ರಾಜ್ಯೋತ್ಸವ ಪ್ರಶಸ್ತಿ 2020 ಘೋಷಣೆಗೆ ನೀತಿ ಸಂಹಿತೆ ಅಡ್ಡಿ
ಬೆಂಗಳೂರು, ಅಕ್ಟೋಬರ್ 27 : ಕೋವಿಡ್ ಕಾರಣದಿಂದಾಗಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಲಿದೆಯೇ?, ಇಲ್ಲವೇ? ಎಂಬ ಪ್ರಶ್ನೆ ಇತ್ತು. ಕರ್ನಾಟಕ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಲು ಬಯಸಿದೆ. ಆದರೆ, ಅದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ.
ಕರ್ನಾಟಕ ಸರ್ಕಾರ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಅಕ್ಟೋಬರ್ 27ರಂದು ಘೋಷಣೆ ಮಾಡಲಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಪ್ರಶಸ್ತಿ ಪ್ರಧಾನ ಸಮಾರಂಭ 2021ರ ಜನವರಿಯಲ್ಲಿ ನಡೆಯುವ ನಿರೀಕ್ಷೆ ಇದೆ.
ಈ ವರ್ಷ ಕನ್ನಡ ರಾಜ್ಯೋತ್ಸವದಂದು ಸಾಧಕರಿಗೆ ಪ್ರಶಸ್ತಿ ಪ್ರದಾನ ಅನಿಶ್ಚಿತ?
ನವೆಂಬರ್ 3ರಂದು ಆರ್. ಆರ್. ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. 4 ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಅಕ್ಟೋಬರ್ 28ರಂದು ಚುನಾವಣೆ ನಡೆಯಲಿದೆ. ಇದರಿಂದಾಗಿ 18 ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.
ಕೋವಿಡ್ ಪರಿಸ್ಥಿತಿಯಲ್ಲೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಸರ್ಕಾರ ಪ್ರಶಸ್ತಿ ಘೋಷಣೆ ಮಾಡುವಂತಿಲ್ಲ. ಆದ್ದರಿಂದ, ಸರ್ಕಾರ ಚುನಾವಣಾ ಆಯೋಗಕ್ಕೆ ಪ್ರಶಸ್ತಿ ಘೋಷಣೆ ಮಾಡಲು ಅನುಮತಿಯನ್ನು ಕೇಳಿದೆ. ಅನುಮತಿ ಸಿಕ್ಕ ಬಳಿಕ ಘೋಷಣೆಯಾಗಲಿದೆ.
ಕನ್ನಡ ಧ್ವಜವೇ ಇಲ್ಲದೆ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಆಕ್ರೋಶ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಸಿ. ಟಿ. ರವಿ ಈ ಕುರಿತು ಮಾಹಿತಿ ನೀಡಿದ್ದಾರೆ, "ಚುನಾವಣಾ ಆಯೋಗ ಅನುಮತಿ ನೀಡಿದರೆ ನವೆಂಬರ್ 1ರಂದು ಸರಳವಾಗಿ ಕಾರ್ಯಕ್ರಮ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
"ನೀತಿ ಸಂಹಿತೆ ಹಿನ್ನಲೆಯಲ್ಲಿ ಪ್ರಶಸ್ತಿ ಪ್ರಧಾನಕ್ಕೆ ಅನುಮತಿ ನೀಡದಿದ್ದರೆ ನೀತಿ ಸಂಹಿತೆ ಮುಗಿದ ಬಳಿಕ ಕಾರ್ಯಕ್ರಮವನ್ನು ನಡೆಸಿ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.