Lok Sabha Election 2024: ಆರು ಕ್ಷೇತ್ರಗಳಲ್ಲಿ ಕೆಎಸ್‌ಪಿಪಿ ಸ್ಪರ್ಧೆ, ಜನಾರ್ಧನ ರೆಡ್ಡಿ ತಂತ್ರವೇನು?
ಬೆಂಗಳೂರು, ಜಲೈ 05: ಲೋಕಸಭಾ ಚುನಾವಣೆ 2024 ಗೆ ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಸ್ಥಳೀಯ ಪಕ್ಷಗಳು ಸಹ ಅಗತ್ಯ ಸಿದ್ಧತೆ ಮಾಡಿಕೊಳ್ಳತ್ತಿವೆ. ಈ ನಿಟ್ಟಿನಲ್ಲಿ ಗಾಲಿ ಜನಾರ್ಧನ ರೆಡ್ಡಿ ನೇತೃತ್ವದ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'(KSPP) ಚುನಾವಣೆ ಕುರಿತು ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ.
ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕ ಮಾಡಿಕೊಳ್ಳುವುದಿಲ್ಲ. ಅಲ್ಲದೇ ಚುನಾವಣೆಯಲ್ಲಿ ಒಟ್ಟು ಆರು ಕ್ಷೇತ್ರಗಳಲ್ಲಿ ನಮ್ಮ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'(KSPP) ಅಭ್ಯರ್ಥಿಗಳು ಸ್ಪರ್ಧೆ ಒಡ್ಡಲಿದ್ದಾರೆ ಎಂದು ಸ್ವತಃ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಅವರು 'ಹೊಸದಿಗಂತ'ಕ್ಕೆ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಭಾಗದ ಲೋಕಸಭಾ ಕ್ಷೇತ್ರಗಳು ಒಳಗೊಂಡಂತೆ ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರ್ಯವಾಗಿ ಅಖಾಡಕ್ಕೆ ಇಳಿಯಲಿದ್ದೇವೆ ಎಂದರು.
ಪಕ್ಷವು ಮುಂದಿನ ಆಗಸ್ಟ್ ತಿಂಗಳಿಂದಲೇ ಲೋಕಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಪ್ರಚಾರ ಆರಂಭಿಸಲಿದೆ. ಈ ಪ್ರಚಾರ ಕಾರ್ಯವು ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕೊಪ್ಪಳ, ಕಲಬುರಗಿ, ಬೀದರ್, ಕುಷ್ಟಗಿ, ರಾಯಚೂರು ಭಾಗಗಲ್ಲಿ ಮೊದಲ ನಡೆಯಲಿದೆ. ಪ್ರತಿ ಗ್ರಾಮ ಮತ್ತು ಹೂಬಳಿ ಮಟ್ಟವನ್ನು ಕೆಎಸ್‌ಪಿಪಿ ಪಕ್ಷ ತಲುಪಲು ಯೋಜನೆ ರೂಪಿಸಿಕೊಂಡಿದೆ.

ಬೇರೆ ಪಕ್ಷಗಳ ಆಕಾಂಕ್ಷಿಗಳಿಗೆ ರೆಡ್ಡಿ ಗಾಳ
ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೆಕೆಂದು ತಂತ್ರ ರೂಪಿಸಿರುವ ಗಾಲಿ ಜನಾರ್ಧನ ರೆಡ್ಡಿ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸೇರಿದಂತೆ ವಿವಿಧ ಪಕ್ಷಗಳಲ್ಲಿ ಯಾರು ಲೋಕಸಭಾ ಚುನಾವಣೆ ಆಕಾಂಕ್ಷಿಗಳಿದ್ದು, ಅವರಿಗೆ ಟಿಕೆಟ್ ಸಿಗದಿದ್ದರೆ ಅಂತವರಿಗೆ ಗಾಳ ಹಾಕಲಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ವರ್ಚಸ್ಸು ಇರುವವರು ಸಿಕ್ಕಂತಾಗುತ್ತದೆ. ಗೆಲುವಿಗೆ ದಾರಿ ಹತ್ತಿರವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅವರಿದ್ದಂತಿದೆ.
ಇದೇ ವರ್ಷ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪಿಸಿದ್ದಾರೆ. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು 224 ಕ್ಷೇತ್ರಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಕೆಎಸ್‌ಪಿಪಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ ಅದರಲ್ಲಿ ಗಾಲಿ ಜರ್ನಾರ್ಧನ ರೆಡ್ಡಿ ಅವರು ಮಾತ್ರ ಗೆಲುವು ಕಂಡಿದ್ದಾರೆ. ಇದೀಗ ಅದರ ಬೆನ್ನಲ್ಲೆ ಅವರು ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.
ಪಾರದರ್ಶಕ ಆಡಳಿತ ನೀಡಲು ಪಕ್ಷ ಸ್ಥಾಪನೆ:ರೆಡ್ಡಿ
ನಾನು ಬಿಜೆಪಿ ವಿರುದ್ಧ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿಲ್ಲ. 12ನೇ ಶತಮಾನದ ಸಮಾಜ ಸುಧಾರಕ ಶರಣ ಬಸವಣ್ಣನವರ ತತ್ವಗಳನ್ನು ಅನುಸರಿಸಿ ರಾಜ್ಯಕ್ಕೆ ಪಾರದರ್ಶಕ ಆಡಳಿತ/ಸರ್ಕಾರವನ್ನು ನೀಡುವ ಮಹಾದಾಸೆಯಿಂದ ಈ ಪಕ್ಷ ಸ್ಥಾಪಿಸಿದ್ದೇನೆ. ನಮ್ಮ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಆರಂಭಿಸಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಕಳೆದ ತಿಂಗಳು ಗಾಲಿ ಜನಾರ್ಧನ ರೆಡ್ಡಿ ಅವರು ಬೆಲೂರಿನ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಹೇಳಿದ್ದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಮೂದಲು ನೀಡಿದ ಉಚಿತ ಭಾಗ್ಯಗಳ ಭರವಸೆಯನ್ನು ಈಡೇರಿಸಬೇಕು. ಒಂದು ವೇಳೆ ಗ್ಯಾರಂಟಿ ಯೋಜನೆ ಜಾರಿಗೆ ತರುವಲ್ಲಿ ವಿಫಲವಾದರೆ ಬೇರೆಯವರನ್ನು ದೂಷಿಸಬಾರದು ಎಂದರು. ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಇದೇ ವೇಳೆ ಅವರು ವಾಗ್ದಾಳಿ ನಡೆಸಿದ್ದರು.












Click it and Unblock the Notifications