ರಾಜ್ಯದ ಶೇ.60ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ; 4ನೇ ಸ್ಥಾನದಲ್ಲಿ ಕರ್ನಾಟಕ
ಬೆಂಗಳೂರು, ಡಿಸೆಂಬರ್ 1: "ಕರ್ನಾಟಕ ರಾಜ್ಯದಲ್ಲಿ ಮಂಗಳವಾರ(ನ.30) ದವರೆಗೆ ಶೇ.60ರಷ್ಟು ಜನರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಶೇ.60ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು, ಈ ಮೈಲಿಗಲ್ಲು ಸಾಧಿಸಿದ ದೇಶದ ನಾಲ್ಕನೇ ಪ್ರಮುಖ ರಾಜ್ಯ ಕರ್ನಾಟಕವಾಗಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಗಳಿಗೆ ಸಚಿವ ಡಾ.ಕೆ. ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
"ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರವೊಂದರಿಂದಲೇ ಸಾಧ್ಯವಾಗುವುದಿಲ್ಲ. ಜನರು ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು," ಎಂದು ಹೇಳಿದ್ದಾರೆ.

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿರ್ದೇಶನದಂತೆ ಇಂದಿನಿಂದ (ಡಿ. 1) ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಲು ಪ್ರಾರಂಭ ಮಾಡಿದ್ದೇವೆ. ಈ ಕುರಿತ ಸಿದ್ಧತೆಗಳನ್ನು ನಾನೇ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ," ಎಂದರು.
"ವಿಮಾನ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ ಆದ ಬಳಿಕ ವರದಿ ಬರುವವರೆಗೂ ಪ್ರಯಾಣಿಕರು ಅಲ್ಲಿಯೇ ಇರಬೇಕಾಗುತ್ತದೆ. ಡಿಸೆಂಬರ್ 2ರಂದು ಸಿಎಂ ಬಸವರಾಜ ಬೊಮ್ಮಾಯಿಯವರು ದೆಹಲಿಯಲ್ಲಿ ಆರೋಗ್ಯ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್‍ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ ಮಾಡುತ್ತಾರೆ," ಎಂದು ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಜನರು ಸಹ ಮುನ್ನೆಚ್ಚರಿಕೆಯಿಂದ ಇರಬೇಕು. ಸರ್ಕಾರ ಒಂದೇ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಜನರು ನಮ್ಮ ಜೊತೆ ಕೈ ಜೋಡಿಸಬೇಕು. ಜನರೇ ಸ್ವಯಂ ಆಗಿ ಬಂದು ಲಸಿಕೆ ಪಡೆಯಬೇಕು. ರಾಜ್ಯದಲ್ಲಿ ಎಲ್ಲೂ ಲಸಿಕೆ ಕೊರತೆ ಇಲ್ಲ. ಲಕ್ಷಾಂತರ ಲಸಿಕೆ ದಾಸ್ತಾನು ಇದೆ ಎಂದು ಹೇಳಿದರು.
ಇದೇ ವೇಳೆ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ನೀಡದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಸರ್ಕಾರ ಇಂತಹ ಶಿಫಾರಸ್ಸು ಒಪ್ಪುವುದಿಲ್ಲ. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಆಂದೋಲನ ಮಾಡಿ ಜಾಗೃತಿ ಮೂಡಿಸಿ ಲಸಿಕೆ ಕೊಡುತ್ತೇವೆ. ಈಗ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಆಚರಣೆಗೆ ಅಗತ್ಯ ಬಿದ್ದರೆ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ವೇಗವಾಗಿ ಹರಡುತ್ತದೆ. ಹೀಗಾಗಿ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾಲ ಕಾಲಕ್ಕೆ ಮಾರ್ಗಸೂಚಿ ಬದಲಾವಣೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೇವೆ. ಮನೆ ಮನೆಗೆ ಲಸಿಕೆ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲಾಗುತ್ತಿದೆ. ʼಲಸಿಕಾ ಮಿತ್ರʼ ಹೆಸರಿನಲ್ಲಿ ಲಸಿಕೆ ನೀಡಲಾಗುತ್ತಿದೆ. ಅತ್ಯಂತ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.












Click it and Unblock the Notifications