ಪುನೀತ್ ಸದಾಶಿವನಗರ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್
ಬೆಂಗಳೂರು,ಅ. 29: ನಟ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿ ತಲುಪಿದೆ. ಪುನೀತ್ ಆರೋಗ್ಯ ಪರಿಸ್ಥಿತಿಯ ಬಗ್ಗೆ ಇನ್ನೂ ಹೇಳೋಕೆ ಆಗಲ್ಲ ಎಂಬ ಹೇಳಿಕೆ ನೀಡುವ ಮೂಲಕ ವಿಕ್ರಂ ಆಸ್ಪತ್ರೆ ವೈದ್ಯ ಡಾ. ರಂಗನಾಥ್ ನಾಯಕ್ ಹೇಳಿಕೆ ಅಭಿಮಾನಿ ಬಳಗದಲ್ಲಿ ಆತಂಕ ಮೂಡಿಸಿದೆ. ಸಂಜೆ ಮೂರು ಗಂಟೆ ವೇಳೆಗೆ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ ಎಂಬ ಮಾತು ಹೊರ ಬಿದ್ದಿದೆ.
ಚಿತ್ರರಂಗದ ದಂಡು ಭೇಟಿ: ಪುನೀತ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಲಘು ಹೃದಯಾಘಾತ ಆಗಿದ್ದು, 11.30 ರ ಸುಮಾರಿಗೆ ವಿಕ್ರಂ ಆಸ್ಪತ್ರೆಗೆ ದಾಖಲಾದರು. ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಪುನೀತ್ ಆರೋಗ್ಯದ ಬಗ್ಗೆ ಈಗಲೇ ಏನೂ ಹೇಳೋಕೆ ಸಾಧ್ಯವಿಲ್ಲ ಎಂದು ವಿಕ್ರಂ ಆಸ್ಪತ್ರೆಯ ತಜ್ಞ ವೈದ್ಯ ಡಾ. ರಂಗನಾಥ್ ನಾಯಕ್ ಹೇಳಿಕೆ ನೀಡಿದ್ದಾರೆ. ಇದು ಪುನೀತ್ ಅಭಿಮಾನಿ ಬಳಗದಲ್ಲಿ ದೊಡ್ಡ ಕೊಲಾಹಲ ಎಬ್ಬಿಸಿದೆ. ಇದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಗಣ್ಯರು ಭೇಟಿ ನೀಡಿರುವುದು ಪುನೀತ್ ಆರೋಗ್ಯ ಸ್ಥಿತಿಯ ಬಗೆಗಿನ ಆತಂಕ ಮತ್ತಷ್ಟು ಹೆಚ್ಚಿಸಿದೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ರವಿಚಂದ್ರನ್ ಸೇರಿದಂತೆ ಗಣ್ಯಾತಿ ಗಣ್ಯ ನಟರು, ನಿರ್ಮಾಪಕರು ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಸಿನಿಮಾ ರಂಗದ ಎಲ್ಲಾ ಚಟುವಟಿಕೆ ಬಂದ್ ಮಾಡಲಾಗಿದೆ. ಸಿನಿಮಾ ಪ್ರದರ್ಶನ ಕೂಡ ಬಂದ್ ಮಾಡುವಂತೆ ಸೂಚಿಸಿದ್ದು ರಾಜ್ಯದಲ್ಲಿ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಈ ಬೆಳವಣಿಗೆ ಪುನೀತ್ ಮತ್ತು ಸಿನಿಮಾ ರಂಗದಲ್ಲಿ ಆತಂಕ ಹೆಚ್ಚಿಸಿದೆ.
ಪೊಲೀಸ್ ಬಿಗಿ ಪೊಲೀಸ್ ಬಂದೋಬಸ್ತ್ :
ಪುನೀತ್ ರಾಜ್ ಕುಮಾರ್ ವಿಕ್ರಂ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ವಿಕ್ರಂ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಆಸ್ಪತ್ರೆ ಬಳಿ ಸಾವಿರಾರು ಅಭಿಮಾನಿಗಳು ಅದಾಗಲೇ ಜಮಾಯಿಸಿದ್ದಾರೆ. ಪುನೀತ್ ಅಭಿಮಾನಿಗಳನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಲಾಗಿದೆ. ಆರಂಭದಲ್ಲಿ ಒಂದು ಕೆಎಸ್ ಆರ್ಪಿ ಪಡೆ ನಿಯೋಜಿಸಿದ್ದ ಪೊಲೀಸರು ಆ ಬಳಿಕ ನಾಲ್ಕು ತುಕಡಿ ಪೊಲೀಸರನ್ನು ರವಾನಿಸಿದ್ದಾರೆ. ಪುನೀತ್ ಅವರ ಸದಾಶಿವನಗರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ಏರ್ಪಸಲಾಗಿದೆ. ಆಸ್ಪತ್ರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಅಭಿಮಾನಿಗಳ ಗೋಳಾಟ:
ಪುನೀತ್ ರಾಜ್ ಕುಮಾರ್ ಅವರನ್ನು ನೋಡುವ ಆಸೆಯಿಂದ ಅಭಿಮಾನಿಗಳು ಪೊಲೀಸರ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳನ್ನು ಯಾರನ್ನೂ ಒಳಗೆ ಬಿಟ್ಟಿಲ್ಲ. ಆಸ್ಪತ್ರೆಯಿಂದ ದೂರ ಸರಿಯುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪೊಲೀಸರ ಮನವಿಗೆ ಅಭಿಮಾನಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ವಿಕ್ರಂ ಆಸ್ಪತ್ರೆ ಸಮೀಪ ಆತಂಕದ ವಾತಾವರಣ ನಿರ್ಮಾಣ ವಾಗಿದೆ.