Karnataka Assembly Election 2023: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಇಲ್ಲ, ನಾನು ಶಿಗ್ಗಾವಿ ಬಿಟ್ಟು ಬೇರೆಲ್ಲೂ ಹೋಗಲ್ಲ: CM
ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.
ಹಾವೇರಿ, ಮಾರ್ಚ್ 21: ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡುವ ಮೂಲಕ ಚುನಾವಣಾ ಸ್ಪರ್ಧೆ ವಿಚಾರವಾಗಿ ಸೃಷ್ಟಿಯಾಗಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಹಾವೇರಿ ಜಿಲ್ಲಾಡಳಿತ ಹಾಗೂ ಧಾರವಾಡದ ರಂಗಾಯಣ ವತಿಯಿಂದ ಸಿಎಂ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ನಡೆದ 'ಭಾರತ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂಬರಲಿರುವ 2023 ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಾವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ನಾನು ಶಿಗ್ಗಾವಿ ಕ್ಷೇತ್ರ ಬಿಟ್ಟು ಬೇರೆಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿಯವರು ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಒಂದು ಸ್ವ ಕ್ಷೇತ್ರ ಶಿಗ್ಗಾವಿ ಅದಲ್ಲದೇ ದಾವಣಗೆರೆ ಉತ್ತರ ಕ್ಷೇತ್ರದಲ್ಲಿಯೂ ಅವರು ಚುನಾವಣೆ ಎದುರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಪೂರಕವೆಂಬಂತೆ ದಾವಣಗೆರೆ ಉತ್ತರ ಕ್ಷೇತ್ರದ ಶಾಕಸ ಎಸ್.ಎ.ರವೀಂದ್ರನಾಥ್ ಅವರು ಈ ಬಾರಿ ಸ್ಪರ್ಧಿಸುವುದು ಅನುಮಾನ ಎನ್ನಲಾಗಿತ್ತು. ಸದ್ಯ ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೃಹತ್ ಆರೋಗ್ಯ ಕೇಂದ್ರವಾಗಲಿರುವ ಹಾವೇರಿಯ ಸವಣೂರು
ಸ್ವ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ ಅವರು, ಸವಣೂರು ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಬಹಳ ದಿನಗಳ ಕನಸು ಈಗ ಈಡೇರಿರುವುದರಿಂದ ಜನ ಬಹಳ ಸಂತೋಷದಿಂದ ಇದ್ದಾರೆ ಎಂದು ಹೇಳಿದರು.

ಸವಣೂರು ತಾಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನೆ ಆಗಿದೆ. ಪೋಸ್ಟ್ ಮೆಟ್ರಿಕ್ 2 ಹಾಸ್ಟೆಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. 6 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಐಟಿಐ ಪ್ರಾರಂಭ ಆಗುತ್ತಿದೆ. ಈ ಭಾಗದ ಆರೋಗ್ಯ ಸಮಸ್ಯೆಗಳನ್ನು ಆಯುರ್ವೇದ ಮುಖಾಂತರ ಗುಣಮುಖ ಪಡಿಸಲು 64 ಕೋಟಿ ರೂಪಾಯಿ ವೆಚ್ಚದಲ್ಲಿ 100 ಬೆಡ್ಡಿನ ಆಸ್ಪತ್ರೆ ಸಹಿತ ಆಯುರ್ವೇದಿಕ್ ಕಾಲೇಜಿನ ದೊಡ್ಡ ಆರೋಗ್ಯ ಕೇಂದ್ರ ಪ್ರಾರಂಭ ಆಗುತ್ತಿದೆ ಎಂದು ಅವರು ಸ್ವ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ, ಸರ್ಕಾರದ ಸಾಧನೆ ಕುರಿತು ವಿವರಿಸಿದರು.
ಹಲವು ಯೋಜನೆಗಳ ಉದ್ಘಾಟನೆ
ಮುನಿಸಿಪಾಲಿಟಿ ಕಚೇರಿ ಮತ್ತು ಅಸಿಸ್ಟೆಂಟ್ ಕಮಿಷನರ್ ನೂತನ ಕಚೇರಿ ಸೇರಿದಂತೆ ಹಲವಾರು ಯೋಜನೆಗಳ ಉದ್ಘಾಟನೆ ನೆರವೇರಿದೆ. ಹಾವೇರಿ ಮೆಡಿಕಲ್ ಕಾಲೇಜಿನ ಮೊದಲ ಹಂತದ ಕಟ್ಟಡ ಮುಗಿದಿದೆ. ಶೀಘ್ರದಲ್ಲೇ ಅದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರಿಸಿದರು.
ಕಿತ್ತೂರು ರಾಣಿ ಚನ್ನಮ್ಮ ಅಜರಾಮರ
ಆ ಸೂರ್ಯ ಚಂದ್ರರು ಇರುವವರೆಗೂ ಕಿತ್ತೂರು ರಾಣಿ ಚೆನ್ನಮ್ಮ ಅಜರಾಮರರಾಗಿಯೇ ಇರುತ್ತಾರೆ. ಚನ್ನಮ್ಮ ಅವರ ಆಡಳಿತದಲ್ಲಿ ದಿನಗಳಲ್ಲಿ ನಡೆದ ಎಲ್ಲ ಘಟನೆಗಳನ್ನು ನೋಡುವ ಅವಕಾಶ ಶಿಗ್ಗಾವಿ ಸವಣೂರಿನ ಜನತೆಗೆ ಸಿಕ್ಕಿರುವುದು ಸಂತಸ ತಂದಿದೆ. ಈ ನಾಡಿನ ಪ್ರತಿಯೊಂದು ಮಗು ವೀರರಾಣಿ ಕಿತ್ತೂರು ಚೆನ್ನಮ್ಮನ ಚರಿತ್ರೆ ತಿಳಿದವರಾಗಿದ್ದಾರೆ ಎಂದರು.

ದೇಶದಲ್ಲಿ ಶಾಂತಿ ಸಮೃದ್ದಿ ನೆಲೆಸಿದ ಸಂದರ್ಭದಲ್ಲಿ ಬ್ರಿಟಿಷರು ಕೆದಕುವ ಕೆಲಸ ಮಾಡಿದ್ದರು. ಮಲ್ಲ ಸರ್ಜನ ನಿಧನದ ನಂತರ ಕಿತ್ತೂರು ಚೆನ್ನಮ್ಮ ದತ್ತು ಪಡೆದ ಕಾರಣ ಅವಳ ವಿರುದ್ದ ದಂಡೆತ್ತಿ ಬಂದರು.ಚೆನ್ನಮ್ಮ ಬ್ರಿಟೀಷ್ ಸಾಮ್ರಾಜ್ಯದ ವಿರುದ್ದ ಹೋರಾಡಿ ಥ್ಯಾಕರೆ ಚಂಡ ರುಂಡಾಡಿ ಕೇವಲ ಭಾರತ ಅಲ್ಲ. ಇಂಗ್ಲೆಂಡ್ ರಾಣಿಯ ಕುರ್ಚಿ ಕೂಡ ಅಲ್ಲಾಡಿತು.
ಯುದ್ದದಲ್ಲಿ ಸೈನಿಕರ ಸಂಖ್ಯೆ ಮುಖ್ಯವಲ್ಲ, ವೀರತ್ವ ಮುಖ್ಯ,ಛತ್ರಪತಿ ಶಿವಾಜಿಯವರದ್ದ ಕೂಡ ಸಣ್ಣ ಸೈನ್ಯವಿತ್ತು. ಅವರೂ ಮೊಗಲ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡಿ ಜಯ ಗಳಿಸಿದ್ದರು ಎಂದು ಐತಿಹ್ಯವನ್ನು ಅವರು ಸ್ಮರಿಸಿದರು.












Click it and Unblock the Notifications