Get Updates
Get notified of breaking news, exclusive insights, and must-see stories!

ಅಂ ಅಂದರೆ 'ಅಂಡ' ಅರಸ ಎಂದರೆ ಶಿವಾಜಿ: ಮಕ್ಕಳ ಕನ್ನಡ ಪುಸ್ತಕದಲ್ಲೇ ಅಧ್ವಾನ ?, ಕನ್ನಡಿಗರ ವಿರೋಧ

ಅನ್ಯಭಾಷಿಕರು ಕನ್ನಡದ ಬಗ್ಗೆ ಮಾತನಾಡುವುದು ಅಥವಾ ಬೆಂಗಳೂರು ಮತ್ತು ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿಲ್ಲ ಎನ್ನುವ ದೂರುಗಳು ಸಹಜ. ಆದರೆ, ಕರ್ನಾಟಕದ ಕನ್ನಡ ಪುಸ್ತಕದಲ್ಲಿಯೇ ಕನ್ನಡದ ಬದಲಿಗೆ ಹಿಂದಿ / ಸಂಸ್ಕೃತ ಹೇರಿಕೆಯಾದರೆ ಹೇಗೆ, ಅದೂ ಸಹ ಲಕ್ಷಾಂತರ ಜನ ಕನ್ನಡ ಮಕ್ಕಳು "ಅಂ" ಗೆ ಬದಲಾಗಿ ಅಂಡ ಎಂದು ಓದಿದರೆ ಹೇಗೆ ? ಅಥವಾ ನಮ್ಮ ರಾಜರ ಬದಲಿಗೆ ಶಿವಾಜಿ ಮಹರಾಜರ ಚಿತ್ರವನ್ನು ಮುದ್ರಿಸಿದರೆ, ಹೌದು ಕನ್ನಡ ಪುಸ್ತಕದಲ್ಲಿಯೇ ಈ ರೀತಿಯ ಆಭಾಸವಾಗಿದೆ ಎಂದು ಕನ್ನಡಿಗರು ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಬರಹ ಹಾಗೂ ಚಿತ್ರವನ್ನು ಹಂಚಿಕೊಂಡಿರುವ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಅವರು, ನಮ್ಮ ರಾಜ್ಯದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುವ ಪಠ್ಯಪುಸ್ತಕಗಳು ಇಂದು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಪುಸ್ತಕಗಳು ನಿಜವಾಗಿಯೂ ನಮ್ಮ ನಾಡಿನ ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿವೆಯೇ ಅಥವಾ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಮಕ್ಕಳ ಮೇಲೆ ಹೇರಲು ಬಳಸಲಾಗುತ್ತಿರುವ ಮೌನ ಅಸ್ತ್ರಗಳಾಗುತ್ತಿವೆಯೇ? ಇತ್ತೀಚಿನ ಕೆಲವು ನಿದರ್ಶನಗಳನ್ನು ಗಮನಿಸಿದರೆ, ಇದು ಕೇವಲ ಅಚಾತುರ್ಯವಲ್ಲ, ಬದಲಾಗಿ ಒಂದು ವ್ಯವಸ್ಥಿತ ಪ್ರಯತ್ನವೇನೋ ಎಂಬ ಆತಂಕ ಮೂಡುವುದು ಸಹಜ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Kannadigas Oppose Kannada Book for Imposing Hindi-Sanskrit by Calling Am as Anda and Shivaji

ಈ ಆತಂಕಕ್ಕೆ ಮೊದಲ ಕಾರಣ, ಮಕ್ಕಳ ಆಡುನುಡಿಯ ಮೇಲೆ ನಡೆಯುತ್ತಿರುವ ಸದ್ದಿಲ್ಲದ ಹಲ್ಲೆ. ಮಗು ಮನೆಯಲ್ಲಿ 'ಮೇಕೆ' ಎಂದೂ, 'ಮೊಟ್ಟೆ' ಎಂದೂ ಸಹಜವಾಗಿ ಕಲಿಯುತ್ತದೆ. ಆದರೆ ಶಾಲೆಯ ಪುಸ್ತಕದಲ್ಲಿ ಅದೇ ವಸ್ತುಗಳನ್ನು ಗುರುತಿಸಲು 'ಛಗ' ಮತ್ತು 'ಅಂಡ' ಎಂಬ ಅಪರಿಚಿತ, ಸಂಸ್ಕೃತ ಮೂಲದ ಪದಗಳನ್ನು ಕಲಿಸಲಾಗುತ್ತಿದೆ. ಇದು ಕೇವಲ ಶಬ್ದಕೋಶ ವಿಸ್ತರಿಸುವ ಪ್ರಯತ್ನವಲ್ಲ; ಇದು ಮಗುವಿನ ಭಾಷಾತ್ಮಕ ಆತ್ಮವಿಶ್ವಾಸವನ್ನು ಕುಗ್ಗಿಸಿ, ಮನೆಯ ಮಾತು ಕೀಳು, ಪುಸ್ತಕದ ಭಾಷೆಯೇ ಶ್ರೇಷ್ಠ ಎಂಬ ಕೀಳರಿಮೆಯನ್ನು ಬಿತ್ತುವ ಅಪಾಯಕಾರಿ ಪ್ರವೃತ್ತಿಯಾಗಿದೆ. ಇದು ಮಗುವಿನ ಕಲಿಕೆಯ ಮೊದಲ ಮೆಟ್ಟಿಲನ್ನೇ ಕಸಿಯುವ ಪ್ರಯತ್ನವಾಗಿದೆ.

ಈ ಸೂಕ್ಷ್ಮ ಭಾಷಾ ಹೇರಿಕೆಯು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಮರೆಮಾಚುವ ಬಹಿರಂಗ ಪ್ರಯತ್ನದೊಂದಿಗೆ ಕೈಜೋಡಿಸಿದೆ. 'ಅರಸ' ಎಂಬ ಪದವನ್ನು ಕಲಿಸುವಾಗ, ನಮ್ಮ ಕಣ್ಣ ಮುಂದೆ ಬರಬೇಕಾದ್ದು ಕದಂಬ, ಚಾಲುಕ್ಯ, ಹೊಯ್ಸಳ ಅಥವಾ ಮೈಸೂರು ಒಡೆಯರ ಚಿತ್ರ. ಆದರೆ, ನಮ್ಮದೇ ನೆಲದ ಅರಸರನ್ನು ಮರೆಮಾಚಿ, ಕನ್ನಡ ನಾಡಿಗೆ ನೇರ ಸಂಬಂಧವಿಲ್ಲದ ಶಿವಾಜಿಯಂತಹ ಅನ್ಯ ಪ್ರಾಂತ್ಯದ ರಾಜರ ಚಿತ್ರಗಳನ್ನು ಬಳಸಿ ನಮ್ಮತನವನ್ನೇ ಪ್ರಶ್ನಿಸುವಂತೆ ಮಾಡಲಾಗುತ್ತಿದೆ. ಇದೇ ರೀತಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮನಂತಹ ನಮ್ಮದೇ ನೆಲದ ಅಸಂಖ್ಯಾತ ವೀರರ ಸಾಹಸಗಾಥೆಗಳಿಗೆ ಸಿಗಬೇಕಾದ ಪ್ರಾಮುಖ್ಯತೆಯನ್ನು ನೀಡದೆ, ಪ್ರತಿ ವರ್ಷವೂ ಅನ್ಯ ನಾಡಿನವರ ಕಥೆಗಳನ್ನೇ ಮಕ್ಕಳು ಓದುವಂತಾಗಿದೆ. ಇದು ನಮ್ಮ ಮಕ್ಕಳನ್ನು ಅವರದೇ ಸಾಂಸ್ಕೃತಿಕ ಬೇರುಗಳಿಂದ ಬೇರ್ಪಡಿಸುವ ವ್ಯವಸ್ಥಿತ ಪ್ರಯತ್ನವಲ್ಲದೆ ಮತ್ತೇನು?

ಈ ಪ್ರವೃತ್ತಿಯು ಕೇವಲ ಭಾಷೆ ಮತ್ತು ಸಮಾಜ ವಿಜ್ಞಾನಕ್ಕೆ ಸೀಮಿತವಾಗಿಲ್ಲ. ಗಣಿತದಂತಹ ವಿಷಯಗಳಲ್ಲೂ ಸಹ, ಸರಳ ಕನ್ನಡ ಪದಗಳ ಬದಲು ಕ್ಲಿಷ್ಟವಾದ ಸಂಸ್ಕೃತ ಪದಗಳನ್ನು ಬಳಸುವುದು ಮಕ್ಕಳನ್ನು ವಿಷಯದಿಂದ ವಿಮುಖರಾಗುವಂತೆ ಮಾಡುತ್ತಿದೆ. ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಹಿನ್ನೆಲೆಯ ಮಕ್ಕಳಿಗೆ, ಭಾಷೆಯ ಈ ತೊಡಕು ಕಲಿಕೆಯನ್ನೇ ಕಬ್ಬಿಣದ ಕಡಲೆಯಾಗಿಸಿ, ಶಾಲೆಯಿಂದಲೇ ದೂರ ಸರಿಯುವಂತಹ ವಾತಾವರಣವನ್ನು ಸೃಷ್ಟಿಸುತ್ತಿದೆ. ಶಿಕ್ಷಣವು ಅಸಮಾನತೆಯನ್ನು ತೊಡೆದುಹಾಕುವ ಸಾಧನವಾಗಬೇಕೇ ಹೊರತು, ಅದನ್ನು ಮತ್ತಷ್ಟು ಹೆಚ್ಚಿಸುವ ಅಸ್ತ್ರವಾಗಬಾರದು.

ಆದ್ದರಿಂದ, ನಮ್ಮ ನಾಡು ನಮ್ಮ ಆಳ್ವಿಕೆಯು ಈ ಎಲ್ಲಾ ಬೆಳವಣಿಗೆಗಳನ್ನು ತೀವ್ರವಾಗಿ ಖಂಡಿಸುತ್ತದೆ. ನಮ್ಮ ಸ್ಪಷ್ಟ ಆಗ್ರಹವೇನೆಂದರೆ, ಪಠ್ಯಪುಸ್ತಕಗಳ ಪರಿಷ್ಕರಣೆಗೆ ರಾಜಕೀಯ ಪ್ರೇರಿತರ ಬದಲು, ನಿಷ್ಪಕ್ಷಪಾತ ಶಿಕ್ಷಣ ತಜ್ಞರು, ಭಾಷಾ ವಿದ್ವಾಂಸರು ಮತ್ತು ಇತಿಹಾಸಕಾರರನ್ನು ಒಳಗೊಂಡ ಸಮಿತಿಯನ್ನು ತಕ್ಷಣವೇ ರಚಿಸಬೇಕು. ಈ ಸಮಿತಿಯು ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಸಹಜ ಕನ್ನಡ ನುಡಿ ಬಳಕೆಗೆ ಮೊದಲ ಆದ್ಯತೆ ನೀಡಬೇಕು. ನಮ್ಮ ಮಕ್ಕಳ ಕೈಗಿಡುವ ಪುಸ್ತಕಗಳು ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕೇ ಹೊರತು, ಗೊಂದಲ ಸೃಷ್ಟಿಸಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಬಾರದು. ಕನ್ನಡತನವೇ ನಮ್ಮ ಶಿಕ್ಷಣದ ಆತ್ಮವಾಗಲಿ, ಹಾಗೂ ನಮ್ಮ ಪಠ್ಯಪುಸ್ತಕದ ಪ್ರತಿ ಪುಟವೂ ನಮ್ಮ ನಾಡಿನ ಸೊಗಡನ್ನು, ಮೌಲ್ಯಗಳನ್ನು ಮತ್ತು ಹೆಮ್ಮೆಯನ್ನು ಪ್ರತಿಬಿಂಬಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+