ರಾಜ್ಯದ ಪ್ರಮುಖ ವಿಮಾನ ನಿಲ್ದಾಣದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಸಚಿವ ಎಂ. ಪಾಟೀಲ್
ಕರ್ನಾಟಕದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಪ್ರಕ್ರಿಯೆ ಕಗ್ಗಂಟಾಗಿರುವಾಗಲೇ ಮತ್ತೊಂದು ಪ್ರಮುಖ ವಿಮಾನ ನಿಲ್ದಾಣದ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಅಪ್ಡೇಟ್ಸ್ ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಹಾಗೂ ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿ ಪರ್ವವೇ ಶುರುವಾಗಿದೆ ಎಂದು ಹೇಳಬಹುದು. ಇದೀಗ ಕರ್ನಾಟಕ ಪ್ರಮುಖ ವಿಮಾನ ನಿಲ್ದಾಣವೊಂದಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಾರ್ವಜನಿಕ ಮಹತ್ವದ ಯೋಜನೆಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗಳು ಪೂರ್ವಾನ್ವಯವಾಗುವಂತೆ ಅನುಮೋದನೆಗಳನ್ನು ನೀಡಬಾರದೆಂದು ಈ ವರ್ಷದ ಮೇ ತಿಂಗಳಲ್ಲಿ ತಾನು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ಇದರಿಂದಾಗಿ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಇದ್ದ ಅಡೆತಡೆ ಬಹುಮಟ್ಟಿಗೆ ನಿವಾರಣೆಯಾಗಿದ್ದು, ನಿರೀಕ್ಷೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಯುಗಾದಿ ವೇಳೆಗೆ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ವಿಶ್ವಾಸ ಇದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಅವರು, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದರೆ, ಸುಪ್ರೀಂಕೋರ್ಟಿನಲ್ಲಿದ್ದ ಪರಿಸರ ಸಂಬಂಧಿ ಪ್ರಕರಣದಿಂದಾಗಿ ಏನೂ ಮಾಡುವಂತಿರಲಿಲ್ಲ. ಸುಪ್ರೀಂಕೋರ್ಟಿನ ನಿರ್ಧಾರದಿಂದ ಈಗ ಒಂದು ಹೆಜ್ಜೆ ಮುಂದಕ್ಕೆ ಬಂದಿದ್ದೇವೆ. ಈ ವಿಚಾರ ಈಗಲೂ ನ್ಯಾಯಾಂಗದ ವಿಚಾರಣೆಯಲ್ಲಿದೆ ಎನ್ನುವ ಅರಿವಿದೆ. ಆದರೂ ಇವತ್ತಿನ ನಿಲುವು ನಮ್ಮ ಕಿತ್ತೂರು ಕರ್ನಾಟಕ ಭಾಗಕ್ಕೆ ನಿರಾಳತೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಪುರ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ಈ ಹಿಂದಿನ ತೀರ್ಪಿನಿಂದ ವಿಮಾನ ನಿಲ್ದಾಣದ ಅಸ್ತಿತ್ವಕ್ಕೆ ಅಪಾಯ ಎದುರಾಗಿತ್ತು. ಆದರೆ, ಸಚಿವ ಎಂ ಬಿ ಪಾಟೀಲರು ತ್ವರಿತವಾಗಿ ಕ್ರಿಯಾಶೀಲರಾಗಿ, ಕಪಿಲ್ ಸಿಬಲ್ ಅವರಂತಹ ಹಿರಿಯ ನ್ಯಾಯವಾದಿಯನ್ನು ನೇಮಿಸಿಕೊಳ್ಳುವ ಮೂಲಕ ವಿಮಾನ ನಿಲ್ದಾಣಕ್ಕೆ ಪುನರ್ಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications