ನೌಕಾಪಡೆಯ ಅಧಿಕಾರಿಗಳು ಅತಿ ಹೆಚ್ಚು ಸೇವಿಸುವುದು ಈ ಆಹಾರಗಳನ್ನೇ! ಇದಕ್ಕೆ ಕಾರಣವೂ ಇದೆ
ನೌಕಾಪಡೆಯ ಅಧಿಕಾರಿಗಳು, ಸಿಬ್ಬಂದಿ ಜೀವನವನ್ನು ಒಮ್ಮೊ ಊಹಿಸಿ ನೋಡಿ. ಸಮುದ್ರದ ಮಧ್ಯಭಾಗದಲ್ಲಿಯೇ ಇವರ ಬದುಕು. ತಿಂಗಳಾನುಗಟ್ಟಲೆ ಕೆಲವೊಮ್ಮೆ ವರ್ಷಗಳವರೆಗೆ ಇಲ್ಲಿಯೇ ಇವರ ಜೀವನ. ಇವರ ಬದುಕು ಕೂಡಾ ನಿತ್ಯ ದಿನಚರಿಯೊಂದಿಗೆ ಸಾಗುತ್ತದೆ. ಇಲ್ಲಿ ಸಾಮಾನ್ಯರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುವುದು ಇವರ ಆಹಾರ. ಹಡಗಿನಲ್ಲಿರುವ ಗ್ಯಾಲಿ ಕೇವಲ ಅಡುಗೆಮನೆಯಲ್ಲ. ಒತ್ತಡದಿಂದ ತುಂಬಿರುವ ಮನಸ್ಸನ್ನು ಸ್ವಲ್ಪ ಸಮಯದವರೆಗಾದರೂ ತಣ್ಣನೆ, ಸಾಮಾನ್ಯವಾಗಿ ಇರಿಸಬಲ್ಲ ಸ್ಥಳ ಎಂದರೆ ತಪ್ಪಲ್ಲ. ಇವರಿಗೆ ತಾಜಾ ಆಹಾರ ಎಂದರೆ ಅದು ಎರಡು ವಾರಗಳಿಗೆ ಮಾತ್ರ ಮೀಸಲು. ಆಮೇಲೆ ಏನಿದ್ದರೂ ಫ್ರೋಜನ್ ಫುಡ್‌ಗಳದ್ದೇ ಕಾರುಬಾರು. ಶಿಪ್‌ಬೋರ್ಡ್ ಮೆನುಗಳಲ್ಲಿ ಹೆಚ್ಚು ದಿನ ಬಾಳಿಕೆ ಬರುವ ಮತ್ತು ಚಲನೆಯಲ್ಲಿ ಬಡಿಸಲು ಸುಲಭವಾದ ಆಹಾರಗಳಿಗೆ ಆದ್ಯತೆ ನೀಡಲಾಗುತ್ತದೆ. ಹಾಗಂತ ಇವರ ಊಟದ ತಟ್ಟೆ ನೀರಸ ಎಂದೂ ಅಲ್ಲ.
ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಅಧಿಕೃತ ವೆಬ್‌ಸೈಟ್ ಫ್ಲೀಟ್ ಮತ್ತು ಫ್ಯಾಮಿಲಿ ರೆಡಿನೆಸ್ (FFR) ಪ್ರಕಾರ , "ಇಂದಿನ ನೌಕಾಪಡೆಯ ಗ್ಯಾಲಿಗಳು ಸಮುದ್ರದಲ್ಲಿ ಮತ್ತು ತೀರದಲ್ಲಿ ನಾವಿಕರಿಗೆ ಭರಪೂರ ಊಟವನ್ನು ಒದಗಿಸುವ ದಶಕಗಳ ಸಂಪ್ರದಾಯದ ಒಂದು ಭಾಗವಾಗಿದೆ. ಏಷ್ಯನ್, ಮೆಕ್ಸಿಕನ್ ಮತ್ತು ಇಟಾಲಿಯನ್ ಪಾಕಪದ್ಧತಿಯಂತಹ ಜನಾಂಗೀಯ ಆಹಾರಗಳಲ್ಲಿ ಜನಪ್ರಿಯ ಅಭಿರುಚಿಗಳನ್ನು ಉಣಬಡಿಸಲು ಗ್ಯಾಲಿಗಳನ್ನು ವಿಕಸನಗೊಳಿಸಲಾಗಿದೆ. ಅನೇಕ ಗ್ಯಾಲಿಗಳು ಆರೋಗ್ಯಕರ ಊಟದ ಆಯ್ಕೆಗಳಿಗೆ ಒತ್ತು ನೀಡುವುದರ ಜೊತೆಗೆ ಸ್ಥಳೀಯ ಫ್ಲೆವರ್ ಅನ್ನು ಕೂಡಾ ಸೇರಿಸುತ್ತದೆ. ವಾರ್ಷಿಕವಾಗಿ 28 ಮಿಲಿಯನ್‌ಗಿಂತಲೂ ಹೆಚ್ಚು ಊಟಗಳನ್ನು ಈ ಗ್ಯಾಲಿಗಳು ಪೂರೈಸುತ್ತವೆ. ಹೆಚ್ಚು ತರಬೇತಿ ಪಡೆದ ನೌಕಾಪಡೆ ಮತ್ತು ನಾಗರಿಕ ಸಿಬ್ಬಂದಿಯನ್ನು ಹೊಂದಿರುವ ಅತ್ಯುತ್ತಮ ಸೌಲಭ್ಯಗಳಲ್ಲಿ ಪೌಷ್ಟಿಕ ಊಟವನ್ನು ನೀಡಲಾಗುತ್ತಿದೆ.

ಓಟ್ ಮೀಲ್:
ಓಟ್ ಮೀಲ್ ಹಡಗಿನಲ್ಲಿ ಬಳಸುವ ಪ್ರಮುಖ ಆಹಾರ ಪದಾರ್ಥವಾಗಿದೆ. ಏಕೆಂದರೆ ಅದು ಅಗ್ಗ, ಸಾಂದ್ರ ಮತ್ತು ವಿಶ್ವಾಸಾರ್ಹವಾಗಿದೆ. ಇದು ನೌಕಾಪಡೆಯ ಗ್ಯಾಲಿ ಯೋಜನಾ ಸಾಮಗ್ರಿಗಳಲ್ಲಿ ಪ್ರಮಾಣಿತ ಉಪಹಾರ ವಸ್ತುವಾಗಿ ಕಾಣಿಸಿಕೊಳ್ಳುತ್ತದೆ.ಇದನ್ನು ನೂರಾರು ಜನರಿಗೆ ಸುಲಭವಾಗಿ ಬಡಿಸಬಹುದು. ಇದು ದೇಹಕ್ಕೆ ಎನರ್ಜಿಯನ್ನು ಕೂಡಾ ನೀಡುತ್ತದೆ. ಹಡಗಿನಲ್ಲಿ ಸಿಗುವ ಉಪಹಾರವನ್ನು ಸೇವಿಸಿದ ಮೇಲೆ ಆ ತಿಂಡಿ ನಿಮ್ಮ ದೇಹದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೇಗೆಂದರೆ ಅದು ನಿಮ್ಮನ್ನು ಬೆಚ್ಚಗಾಗಿಸಬೇಕು, ನಿಮ್ಮ ಹೊಟ್ಟೆ ತುಂಬಿಸಬೇಕು ಮತ್ತು ನಿಮ್ಮಲ್ಲಿ ಎನರ್ಜಿ ತುಂಬಿರುವಂತೆ ಮಾಡಬೇಕು. ಹಾಗಾಗಿ ಓಟ್ ಮೀಲ್ ಹಡಗಿನಲ್ಲಿ ಬೆಸ್ಟ್ ಉಪಹಾರವಾಗಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಮೊಟ್ಟೆಗಳು:
ಮೊಟ್ಟೆ ಕೂಡಾ ನೌಕಾಪಡೆಯ ಉಪಹಾರ ಯೋಜನೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಬೇಯಿಸಿದ ರೂಪದಲ್ಲಿ ಇನ್ನು ಕೆಲವೊಮ್ಮೆ ಸ್ಯಾಂಡ್‌ವಿಚ್ ರೂಪದಲ್ಲಿ ಮೊಟ್ಟೆ ಪ್ರಮುಖ ಆಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಮೊಟ್ಟೆಯನ್ನು ಆಹಾರದಲ್ಲಿ ಬಳಸಿದರೆ ತಟ್ಟೆಯಲ್ಲಿ ತ್ಯಾಜ್ಯ ಉಳಿಯುವ ಕಿರಿಕಿರಿ ಇಲ್ಲ. ಮೊಟ್ಟೆ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಒದಗಿಸುತ್ತದೆ. ಊಟದ ಸಮಯವಾದಾಗ ವೇಗವಾಗಿ ತಯಾರಾಗುವ, ಬಾಯಿಗೆ ರುಚಿ, ಮನಸ್ಸಿಗೆ ತೃಪ್ತಿ ನೀಡುವ ಆಹಾರವಾಗಿ ಮೊಟ್ಟೆ ಕಾಣಿಸಿಕೊಳ್ಳುತ್ತದೆ.
ಬಾಗಲ್‌ಗಳು ಮತ್ತು ಬಿಸ್ಕತ್ತು ಸ್ಯಾಂಡ್‌ವಿಚ್‌ಗಳು:
ಇನ್ನು ಓಟ್ಸ್ ಜೊತೆಗೆ ಬ್ಯಾಗಲ್ ಮತ್ತು ಬಿಸ್ಕತ್ತು ಸ್ಯಾಂಡ್‌ವಿಚ್‌ಗಳು ಉಪಾಹಾರವನ್ನು ಸಂಪೂರ್ಣ ಮಾಡಿಬಿಡುತ್ತವೆ. ನೌಕಾಪಡೆಯ ಗ್ಯಾಲಿಯಲ್ಲಿ ಮೊಟ್ಟೆ, ಜ್ಯೂಸ್, ಮೊಸರು ಮತ್ತು ಕಾಫಿಯ ಜೊತೆಗೆ ಬಾಗಲ್‌ಗಳು ಕೂಡಾ ಇರುತ್ತವೆ. ಹಡಗಿನಲ್ಲಿ ಬೆಳಗಿನ ಆಹಾರದ ಭಾಗವಾಗಿ ಮೊಟ್ಟೆ ಮತ್ತು ಚೀಸ್‌ನೊಂದಿಗೆ ಬಿಸ್ಕತ್ತು ಸ್ಯಾಂಡ್‌ವಿಚ್‌ಗಳನ್ನು ನೀಡುತ್ತವೆ. ಇನ್ನು ಬಿಸ್ಕತ್ತು ಸ್ಯಾಂಡ್‌ವಿಚ್ ಅನ್ನು ಕೆಲಸದ ಮಧ್ಯೆ ಬೇಗ ಬೇಗನೆ ತಿಂದು ಮುಗಿಸಬಹುದು. ಬಾಗಲ್ ಅನ್ನು ಟೋಸ್ಟ್ ಮಾಡಬಹುದು, ಟಾಪ್ ಮಾಡಬಹುದು. ಸಮುದ್ರದಲ್ಲಿ, ವೇಗವಾಗಿ ಜೋಡಿಸಬಹುದಾದ ಆಹಾರ ಸಾಮಗ್ರಿಗಳ ಪೈಕಿ ಇದು ಮುಖ್ಯವಾಗಿದೆ.
ಹಣ್ಣು ಮತ್ತು ಮೊಸರು:
ಹಣ್ಣು ಮತ್ತು ಮೊಸರು ಇವರ ಆಹಾರದ ಬಹು ಮುಖ್ಯ ಭಾಗವಾಗಿದೆ. ನೌಕಾಪಡೆಯ ಊಟದ ಮೆನುವಿನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದನ್ನು ಬಹಳ ಹಿಂದಿನಿಂದಲೂ ಒತ್ತಿಹೇಳಿದೆ.ಇವರ ದಿನನಿತ್ಯದ ಉಪಹಾರ ವಸ್ತುಗಳಲ್ಲಿ ಹಣ್ಣು, ಕಿತ್ತಳೆ ರಸ ಮತ್ತು ಮೊಸರು ಸೇರಿರುತ್ತದೆ.
ಟ್ರಯಲ್ ಮಿಕ್ಸ್ ಮತ್ತು ಗ್ರಾನೋಲಾ ಬಾರ್‌ಗಳು:
ಸಮುದ್ರದ ನಡುವೆ ನೌಕಾ ಪಡೆ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರತಿಯೊಂದು ಊಟಕ್ಕೂ ಡೈನಿಂಗ್ ಟೇಬಲ್ ಬಳಿಯೇ ಬರುತ್ತಾರೆ ಎಂದೇನಿಲ್ಲ. ಕೆಲವೊಮ್ಮೆ ದೀರ್ಘಾವಧಿಯ ಕರ್ತವ್ಯದ ನಡುವೆ ನಿಂತಲ್ಲೇ ಊಟ ತಿಂಡಿ ಮುಗಿಸಬೇಕಾಗುತ್ತದೆ. ಆಗ ಕೆಲಸಕ್ಕೆ ಬರುವುದೇ ಈ ಟ್ರಯಲ್ ಮಿಕ್ಸ್ ಮತ್ತು ಗ್ರಾನೋಲಾ ಬಾರ್‌ಗಳು. ನೌಕಾಪಡೆಯ ಆಹಾರಗಳು ಓಟ್ ಮೀಲ್ ಪ್ಯಾಕೆಟ್‌ಗಳು, ಡ್ರೈ ಫ್ರುಟ್ಸ್, ಕಾಫಿ, ಚಹಾ, ಬಿಸಿ ಕೋಕೋನಂತಹ ವಸ್ತುಗಳನ್ನು ಕೂಡಾ ಸೇರಿವೆ. ನೌಕಾ ಜಗತ್ತಿನಲ್ಲಿ ಪೋರ್ಟಬಲ್ ಆಹಾರ ಎಷ್ಟು ಮುಖ್ಯ ಎಂಬುದನ್ನು ಇದು ತಿಳಿಸುತ್ತದೆ. ಇವು ಆಕರ್ಷಕ ಆಹಾರಗಳಲ್ಲ. ಆದರೆ ದೀರ್ಘ ಅವಧಿಯ ಕೆಲಸ, ಕಾರ್ಯ ನಿರತ ದಿನಗಳಲ್ಲಿ ಬದುಕುಳಿಯುವ ಆಹಾರಗಳಾಗಿ ಕೆಲಸ ಮಾಡುತ್ತವೆ.
ಕಾಫಿ ಮತ್ತು ಚಹಾ:
ನೌಕಾಪಡೆಯ ಗ್ಯಾಲಿ ಸಾಮಗ್ರಿಗಳಲ್ಲಿ ಕಾಫಿ, ಚಹಾ ಮತ್ತು ಹಾಟ್ ಚಾಕೊಲೇಟಿಗೆ ಒಂದು ಜಾಗ ಇದ್ದೇ ಇರುತ್ತದೆ. ಬೆಳಗಿನ ಜಾವದ ಎದ್ದ ಕೂಡಲೇ, ರಾತ್ರಿಯಿಡೀ ಎಚ್ಚರವಿದ್ದು ಕಾವಲು ಕಾಯುವಾಗ ಅಥವಾ ಆಯಾಸವಾದಾಗ ಚಹಾ ಕಾಫಿ ವಿಶೇಷ ಅರ್ಥವನ್ನು ನೀಡುತ್ತದೆ. ಒಂದು ಲೋಟ ಬಿಸಿ ಬಿಸಿ ಚಹಾ ಅಥವಾ ಕಾಫಿ ಲೋಹದ ಕಾರಿಡಾರ್, ಯಂತ್ರೋಪಕರಣಗಳ ನಡುವೆ ಇರುವ ಒತ್ತಡವನ್ನು ಮರೆಸಿ ಸಾಮಾನ್ಯರು ವಾಸಿಸುವ ಸ್ಥಳದಂತೆ ಭಾಸ ಮಾಡಿಸಬಹುದು.
ನೌಕಾಪಡೆಯ ಅಧಿಕಾರಿಗಳು ಸೇವಿಸುವ ಆಹಾರವನ್ನು ಅವರಿರುವ ನೌಕೆಯಲ್ಲಿಯೇ ಸಾಗಿಸಬೇಕು. ಇದರಲ್ಲಿ ಜನರು ಎಷ್ಟು ದಿನಗಳವರೆಗೆ ಇರುತ್ತಾರೆಯೋ ಅಷ್ಟೂ ದಿನ ಆಹಾರ ಪೂರೈಸುತ್ತಿರಬೇಕು. ಅಂದರೆ ಅಷ್ಟು ಪ್ರಮಾಣದಲ್ಲಿ ಆಹಾರ ಸಾಗಿಸಬೇಕು. ಗ್ಯಾಲಿ ಅವರಿಗೆ ಬೆಸ ಗಂಟೆಗಳಲ್ಲಿ ಆಹಾರವನ್ನು ನೀಡಬೇಕು ಮತ್ತು ಮೆನು ನಿಜವಾದ ಕಾರ್ಯಾಚರಣೆಯ ಒತ್ತಡದಲ್ಲಿ ಒಟ್ಟಿಗೆ ಹಿಡಿದಿರಬೇಕು. ತಾಜಾ ಆಹಾರಗಳನ್ನೇ ತೆಗೆದುಕೊಂಡು ಹೋದರೆ ಅವು ಬಹು ಬೇಗನೆ ಖಾಲಿಯಾಗಬಹುದು. ಆಗ ಆಹಾರಕ್ಕಾಗಿ ನೌಕೆಯನ್ನು ಸಮುದ್ರ ಮಧ್ಯದಲ್ಲಿ ನಿಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಇಂಥಹ ಆಹಾರಗಳಿಗೆ ಆದ್ಯತೆ ನೀಡಲಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications