ಕೊರೊನಾದಿಂದ ಕಕ್ಕಾಬಿಕ್ಕಿಯಾದ ಕರುನಾಡಿನ ಕಂಪ್ಲೀಟ್ ಕಹಾನಿ!
ಬೆಂಗಳೂರು, ಮೇ.05: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 22 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ಗೊತ್ತಾಗಿದೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಗ್ರೀನ್ ಝೋನ್ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ದಾವಣಗೆರೆಯ ಚಿತ್ರಣ ಸಂಪೂರ್ಣ ಬದಲಾಗಿದೆ. ಇಂದು ಒಂದೇ ದಿನ ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ 12 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು ಬೆಣ್ಣೆನಗರಿ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಬೆಂಗಳೂರಿನಲ್ಲಿ ಬಾಗಲಕೋಟೆ 2, ಹಾವೇರಿ ಜಿಲ್ಲೆಯಲ್ಲಿ 1, ಧಾರವಾಡ 1, ಬಳ್ಳಾರಿ 1, ದಕ್ಷಿಣ ಕನ್ನಡ 1, ಉತ್ತರ ಕನ್ನಡ ಜಿಲ್ಲೆ ಹಾಗೂ ಭಟ್ಕಳದಲ್ಲಿ 1 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ.

ವಿಜಯಪುರದಲ್ಲಿ 62ರ ವೃದ್ಧೆ ಕೊರೊನಾಗೆ ಬಲಿ
ಕೊರೊನಾ ವೈರಸ್ ನಿಂದ ರಾಜ್ಯದಲ್ಲಿ ಮಂಗಳವಾರ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ನಿವಾಸಿಯಾಗಿದ್ದ 62 ವರ್ಷದ ವೃದ್ಧೆ ಕಳೆದ ಮೇ.03ರಂದು ಉಸಿರಾಟ ತೊಂದರೆ, ಅಸ್ತಮಾ ಕಾಯಿಲೆಯಿಂದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕಿತ 640ನೇ ರೋಗಿ ಮಂಗಳವಾರ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ಪತ್ತೆಯಾದ ದಿನವೇ ಸೋಂಕಿತೆ ಸಾವು
ದಾವಣಗೆರೆ ನಿವಾಸಿಯಾಗಿದ್ದ ಪೇಶೆಂಟ್ ನಂಬರ್ 662 ಆಗಿರುವ 50 ವರ್ಷದ ಮಹಿಳೆಯು ಉಸಿರಾಟ ತೊಂದರೆಯಿಂದ ಮೇ.05ರಂದು ನಗರದ ನಿಗದಿತ ಆಸ್ಪತ್ರೆಗೆ ದಾಖಲಾದ ದಿನವೇ ಕೊರೊನಾ ವೈರಸ್ ಮಾರಿಗೆ ಬಲಿಯಾಗಿದ್ದಾರೆ. ಇನ್ನು, ಜಿಲ್ಲೆಯಲ್ಲಿ ಒಂದೇ ದಿನ 12 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಆರು ಮಂದಿ ಮಹಿಳೆಯರು ಮತ್ತು ಆರು ಮಂದಿ ಪುರುಷರು ಎಂದು ಗುರುತಿಸಲಾಗಿದೆ.

ಕೊರೊನಾದಿಂದ ಕರ್ನಾಟಕದಲ್ಲಿ 30 ಮಂದಿ ಸಾವು
ನೊವೆಲ್ ಕೊರೊನಾ ವೈರಸ್ ಎಂಬ ಮಹಾಮಾರಿಯ ಅಟ್ಟಹಾಸಕ್ಕೆ ರಾಜ್ಯದಲ್ಲಿ ಇದುವರೆಗೂ 30 ಮಂದಿ ಉಸಿರು ಚೆಲ್ಲಿದ್ದಾರೆ. ರಾಜ್ಯದಲ್ಲಿ 673 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಪೈಕಿ 331 ಜನರು ಗುಣಮುಖರಾಗಿದ್ದಾರೆ. ಬಾಕಿ 306 ಜನರಿಗೆ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಸೋಂಕಿತರುಳ್ಳು ಟಾಪ್-5 ಜಿಲ್ಲೆಗಳು
ಕರ್ನಾಟಕದಲ್ಲಿ ಅತಿಹೆಚ್ಚು ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ನಂತರದಲ್ಲಿ ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳಿವೆ. ಮೂರೇ ದಿನಗಳಲ್ಲಿ ಅತಿಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವ ದಾವಣಗೆರೆಯ ಇದೀಗ ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗಾದರೆ ಯಾವ ಜಿಲ್ಲೆಗಳಲ್ಲಿ ಎಷ್ಟು ಸೋಂಕಿತ ಪ್ರಕರಣಗಳಿವೆ ಎಂಬುದರ ಪಟ್ಟಿ ಇಲ್ಲಿದೆ.
ಕರ್ನಾಟಕದಲ್ಲಿ ಹೆಚ್ಚು ಸೋಂಕಿತರುಳ್ಳ ಟಾಪ್-5 ಜಿಲ್ಲೆಗಳು:
- ಬೆಂಗಳೂರು - 153 ಮಂದಿಗೆ ಸೋಂಕು, 6 ಮಂದಿ ಸಾವು
- ಮೈಸೂರು - 88 ಮಂದಿಗೆ ಸೋಂಕು, ಒಂದೇ ಒಂದು ಸಾವಿಲ್ಲ
- ಬೆಳಗಾವಿ - 71 ಮಂದಿಗೆ ಸೋಂಕು, ಒಂದು ಸಾವು
- ಕಲಬುರಗಿ - 63 ಮಂದಿಗೆ ಸೋಂಕು, 6 ಮಂದಿ ಸಾವು
- ವಿಜಯಪುರ - 47 ಮಂದಿಗೆ ಸೋಂಕು, 3 ಮಂದಿ ಸಾವು












Click it and Unblock the Notifications