ಇಂದು ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಬಂದ್: ನೌಕರರ ಬ್ಲ್ಯಾಕ್‌ಮೇಲ್‌ಗೆ ಜಗ್ಗಲ್ಲ ಎಂದ ಸಚಿವ ಯು.ಟಿ ಖಾದರ್!
ಬೆಂಗಳೂರು: ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗೆ ಭಾರೀ ಪೆಟ್ಟು ಬೀಳುವ ಭೀತಿ ಎದುರಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಕವಚ '108' ಆ್ಯಂಬುಲೆನ್ಸ್ ನೌಕರರು ಬುಧವಾರ ರಾತ್ರಿ 10 ಗಂಟೆಯಿಂದಲೇ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ತಿರ್ಮಾನಿಸಿದ್ದಾರೆ. ಒಂದೊಮ್ಮೆ ಸರ್ಕಾರ ಸ್ಪಂದಿಸದಿದ್ದರೆ, ಸಾಮೂಹಿಕ ರಾಜೀನಾಮೆ ನೀಡಲು ನೌಕರರು ನಿರ್ಧರಿಸಿದ್ದು, ಸಾರ್ವಜನಿಕರು ಆತಂಕಪಡುವಂತಾಗಿದೆ.
ಕಳೆದ ಸೆಪ್ಟೆಂಬರ್ 22ರಂದು ನಡೆದ ಸಭೆಯಲ್ಲಿ 108 ಸೇವೆ ಒದಗಿಸುವ ಗುತ್ತಿಗೆ ಸಂಸ್ಥೆ ಜಿವಿಕೆ ಇಎಂಆರ್‌ಐ (GVK EMRI) ನೌಕರರ ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೆ ಆ ಭರವಸೆ ಈಡೇರದ ಹಿನ್ನೆಲೆಯಲ್ಲಿ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿದಿದ್ದಾರೆ.

ಕರ್ನಾಟಕ ರಾಜ್ಯ ಆರೋಗ್ಯ ಕವಚ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ, ಜಿವಿಕೆ ಕಂಪನಿಯು ಬೇರೆ ರಾಜ್ಯಗಳಲ್ಲಿ ಉತ್ತಮ ವೇತನ ನೀಡುತ್ತಿದ್ದರೂ ಕರ್ನಾಟಕದಲ್ಲಿ ನಮ್ಮನ್ನು ಶೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸುಮಾರು 3,200 ಚಾಲಕರು ಹಾಗೂ ಸ್ಟಾಫ್ ನರ್ಸ್‌ಗಳು ರಾಜೀನಾಮೆ ನೀಡಿ ಪರ್ಯಾಯ ಉದ್ಯೋಗ ಹುಡುಕಿಕೊಳ್ಳಲಿದ್ದಾರೆ. ಮುಂದಾಗುವ ಅನಾಹುತಗಳಿಗೆ ಸರ್ಕಾರ ಮತ್ತು ಜಿವಿಕೆ ಸಂಸ್ಥೆಯೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.
ನೌಕರರ ಬೇಡಿಕೆಗಳೇನು?
1. ಪ್ರತಿ ವರ್ಷ 108 ಆ್ಯಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು.
2. 3 ಪಾಳಿಯಲ್ಲಿ ಆ್ಯಂಬುಲೆನ್ಸ್ ವಾಹನದ ಸೌಕರ್ಯ ಮಾಡಬೇಕು.
3. ವಲಯವಾರೂ ವಿಂಗಡಣೆ ಮಾಡಿ ನಿಗದಿ ಮಾಡಿರುವ ವೇತನ ರದ್ದುಪಡಿಸಿ ಏಕರೂಪ ವಲಯವಾಗಿ ಬದಲಾವಣೆ ಮಾಡಬೇಕು.
4. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ.
5. ಜೇಷ್ಠತೆ ಆಧಾರದ ಮೇಲೆ ವೇತನ ನಿಗದಿ ಮಾಡಬೇಕು.
6. ಕಾರ್ಮಿಕ ಇಲಾಖೆ ಪ್ರಕಾರ ಪ್ರತಿ ತಿಂಗಳು 7ರ ಒಳಗೆ ವೇತನ ನೀಡಬೇಕು.
7. ಎಲ್ಲಾ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ, ಆ್ಯಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಮಾಡಬೇಕು ಎಂದು ನೌಕರರ ಸಂಘ ಆಗ್ರಹಿಸಿದೆ.
ನೌಕರರ ಬ್ಲ್ಯಾಕ್‌ಮೇಲ್‌ಗೆ ಜಗ್ಗಲ್ಲ: ಸಚಿವ ಯು.ಟಿ ಖಾದರ್ ಎಚ್ಚರಿಕೆ
ನೌಕರರ ಮುಷ್ಕರದ ಎಚ್ಚರಿಕೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "108 ಆ್ಯಂಬುಲೆನ್ಸ್ ಸಿಬ್ಬಂದಿಯ ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ಪ್ರಸ್ತುತ ಇರುವ 108 ವ್ಯವಸ್ಥೆಯಲ್ಲಿ ದೋಷಗಳಿದ್ದು, ಕರೆ ಮಾಡಿದರೆ 45 ನಿಮಿಷದಿಂದ ಒಂದು ಗಂಟೆ ತಡವಾಗಿ ಆ್ಯಂಬುಲೆನ್ಸ್ ಬರುತ್ತಿವೆ. ಈ ಸಂಪೂರ್ಣ ವ್ಯವಸ್ಥೆಯನ್ನು ಬದಲಾಯಿಸಿ, ಡಿಸೆಂಬರ್ ವೇಳೆಗೆ ಹೊಸ ಹಾಗೂ ಅತ್ಯುತ್ತಮ ಆ್ಯಂಬುಲೆನ್ಸ್ ಸೇವೆಯನ್ನ ಜಾರಿಗೆ ತರಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸಬೇಕು," ಎಂದು ಮನವಿ ಮಾಡಿದ್ದಾರೆ.
2 ತಿಂಗಳು 108 ಆ್ಯಂಬುಲೆನ್ಸ್ ಅವಲಂಬಿಸಬೇಡಿ - ಪರ್ಯಾಯ ವ್ಯವಸ್ಥೆ ಏನು?
"ಮುಂದಿನ ಎರಡು ತಿಂಗಳ ಕಾಲ ಸಾರ್ವಜನಿಕರು 108 ಆ್ಯಂಬುಲೆನ್ಸ್ ಸೇವೆಯನ್ನ ಅವಲಂಬಿಸಬೇಡಿ. ತುರ್ತು ಪರಿಸ್ಥಿತಿಯಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿರುವ ಸುಮಾರು 1,000ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳನ್ನ ಬಳಸಿಕೊಳ್ಳಿ," ಎಂದು ಸಚಿವರು ಪರ್ಯಾಯ ಮಾರ್ಗವನ್ನ ಸೂಚಿಸಿದ್ದಾರೆ.
ಹಿಂದೆ 735 ಆ್ಯಂಬುಲೆನ್ಸ್‌ಗಳಿದ್ದವು, ಆದರೆ ಈಗ ಕೇವಲ 400 ಆ್ಯಂಬುಲೆನ್ಸ್‌ಗಳು ಮಾತ್ರ ಕಾರ್ಯಾಚರಿಸುತ್ತಿವೆ. ಹೀಗಾಗಿಯೇ ಸೇವೆ ವಿಳಂಬವಾಗುತ್ತಿದೆ. ಒಂದು ವೇಳೆ ನೌಕರರ ಮುಷ್ಕರದಿಂದ ರೋಗಿಗಳ ಜೀವಕ್ಕೆ ತೊಂದರೆಯಾದರೆ, ಗುತ್ತಿಗೆ ಪಡೆದಿರುವ ಜಿವಿಕೆ ಸಂಸ್ಥೆಯ ಮೇಲೆಯೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಾದರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಒಟ್ಟಿನಲ್ಲಿ ಇಂದಿನಿಂದ ತುರ್ತು ವೈದ್ಯಕೀಯ ಸೇವೆ ಪಡೆಯುವ ರೋಗಿಗಳಿಗೆ ಪರದಾಟ ಶುರುವಾಗುವುದು ಬಹುತೇಕ ಖಚಿತವಾಗಿದೆ.


Click it and Unblock the Notifications
