ಕನ್ನಡ ಮಾಧ್ಯಮ ಮತ್ತು ಕನ್ನಡ ಪರೀಕ್ಷೆ ಪಾಸಾದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯವಿಲ್ಲ
ಬೆಂಗಳೂರು, ಫೆಬ್ರವರಿ 21: ಕನ್ನಡ ಮಾಧ್ಯಮ ಮತ್ತು ಕನ್ನಡ ಪರೀಕ್ಷೆ ಪಾಸಾದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯವಿಲ್ಲ. ಕೆಲವೊಂದು ಅರ್ಹ ಅಭ್ಯರ್ಥಿಗಳಿಗೆ ಅಂದರೆ ತತ್ಸಮಾನ ಎಸ್.ಎಸ್.ಎಲ್.ಸಿ ಮತ್ತು ಅದರ ತತ್ಸಮಾನ ವಿದ್ಯಾರ್ಥಿಗಳ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸಿಸಿರುವ ಮತ್ತು ಸದರಿ ವಿದ್ಯಾಬ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಮಾಡಿರುವ ಮತ್ತು ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇತರ ಆಯ್ಕೆ ಪ್ರಾಧಿಕಾರಗಳು ನಡೆಸಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯಥಿಗಳಿಗೆ ಸದರಿ ಪರೀಕ್ಷೆಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ ಎಂದು ಕಾನೂನು ಸಚಿವರಾದ ಎಚ್.ಕೆ ಪಾಟೀಲ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಚ್.ಕೆ ಪಾಟೀಲ ಅವರು, ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ)(3ನೇ ತಿದ್ದುಪಡಿ) ನಿಯಮಗಳು, 2025ನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978ರ ಕಲಂ 3 ಮತ್ತು 8ರ ಅನುಸಾರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ, ತರುವಾಯ 15 ದಿನಗಳ ಒಳಗಾಗಿ ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲು ಹಾಗೂ ಪ್ರಕಟಗೊಂಡ 15 ದಿನಗಳ ಒಳಗಾಗಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದೇ ಇದ್ದಲ್ಲಿ ಅಥವಾ ಸ್ವೀಕೃತವಾದ ಆಕ್ಷೇಪಣೆ/ಸಲಹೆಗಳು ಗುರುತರವಾಗಿರದೇ ಇದ್ದಲ್ಲಿ ಅಥವಾ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಿ (ಸದರಿ ಕರಡು ನಿಯಮಗಳಲ್ಲಿ) ಮಾಡಬಹುದಾದ ಮಾರ್ಪಾಡುಗಳು ಪ್ರಮುಖವಾದಂತಹವುಗಳಾಗದೇ ಇದ್ದಲ್ಲಿ ಪುನಃ ಸಚಿವ ಸಂಪುಟದ ಅನುಮೋದನೆಗಾಗಿ ಮಂಡಿಸದೇ ಸದರಿ ಕರಡು ನಿಯಮಗಳನ್ನು ಅಂತಿಮವಾಗಿ ಹೊರಡಿಸಲು ಸಚಿವ ಸಂಪುಟ ಅನುಮೋದಿಸಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿ ಐಓಸಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಹಾಗೂ ಐಟಿಸಿ ಫ್ಯಾಕ್ಟರಿ ಜಂಕ್ಷನ್ ನಿಂದ ಬೈಯಪ್ಪನಹಳ್ಳಿ ಜಂಕ್ಷನ್‌ವರೆಗೆ ಹೆಚ್ಚುವರಿ ಎರಡು ಪಥದ ಆರ್‌ಓಬಿ ಯನ್ನು (ಸಂಯೋಜಿತ ಫ್ಲೈ ಓವರ್ ನೊಂದಿಗೆ) ನಿರ್ಮಾಣ ಮಾಡಲು ಟೆಂಡರ್ ಸಂಧಾನಿತ ಮೊತ್ತ ರೂ.426.50 ಕೋಟಿಗಳಿಗೆ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು. ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣದ ಕಾಮಗಾರಿಯನ್ನು ರೂ.20.98 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆ, ಹುಬ್ಬಳ್ಳಿ ತಾಲ್ಲೂಕು ಕೃಷ್ಣಪೂರ ಗ್ರಾಮದಲ್ಲಿ ಇವರಿಗೆ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಲಭ್ಯ ನಿವೇಶನವನ್ನು 30 ವರ್ಷಗಳ ಗುತ್ತಿಗೆ ಅವಧಿಗೆ ದಿನಾಂಕ: 28.11.2022 ರಂದು ಹಂಚಿಕೆ ಮಾಡಲಾಗಿದ್ದು, ನಿವೇಶನದ ವೆಚ್ಚದ ಶೇಕಡಾ 10ರಷ್ಟು ಮೌಲ್ಯಕ್ಕೆ ಹಂಚಿಕೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆ (ರಿ),. ಗೋಕುಲ ರಸ್ತೆ ಹುಬ್ಬಳ್ಳಿ ಇವರಿಗೆ ಸಾಮಾಜಿಕ ಉದ್ದೇಶಕ್ಕಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಲಾಗಿರುವ ಹುಬ್ಬಳ್ಳಿ ತಾಲ್ಲೂಕು, ಕೃಷ್ಣಾಪೂರ ಗ್ರಾಮದ ರಿ.ಸ.ನಂ.95ಅ+95ಬ ರ ನಾಗರಿಕ ಸೌಲಭ್ಯ ನಿವೇಶನ ಸಂಖ್ಯೆ: 338 ನೇದ್ದರ ಕ್ಷೇತ್ರ 12 ಗುಂಟೆ 7 ಆಣೆ 1258.30 ಚ.ಮೀ.ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನವನ್ನು ರೂ.70,46,480/-ಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್) ಆಧಾರದ ಮೇಲೆ ಹಂಚಿಕೆ ಮಾಡಲಾಗಿರುತ್ತದೆ. ಶ್ರೀ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆ (ರಿ)., ಗೋಕುಲ ರಸ್ತೆ, ಹುಬ್ಬಳ್ಳಿ ಇವರು ಪ್ರಾಧಿಕಾರಕ್ಕೆ ಪಾವತಿಸಬೇಕಾಗಿರುವ ಬಾಕಿ ಮೊತ್ತಕ್ಕೆ ವಿನಾಯಿತಿ ನೀಡಿ 30 ವರ್ಷಗಳ ಅವಧಿಗೆ ಗುತ್ತಿಗೆ (ಲೀಜ್) ಮಾಡಿಕೊಡುವ ಕುರಿತು ಸಚಿವ ಸಂಪುಟವು ನಿರ್ಧರಿಸಿದೆ ಎಂದು ತಿಳಿಸಿದರು.
ಮರು ಟೆಂಡರ್ ಎ. ಮುಖ್ಯ ಆಯುಕ್ತರು, ಬಿ.ಬಿ.ಎಂ.ಪಿ. ರವರು ದಿನಾಂಕ: 23.08.2024ರ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ವಿವರಿಸಿದಂತೆ ವಿಶೇಷ ಮಾದರಿಯ ಕಾಮಗಾರಿ/ ಯೋಜನೆ ಆಗಿರುವುದರಿಂದ, ಈಜೀಪುರ ಮೇಲ್ಸೇತುವೆ ಕಾಮಗಾರಿಯಲ್ಲಿ ಆಗಿರುವ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲವನ್ನು ಸಾಧ್ಯವಾದಷ್ಟು ಬೇಗನೆ ತಪ್ಪಿಸಿ, Construction of Elevated Rotary Flyover at IOC Junction and Construction of additional 2 Lane ROB at Baiyyappanahalli Railway Level Crossing on Turnkey -Lumpsum -Fixed Price -No Variation - No Escalation basis" ಯೋಜನೆಯ ಬೃಹತ್ ಕಾಮಗಾರಿಗಳನ್ನು ಕಾಲಮಿತಿಯೊಳಗೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯಗೊಳಿಸಲು ಅನುವಾಗುವಂತೆ ಚಾಲ್ತಿ ದರಕ್ಕೆ ಶೇ.21 ರಷ್ಟು ಹೆಚ್ಚಿನ ಲಾಭಾಂಶವುಳ್ಳ ಸಂಧಾನಿತ ಟೆಂಡರ್ ಪ್ರಸ್ತಾವನೆಯಾದ Smt. Kusuma (Star Infratech formerly Known as State Builders and Developers ರವರ ಬಿಡ್ಡನ್ನು 2024-25ನೇ ಸಾಲಿಗೆ ಮುಂದುವರೆದಿರುವ 2023-24ನೇ ಸಾಲಿನ ಚಾಲ್ತಿ ದರಗಳಿಗೆ ಟೆಂಡರ್‌ಗಿಟ್ಟ ಮೊತ್ತವಾದ ರೂ. 352,48,00,000.00 ಗಳಿಗೆ ಹೋಲಿಸಿದಾಗ ಶೇಕಡ (+) 21.00% ರಷ್ಟು ಇರುವ ಅಂದರೆ, ರೂ. 426,50,08,000.00 ಗಳ ಸಂಧಾನಿತ ಮೊತ್ತಕ್ಕೆ ಸಚಿವ ಸಂಪುಟವು ಒಪ್ಪದೆ ಮರು ಟೆಂಡರ್ ಕರೆಯಲು ತೀರ್ಮಾನಿಸಿದೆ.












Click it and Unblock the Notifications