ಸಾಲು ಸಾಲು ಪರೀಕ್ಷೆಗಳಿಂದ ಅಭ್ಯರ್ಥಿಗಳಿಗೆ ಸಂಕಷ್ಟ: ಪೊಲೀಸ್ ಪೇದೆ ದೈಹಿಕ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳ ಆಗ್ರಹ

ಸರ್ಕಾರಿ ಉದ್ಯೋಗದ ಕನಸು ಹೊತ್ತು ವರ್ಷಗಟ್ಟಲೆ ಹಗಲಿರುಳು ಓದುತ್ತಿರುವ ಸಾವಿರಾರು ಯುವಕ-ಯುವತಿಯರಿಗೆ ಇದೀಗ ಪರೀಕ್ಷಾ ಪ್ರಾಧಿಕಾರಗಳೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ನಡುವೆ ಯಾವುದೇ ಕನಿಷ್ಠ ಸಮನ್ವಯತೆಯೂ ಇಲ್ಲದೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನ ಪ್ರಕಟಿಸಲಾಗಿದೆ.

ಇದರಿಂದಾಗಿ ಒಂದೇ ಸಮಯದಲ್ಲಿ ಹಲವು ಪರೀಕ್ಷೆಗಳನ್ನ ಬರೆಯಲು ಸಿದ್ಧರಾಗಿದ್ದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗಸ್ಟ್ ಮೊದಲ ವಾರದಲ್ಲೇ ನಿರಂತರವಾಗಿ ಪರೀಕ್ಷೆಗಳು ಇರುವುದು, ಅಭ್ಯರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ.

Karnataka Aspirants Demand Postponement Of Police Constable Physical Test Due To KEA Exam Clash

ಕೆಇಎ ಮತ್ತು ಪೊಲೀಸ್ ಇಲಾಖೆ ನಡುವೆ ಸಮನ್ವಯದ ಕೊರತೆ

ವರದಿಗಳ ಪ್ರಕಾರ, ಆಗಸ್ಟ್ 1 ರಿಂದ 4 ರವರೆಗೆ ರಾಜ್ಯದಲ್ಲಿ ಪ್ರಮುಖ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳು ನಿಗದಿಯಾಗಿವೆ. ಒಂದೆಡೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಗಸ್ಟ್ 2 ರಂದು ಲ್ಯಾಂಡ್ ಸರ್ವೇಯರ್ ಲಿಖಿತ ಪರೀಕ್ಷೆ ಹಾಗೂ ಆಗಸ್ಟ್ 4 ರಂದು ಬಹುನಿರೀಕ್ಷಿತ ಗ್ರಾಮ ಆಡಳಿತಾಧಿಕಾರಿ ಲಿಖಿತ ಪರೀಕ್ಷೆಯನ್ನ ನಿಗದಿಪಡಿಸಿದೆ.

ಮತ್ತೊಂದೆಡೆ, ಇದೇ ಅವಧಿಯಲ್ಲಿ, ಅಂದರೆ ಆಗಸ್ಟ್ 1 ರಿಂದ 3 ರವರೆಗೆ ಪೊಲೀಸ್ ಇಲಾಖೆಯು ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗಾಗಿ ದೈಹಿಕ ಪರೀಕ್ಷೆಯನ್ನ ಆಯೋಜಿಸಿದೆ. ಈ ಎರಡು ಪ್ರತ್ಯೇಕ ಇಲಾಖೆಗಳು ಪರಸ್ಪರ ಚರ್ಚಿಸದೆ ಒಂದೇ ದಿನಾಂಕಗಳ ಆಸುಪಾಸಿನಲ್ಲಿ ವೇಳಾಪಟ್ಟಿ ಪ್ರಕಟಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಪೊಲೀಸ್ ಪೇದೆ ದೈಹಿಕ ಪರೀಕ್ಷೆಗೆ ಅಭ್ಯರ್ಥಿಗಳ ಪರದಾಟ

ಈ ವೇಳಾಪಟ್ಟಿಯಿಂದಾಗಿ ಅಭ್ಯರ್ಥಿಗಳು ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ನಿರಂತರ 4 ದಿನಗಳಲ್ಲಿ ಒಂದು ದೈಹಿಕ ಪರೀಕ್ಷೆ ಹಾಗೂ ಎರಡು ಪ್ರಮುಖ ಲಿಖಿತ ಪರೀಕ್ಷೆಗಳು ಎದುರಾಗುತ್ತಿವೆ. ಉದಾಹರಣೆಗೆ, ಆಗಸ್ಟ್ 1 ಅಥವಾ 3 ರಂದು ಮೈದಾನದಲ್ಲಿ ಓಟ, ಹೈಜಂಪ್ ಮುಂತಾದ ಕಠಿಣ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಯೊಬ್ಬ, ಮರುದಿನವೇ ದೂರದ ಮತ್ತೊಂದು ಜಿಲ್ಲೆಯ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿ ಲ್ಯಾಂಡ್ ಸರ್ವೇಯರ್ ಅಥವಾ ವಿಎ ಲಿಖಿತ ಪರೀಕ್ಷೆ ಬರೆಯುವುದು ಅಸಾಧ್ಯದ ಮಾತು.

ದೈಹಿಕವಾಗಿ ದಣಿದಿರುವ ಅಭ್ಯರ್ಥಿ, ಏಕಾಗ್ರತೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಎಂಬುದು ಆಕಾಂಕ್ಷಿಗಳ ಪ್ರಶ್ನೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ, ಅನಿವಾರ್ಯವಾಗಿ ಯಾವುದಾದರೂ ಒಂದೇ ಪರೀಕ್ಷೆಯನ್ನ ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪರೀಕ್ಷೆ ಮುಂದೂಡಲು ವಿದ್ಯಾರ್ಥಿ ಒಕ್ಕೂಟಗಳ ಆಗ್ರಹ

ವೇಳಾಪಟ್ಟಿಯ ಈ ಗೊಂದಲವನ್ನ ಬಗೆಹರಿಸಲು ತಕ್ಷಣವೇ ಉನ್ನತಾಧಿಕಾರಿಗಳು ಹಾಗೂ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ವಿದ್ಯಾರ್ಥಿ ಒಕ್ಕೂಟದ ಮುಖಂಡರು ಮತ್ತು ಉದ್ಯೋಗಾಕಾಂಕ್ಷಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ. ಲಿಖಿತ ಪರೀಕ್ಷೆಗಳ ದಿನಾಂಕವನ್ನ ಬದಲಾಯಿಸುವುದು ಕಷ್ಟವಾದರೆ, ಕನಿಷ್ಠಪಕ್ಷ ಆಗಸ್ಟ್ 1 ಮತ್ತು 3 ರಂದು ನಡೆಯಲಿರುವ ಪೊಲೀಸ್ ಪೇದೆಗಳ ದೈಹಿಕ ಪರೀಕ್ಷೆಯನ್ನಾದರೂ ಕೆಲವು ದಿನಗಳ ಮಟ್ಟಿಗೆ ಮುಂದೂಡಬೇಕು ಎಂದು ಒತ್ತಾಯಿಸಲಾಗಿದೆ.

ಒಂದು ವೇಳೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಅಭ್ಯರ್ಥಿಗಳ ಈ ನ್ಯಾಯಯುತ ಬೇಡಿಕೆಗೆ ಸ್ಪಂದಿಸದೆ ಹೋದರೆ, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಕೆ ನೀಡಿವೆ. ನಿರುದ್ಯೋಗಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡದೆ, ಕೂಡಲೇ ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+