ಜೈಲಿನಿಂದ ಬಿಡುಗಡೆ, ಪತ್ನಿ ತಬ್ಬಿಕೊಂಡು ಕಣ್ಣೀರಿಟ್ಟ ದುನಿಯಾ ವಿಜಯ್
ಬೆಂಗಳೂರು, ಅಕ್ಟೋಬರ್ 01 : ಪರಪ್ಪನ ಅಗ್ರಹಾರ ಜೈಲಿನಿಂದ ಕನ್ನಡ ನಟ ದುನಿಯಾ ವಿಜಯ್ ಬಿಡುಗಡೆಯಾದರು. ಬೆಂಗಳೂರಿನ 70ನೇ ಸೆಷನ್ಸ್ ಕೋರ್ಟ್ ಸೋಮವಾರ ದುನಿಯಾ ವಿಜಯ್‌ಗೆ ಜಾಮೀನು ನೀಡಿತ್ತು.
ಸೋಮವಾರ ಸಂಜೆ 7.30ರ ಸುಮಾರಿಗೆ ದುನಿಯಾ ವಿಜಯ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ, ಅಪಹರಣ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮಣಿ, ಪ್ರಸಾದ್, ಕಾರು ಚಾಲಕ ಮಣಿ ಅವರು ಸಹ ಬಿಡುಗಡೆಗೊಂಡರು.

ಸೆ.23ರಿಂದ ದುನಿಯಾ ವಿಜಯ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಜೈಲಿನಿಂದ ಹೊರಬಂದ ಅವರು ಭಾವುಕರಾದರು. 2ನೇ ಪತ್ನಿ ಕೀರ್ತಿ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟರು.
ಜೈಲಿನ ಮುಂದೆ ದುನಿಯಾ ವಿಜಯ್ ಅವರ ನೂರಾರು ಅಭಿಮಾನಿಗಳು ಜಯಕಾರ ಹಾಕುತ್ತ ನೆಚ್ಚಿನ ನಟನನ್ನು ಸ್ವಾಗತಿಸಿದರು. ಅಭಿಮಾನಿಗಳತ್ತ ಕೈ ಬೀಸಿ ಹೊಸಕೆರೆಹಳ್ಳಿ ನಿವಾಸದತ್ತ ವಿಜಯ್ ಪ್ರಯಾಣ ಬೆಳೆಸಿದರು.
ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರಾಮಲಿಂಗೇಗೌಡ ಅವರು ದುನಿಯಾ ವಿಜಯ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದ್ದರು. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿತ್ತು. ಸಾಕ್ಷಿನಾಶ ಮಾಡಬಾರದು, ತನಿಖೆಗೆ ಸಹಕಾರ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ.
'ಜಾಮೀನು ನೀಡಿದ್ದೇವೆ. ಮುಂದೆ ಹೀಗೆ ವರ್ತಿಸದಂತೆ ಸಲಹೆ ನೀಡಿ, ಸೆಲೆಬ್ರಿಟಿಗಳು ಬೇರೆಯವರಿಗೆ ಮಾದರಿ ಆಗಬೇಕು. ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳಿ' ಎಂದು ನ್ಯಾಯಾಧೀಶರು ದುನಿಯಾ ವಿಜಯ್ ಅವರಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ.












Click it and Unblock the Notifications