ಕೈ ತಪ್ಪಿದ ಟಿಕೆಟ್: ಬಿಜೆಪಿ ವಿರುದ್ದ ಕೆಂಡಾಮಂಡಲ; ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆರ್.ಶಂಕರ್ ರಾಜೀನಾಮೆ
ಬೆಂಗಳೂರು,ಏಪ್ರಿಲ್12: 2023 ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳವಾರ 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 189 ಕ್ಷೇತ್ರಗಲ್ಲಿ 52 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ.
ಚುನಾವಣಾ ಸಿದ್ದತೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದ್ದು, ರಾಣೆಬೆನ್ನೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಶಂಕರ್ ಬದಲಿಗೆ ಹಾಲಿ ಶಾಸಕ ಅರುಣ್ ಕುಮಾರ್‌ಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಆರ್ ಶಂಕರ್ ತಮ್ಮ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನೂ ರಾಣೆಬೆನ್ನೂರು ಕ್ಷೇತ್ರದಿಂದ ಟಿಕೆಟ್ ನೀಡದ ಕಾರಣ ಅಸಮಾಧಾನಗೊಂಡಿರುವ ವಿಧಾನಪರಿಷತ್ ಸದಸ್ಯ ಆರ್ ಶಂಕರ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಆರ್. ಶಂಕರ್ ಅವರು ಬೆಂಬಲಿಗರೊಂದಿಗೆ ವಿಧಾನಸೌಧಕ್ಕೆ ಆಗಮಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆಯನ್ನು ಅಂಗೀಕರಿಸಿದರು.
ರಾಣೇಬೆನ್ನೂರು ಕ್ಷೇತ್ರದಿಂದ ಶಾಸಕ ಅರುಣ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಬಿಜೆಪಿ ಆರ್.ಶಂಕರ್ ಅಸಮಾಧಾನಗೊಂಡಿದ್ದಾರೆ. ಅತ್ತ ಕಾಂಗ್ರೆಸ್ ಟಿಕೆಟ್ ಇಲ್ಲ, ಇತ್ತ ಬಿಜೆಪಿ ಟಿಕೆಟ್ ಸಿಗದೇ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಆರ್.ಶಂಕರ್ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.
ನಾವು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೋರು, ನಮಗೆಲ್ಲ ಮೋಸ ಮಾಡಿದ್ರು ಎಂದು ಆರ್.ಶಂಕರ್ ಅಸಮಾಧಾನ ಹೊರ ಹಾಕಿದ್ದಾರೆ. ಆರ್.ಶಂಕರ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಮೈತ್ರಿ ಸರ್ಕಾರದ ಬಳಿಕ ಬಿಜೆಪಿಯಿಂದ ಎಂಎಲ್ಸಿ ಆಗಿದ್ದು, 2023 ರ ವಿಧಾನಸಭಾ ಚುನಾವಣೆಗೆ ರಾಣೆಬೆನ್ನೂರು ಕ್ಷೇತ್ರದಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಆರ್ ಶಂಕರ್ ಗೆ ಟಿಕೆಟ್ ಕೈ ತಪ್ಪಿದ್ದು, ಸ್ವತಂತ್ರ ಸ್ಪರ್ಧೆಗೆ ರೆಡಿಯಾಗುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications