಳ (ಗೋವಿನ ಜೋಳ), ಹತ್ತಿ, ಸೂರ್ಯ ಕಾಂತಿ, ಶೇಂಗಾ, ಭತ್ತ, ಜೋಳ, ತರಕಾರಿಗಳು ಹಾಗೂ ಬಾಳೆ, ಕಲ್ಲಂಗಡಿ ಸೇರಿದಂತೆ ಮುಂತಾದ ಕೃಷಿ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಜಿಲ್ಲೆ ವ್ಯಾಪ್ತಿಯ ತುಂಗಭದ್ರಾ, ಕುಮದ್ವತಿ ಮತ್ತು ವರದಿ ನದಿ ಹರಿಯುತ್ತಿದ್ದು, ಹೀಗಾಗಿ ಒಂದಷ್ಟು ಭಾಗಗಳಲ್ಲಿ ಕೃಷಿಕರು ನೀರಾವರಿಗೆ ಈ ನದಿ ನೀರನ್ನೇ ಬಳಸುತ್ತಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆದ ಬಳಿಕ ಹಾವೇರಿ ಮೀಸಲು ಕ್ಷೇತ್ರವಾಯಿತು.
ಹಾವೇರಿಯಲ್ಲಿ ಪುಣೆ-ಬೆಂಗಳೂರು (NH-4) ಹಾದು ಹೋಗುತ್ತದೆ. ಬೆಂಗಳೂರು, ಬಳ್ಳಾರಿ, ಹುಬ್ಬಳ್ಳಿ, ಶಿರ್ಸಿ ಸೇರಿದಂತೆ ಎಲ್ಲ ಭಾಗಗಳಿಗೆ ಸಾರಿಗೆ ಸಂಪರ್ಕ ಸಾಧ್ಯವಾಗಿದೆ. ಆದರೆ ಗ್ರಾಮೀಣಭಾಗಗಳ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಣಬೇಕಿದೆ. ಜಿಲ್ಲೆಯಲ್ಲೂ ಸಹ ಚುನಾವಣೆ ಅಖಾಡ ಸಿದ್ಧವಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರು ನೆಹರು ಓಲೇಕಾರ ಚುನಾಯಿತರಾಗಿದ್ದಾರೆ.

ಕೇಸರಿ ನಾಯಕರ ಹಿಡಿತದಲ್ಲಿ ಹಾವೇರಿ ಜಿಲ್ಲೆ- ರಾಜಕೀಯ ಇತಿಹಾಸ
ಹಾವೇರಿ ವಿಧಾನಸಭಾ ಕ್ಷೇತ್ರವು ಸ್ವಾತಂತ್ರ್ಯಾನಂತರ 1957 ರಿಂದ ಕಾಂಗ್ರೆಸ್ ಪ್ರಾಬಲ್ಯಕ್ಕೆ ಒಳಗಾಗಿತ್ತು. ನಿರಂತರವಾಗಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸುತ್ತಿದ್ದರು. ಕ್ಷೇತ್ರದಲ್ಲಿನ ದಶಕಗಳ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಿದ್ದು ಬಿಜೆಪಿ. 2004ರಲ್ಲಿ ಮೊದಲ ಭಾರಿಗೆ ಬಿಜೆಪಿ ಅಭ್ಯರ್ಥಿ ಎಸ್. ರಘ ಅವರು 33,483 ಮತ ಪಡೆದು ಗೆದ್ದು ಬೀಗಿದರು. ನಂತರ 2008ರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂತು. ನಂತರ 2013ರಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ವಿರುದ್ಧ ಸೋತಿದ್ದ ನೆಹರು ಓಲೇಕಾರ್ ಅವರು 2018ರಲ್ಲಿ ಪುನಃ ಗೆದ್ದ ಬೀಗಿದರು. ಸದ್ಯ ಮುಂಬರಲಿರುವ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭಾರಿ ರಣತಂತ್ರ ರೂಪಿಸಿವೆ. ಚುನಜಾಣಾ ಕಣ ರಂಗೇರುತ್ತಿದೆ.

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ಹಾವೇರಿ ವಿಧಾನಸಭಾ ಕ್ಷೇತ್ರ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಅಲ್ಲದೇ ಬಜೆಟ್‌ನಲ್ಲಿ ಬೊಮ್ಮಾಯಿ ಸಾಕಷ್ಟು ಅನುದಾನ ನೀಡಿದ್ದಾರೆ. ಈ ರೀತಿಯ ಕಾರಣದಿಂದ ಸಹಜವಾಗೇ ಹಾವೇರಿಯಲ್ಲಿ 2023ರ ಚುನಾವಣೆಯಲ್ಲೂ ಕಮಲ ಅರಳಲಿದೆ. ಆದರೆ ಕ್ಷೇತ್ರದಲ್ಲಿ ಪ್ರಾಬಲ್ಯ ಕಳೆದುಕೊಂಡಿರುವ ಕಾಂಗ್ರೆಸ್ ಸಹ ತೀವ್ರ ಪಪೋಟಿ ಕೊಡಲು, ಪ್ರಭಾವಿ ನಾಯಕನನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಕಳೆದ ಉಪಚುನಾವಣೆಯಲ್ಲಿ ಹಾನಗಲ್ ನಲ್ಲಿ ಬಿಜೆಪಿಗೆ ಸೋಲಾಯಿತು. ಇದರ ಆಧಾರದಲ್ಲಿ ಕಾಂಗ್ರೆಸ್ ಗೆಲುವಿಗೆ ಭರವಸೆ ಹೊಂದಿದೆ. ಎರಡು ಪ್ರಮುಖ ಪಕ್ಷಗಳ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ಹೀಗಿದ್ದರು ಬಿಜೆಪಿ ಪ್ರಭಾವವು ಅಧಿಕ ಮತ ತಂದುಕೊಡಬಹುದು ಎಂದು ವಿಶ್ಲೇಷಿಸಲಾಗಿದೆ.

ಹಾವೇರಿ ಕ್ಷೇತ್ರ ಟಿಕೇಟ್ ಆಕಾಂಕ್ಷಿಗಳು ಯಾರು?
2013ರಲ್ಲಿ ಗೆಲುವಿನ ಕುದುರೆ ಏರಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ರುದ್ರಪ್ಪ ಲಮಾಣಿಯವರು ಈ ಸಲವು ಟಿಕೆಟ್ ಬಯಸಿದ್ದಾರೆ. ಅವರೊಂದಿಗೆ ಕಾಂಗ್ರೆಸ್ ಮುಖಂಡ ಶಾಸಕ ಈರಪ್ಪ ಲಮಾಣಿ ಹಾಗೂ ಕಾಂಗ್ರೆಸ್ ಮುಖಂಡ ಡಾ. ಸಂಜಯ್ ಡಾಂಗೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇತ್ತ ಬಿಜೆಪಿ ಹಾಲಿ ಶಾಸಕ ನೆಹರು ಓಲೇಕಾರ್ ಈ ಬಾರಿಯೂ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಅವರ ಜೊತೆಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ವೆಂಕಟೇಶ ನಾರಾಯಣ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಜೆಡಿಎಸ್ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಸಿಗಬೇಕಿದೆ.

ಶಾಸಕ ಓಲೇಕಾರ್ ಮುನಿಸು: ಬಿಜೆಪಿ ಟಿಕೆಟ್ ಕೈ ತಪ್ಪುತ್ತಾ?
ಮೀಸಲು ಕ್ಷೇತ್ರದ ಶಾಸಕರಾದ ಬಳಿಕ ಶಾಸಕ ನೆಹರು ಓಲೇಕಾರ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಮಂತ್ರಿ ಸ್ಥಾನ ಸಿಗದೇ ಕೇವಲ ಆಶ್ವಾಸನೇಗಳು ಸಿಕ್ಕವು. ಇದರಿಂದ ಬೇಸರಗೊಂಡ ಶಾಸಕರು ಹಾನಗಲ್ ಉಪಚುನಾವಣೆ ನಡೆದರೂ ಸಹ ಪ್ರಚಾರಕ್ಕೆ ಹೋಗದೇ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದು ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಇತ್ತೀಚೆಗೆ ಕಾಮಗಾರಿ ಯೊಂದರ ವಿಚಾರವಾಗಿ ನೆಹರು ಓಲೆಕಾರ್ ಮತ್ತವರ ಇಬ್ಬರು ಪುತ್ರನಿಗೆ ಜೈಲು ಶಿಕ್ಷೆಯಾಗಿತ್ತು. ಬ್ಯಾಡಗಿಯ ಶಿಡೇನೂರು ಗ್ರಾಮದ ನಿವಾಸಿಗಳ ಮೇಲೆ ದಬ್ಬಾಳಿಕೆಯ ಆರೋಪ ಎದುರಿಸಿದ್ದರು. ಕಿರುಕುಳ ತಾಳಲಾರದೇ ಗ್ರಾಮದ ನಾಲ್ವರು ಜಮೀನಿನಲ್ಲೇ ವಿಷಕುಡಿದು ಮೃತಪಟ್ಟಿದ್ದರು. ಇವೆಲ್ಲ ಕಾರಣಗಳು ಬಿಜೆಪಿ ಗೆಲುವಿಗೆ ಹೊಡೆತ ಬೀಳಬಹುದೆಂಬ ಕಾರಣಕ್ಕೆ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications