ಕರ್ನಾಟಕದಲ್ಲಿ ಈ ಸರ್ಕಾರಿ ಹುದ್ದೆಗಳ ನೇಮಕಾತಿ ಬೇಗ ಆಗಬೇಕು: ವಿಜಯಪುರ- ಬೆಂಗಳೂರು “ವಿಧಾನಸೌಧ ಚಲೋ” ಯತ್ನಾಳ್ ಎಚ್ಚರಿಕೆ
Karnataka Govt Job: ಕರ್ನಾಟಕದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹಾಗೂ ತಕ್ಷಣ ಜಾರಿಗೆ ತರಬೇಕಾದ ಬೇಡಿಕೆಗಳು ಎಂದು 13 ಅಂಶಗಳನ್ನು ಶಾಸಕ ಬಸನಗೌಡ ಪಾಟೀಲ್ ಅವರು ಹಂಚಿಕೊಂಡಿದ್ದಾರೆ. ಒಳ ಮೀಸಲಾತಿ ಸೇರಿದಂತೆ ಎಲ್ಲಾ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
1. ಒಳ ಮೀಸಲಾತಿ ಸೇರಿದಂತೆ ಎಲ್ಲಾ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸಬೇಕು.
2. ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ SC, ST, OBC ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 33 ವರ್ಷಗಳವರೆಗೆ ಹಾಗೂ GM ಅಭ್ಯರ್ಥಿಗಳಿಗೆ ನಿಗದಿತವಾಗಿ ಖಾಯಂಗೊಳಿಸಬೇಕು.

3. 545 PSI ಹಾಗೂ 402 PSI ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಜೊತೆಗೆ ಪೊಲೀಸ್ ಇಲಾಖೆಯ ಎಲ್ಲಾ ಬಾಕಿ ನೇಮಕಾತಿಗಳನ್ನು ಕೂಡಲೇ ಪ್ರಾರಂಭಿಸಬೇಕು.
4. PSTR, GPSTR, HSTR, ದೈಹಿಕ ಶಿಕ್ಷಕರು, PU ಉಪನ್ಯಾಸಕರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗಳನ್ನು ತಕ್ಷಣ ಆರಂಭಿಸಬೇಕು.
5. ಎಲ್ಲಾ ನೇಮಕಾತಿಗಳಲ್ಲೂ ಭ್ರಷ್ಟಾಚಾರ ರಹಿತ, ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸಬೇಕು.
6. ಗ್ರಂಥಪಾಲಕರು ಹಾಗೂ ಸಹಾಯಕ ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು.
7. ಪ್ರತಿವರ್ಷ ಎಲ್ಲಾ ಇಲಾಖೆಗಳಲ್ಲಿನ ಎಲ್ಲಾ ಹುದ್ದೆಗಳ ನೇಮಕಾತಿ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.
8. ಮುಂದಿನ ಐದು ವರ್ಷಗಳ ಕಾಲ ಎಲ್ಲಾ ಇಲಾಖೆಗಳಿಗೂ ಶಾಶ್ವತ ವಯೋಮಿತಿ ಸಡಿಲಿಕೆಯನ್ನು ಖಾಯಂಗೊಳಿಸಬೇಕು.
9. ಕೇಂದ್ರ ಲೋಕಸೇವಾ ಆಯೋಗದ (UPSC) ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಪರೀಕ್ಷಾ ಶುಲ್ಕ ವ್ಯವಸ್ಥೆಯನ್ನು ಅನ್ವಯಿಸಬೇಕು.
10. AO, AAO, Land Surveyor, Veterinary Officer ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
11. 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಪೋಸ್ಟರ್ ಬಿಂದುವನ್ನು ತಕ್ಷಣ ಅಳವಡಿಸಬೇಕು.
12. ಆರೋಗ್ಯ ಇಲಾಖೆಯಲ್ಲಿರುವ Group A, Group B, Group C ಹಾಗೂ ನರ್ಸಿಂಗ್ ಸಿಬ್ಬಂದಿಯ ಎಲ್ಲಾ ಬಾಕಿ ನೇಮಕಾತಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು.
13. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ UGC ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ, ಪಾರದರ್ಶಕ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಜಾರಿಗೆ ತರಬೇಕು.
ನಾಡಿನ ಯುವಶಕ್ತಿಯ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸುತ್ತಿರುವಂತೆ ಕಾಣುತ್ತಿದೆ. ಹಗಲಿರುಳು ಶ್ರಮಪಟ್ಟು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಈಗಾಗಲೇ ಅನೇಕ ಅಭ್ಯರ್ಥಿಗಳ ವಯೋಮಿತಿ ಮುಗಿದಿದ್ದು, ಅವರ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದೆ.
ಯುವಕರಿಗೆ ಉದ್ಯೋಗ ಒದಗಿಸಬೇಕಾದ ಸರ್ಕಾರ ನಿರ್ಲಕ್ಷ್ಯ ಧೋರಣೆಯಲ್ಲಿ ಕಾಲಹರಣ ಮಾಡುತ್ತಿದೆ. 2026-27 ವಿತ್ತೀಯ ವರ್ಷದ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವ ಸ್ಪಷ್ಟ ಮತ್ತು ದೃಢ ಆಶ್ವಾಸನೆಯನ್ನು ನೀಡಬೇಕು. ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರಿಸಿದಲ್ಲಿ, ವಿಜಯಪುರದಿಂದ - ಬೆಂಗಳೂರಿನವರೆಗೆ "ವಿಧಾನಸೌಧ ಚಲೋ" ಪಾದಯಾತ್ರೆಯ ಮೂಲಕ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ರಾಜ್ಯದ ಮುಂದೆ ಬಯಲಿಗೆಳೆಯಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.












Click it and Unblock the Notifications