ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ; ಚುನಾವಣೆಗೂ ಮುನ್ನವೇ ಪರಿಷತ್ ನಲ್ಲಿ ಬಹುಮತ ಕಳೆದುಕೊಂಡ ಬಿಜೆಪಿ!
ಬೆಂಗಳೂರು,ಏಪ್ರಿಲ್14: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆಯಿಂದಾಗಿ ಕೇಸರಿ ಪಾಳಯದಲ್ಲಿ ಬಂಡಾಯದ ಬಿರುಗಾಳಿ ಜೋರಾಗಿದ್ದು, ಸಾಲು ಸಾಲು ನಾಯಕರು ರಾಜೀನಾಮೆಯನ್ನ ನೀಡುತ್ತಿರುವುದು ಬಿಜೆಪಿಗೆ ಬಿಸಿ ತುಪ್ಪದಂತಾಗಿದೆ.
ಈಗಾಗಲೇ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಿಂದ ಕೇಸರಿ ಪಡೆಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ದತೆಯನ್ನ ನಡೆಸುತ್ತಿರುವ ಬಿಜೆಪಿ ಇನ್ನೊಂದು ಸಂಕಷ್ಟ ಎದುರಾಗಿದೆ.

ಹೌದು, ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ವಿಧಾನ ಪರಿಷತ್‌ನಲ್ಲಿ ಬಹುಮತ ಕಳೆದುಕೊಂಡಿದೆ. 2023 ರ ವಿಧಾನಸಭಾ ಚುನಾವಣಾ ಸ್ಪರ್ಧಿಸಲು ಸಜ್ಜಾಗಿದ್ದ ನಾಯಕರಿಗೆ ಟಿಕೆಟ್ ಕೈ ತಪ್ಪಿದ ಹಿನ್ನಲೆ ಬಿಜೆಪಿ ರಾಜ್ಯ ಹಾಗೂ ಕೇಂದ್ರ ನಾಯಕರ ವಿರುದ್ದ ಅಸಮಾಧಾನ ಹೊರಹಾಕಿದ್ದು, ರಾಜೀನಾಮೆ ಅಸ್ತ್ರವನ್ನ ಪ್ರಯೋಗಿಸಿದ್ದಾರೆ. ಹೀಗಾಗಿ ವಿಧಾನ ಪರಿಷತ್ ಬಹುಮತ ಕಳೆದುಕೊಂಡಿದೆ.
ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಅವರ ರಾಜೀನಾಮೆಯೊಂದಿಗೆ ಪರಿಷತ್‌ನಲ್ಲಿ ಬಿಜೆಪಿ ಬಲ 36ಕ್ಕೆ ಕುಸಿದಿದ್ದು, ತಾಂತ್ರಿಕವಾಗಿ ಕೇಸರಿ ಪಡೆ ಬಹುಮತ ಕಳೆದುಕೊಂಡಂತಾಗಿದೆ.

ರಾಣೇಬೆನ್ನೂರಿನಲ್ಲಿ ಆರ್ ಶಂಕರ್ ಬಿಜೆಪಿಯ ಟಿಕೆಟ್ ನಿರಾಕರಿಸಲಾಗಿದೆ. ಈ ಹಿನ್ನೆಲೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2018ರ ಚುನಾವಣೆಯಲ್ಲಿ ರಾಣೇಬೆನ್ನೂರಿನಲ್ಲಿ ಗೆಲುವು ಸಾಧಿಸಿದ್ದ ಇವರು 2019ರಲ್ಲಿ ಬಿಜೆಪಿ ಸರ್ಕಾರದ ರಚನೆ ವೇಳೆ ಬಿಜೆಪಿಗೆ ಬೆಂಬಲ ನೀಡಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಅವಕಾಶ ನೀಡದೇ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ ಇದೀಗ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಇನ್ನೂ ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್ ಸವದಿಗೆ ಟಿಕೆಟ್ ಸಿಗದ ಕಾರಣ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಭೇಟಿಗೆ ಸಮಯವನ್ನು ಕೂಡ ಕೇಳಿದ್ದು, ಶುಕ್ರವಾರ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ 75 ಸದಸ್ಯ ಬಲದ ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಬಲ 35 ಕ್ಕೆ ಕುಸಿಯಲಿದೆ. ಇನ್ನೂ ವಿಧಾನ ಪರಿಷತ್‌ನಲ್ಲಿ ಬಹುಮತಕ್ಕೆ 38 ಸ್ಥಾನಗಳ ಅಗತ್ಯವಿದೆ.
ಈ ಹಿಂದೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ 39 ಸದಸ್ಯರನ್ನು ಹೊಂದಿತ್ತು. ಆದರೆ, ಟಿಕೆಟ್ ಘೋಷಣೆಗೂ ಮುನ್ನವೇ ಪುಟ್ಟಣ್ಣ ಹಾಗೂ ಬಾಬುರಾವ್ ಚಿಂಚನಸೂರ್ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾದ ಈ ಇಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನೂ ಬಾಬುರಾವ್ ಚಿಂಚನಸೂರ್ ರಾಜೀನಾಮೆ ನೀಡಿದಾಗಲೇ ಬಿಜೆಪಿ ಮೇಲ್ಮನೆಯಲ್ಲಿ ಬಹುಮತ ಕಳೆದುಕೊಂಡಿದೆ.
ಇನ್ನೂ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಸ್ಥಾನ ಕುಸಿತದ ವಿಚಾರವಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಿದೆ. ವಿಧಾನ ಪರಿಷತ್‌ನಲ್ಲಿ ಬಹುಮತಕ್ಕೆ 38 ಸದಸ್ಯರು ಇರಬೇಕು. ಬಾಬುರಾವ್ ಚಿಂಚನಸೂರ್ ರಾಜೀನಾಮೆ ನೀಡಿದಾಗಲೇ ತಾಂತ್ರಿಕವಾಗಿ ಬಿಜೆಪಿ ಬಹುಮತ ಕಳೆದುಕೊಂಡಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
2018 ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬಹುಮತ ಹೊಂದಿದ್ದವು, ನಂತರ 2022 ರಲ್ಲಿ ಬಿಜೆಪಿಗೆ ವಿಧಾನ ಪರಿಷತ್ ನಲ್ಲಿ ಬಹುಮತ ಸಿಕ್ಕಿತ್ತು. ಸದ್ಯ ವಿಧಾನ ಪರಿಷತ್ ಸದಸ್ಯ ಬಲವನ್ನು ಗಮನಿಸುವುದಾದರೇ, ಬಿಜೆಪಿ 36 ಸದಸ್ಯರನ್ನು ಹೊಂದಿದ್ದು, ಲಕ್ಷ್ಮಣ್ ಸವದಿ ರಾಜೀನಾಮೆ ನೀಡಿದರೆ ಆ ಸಂಖ್ಯೆ 35ಕ್ಕೆ ಇಳಿಯಲಿದೆ. ಕಾಂಗ್ರೆಸ್ 26 ಸದಸ್ಯರನ್ನು ಹೊಂದಿದೆ. ಜೆಡಿಎಸ್ 8, ಪಕ್ಷೇತರ ಒಬ್ಬರು ಇದ್ದರೆ, ಒಬ್ಬರು ಸಭಾಪತಿ ಇದ್ದು, ಇದೀಗ ಮೂರು ಖಾಲಿ ಸ್ಥಾನಗಳು ಇವೆ.












Click it and Unblock the Notifications