'ಸ್ಕಾಲರ್‌ಶಿಪ್ ಮಾಸ್ಟರ್' ನಾರಾಯಣ ನಾಯಕ್: 83ರ ಇಳಿವಯಸ್ಸಿನಲ್ಲೂ ಬೈಕ್ ಏರಿ ಹೊರಡುವ ಈ 'ಮಾಸ್ಟರ್' ನಿಜವಾದ ಹೀರೋ
ಉಡುಪಿ: ಸಾಮಾನ್ಯವಾಗಿ ನಿವೃತ್ತಿಯ ನಂತರದ ಜೀವನವನ್ನು ಜನರು ವಿಶ್ರಾಂತಿಯಲ್ಲಿ ಕಳೆಯಲು ಬಯಸುತ್ತಾರೆ. ಆದರೆ, ಕರ್ನಾಟಕದ ಕರಾವಳಿ ಭಾಗದ 83 ವರ್ಷದ ಹಿರಿಯರೊಬ್ಬರು, ತಮ್ಮ ಇಳಿವಯಸ್ಸಿನಲ್ಲೂ ಬೈಕ್ ಏರಿ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರೇ ಕೆ. ನಾರಾಯಣ ನಾಯಕ್ (K Narayana Naik) ವಿದ್ಯಾರ್ಥಿ ವಲಯದಲ್ಲಿ 'ಸ್ಕಾಲರ್‌ಶಿಪ್ ಮಾಸ್ಟರ್' ಎಂದೇ ಖ್ಯಾತರಾಗಿರುವ ಇವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ವರವಾಗಿದ್ದಾರೆ.
ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕರಾಗಿರುವ ನಾರಾಯಣ ನಾಯಕ್ ಅವರು ಕಳೆದ 25 ವರ್ಷಗಳಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಈವರೆಗೆ ಇವರ ಪ್ರಯತ್ನದಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಟ್ಟು 5 ಕೋಟಿ ರೂ. ಮೌಲ್ಯದ ಸ್ಕಾಲರ್‌ಶಿಪ್‌ಗಳು ಲಭಿಸಿವೆ. ಅರ್ಹತೆ ಇದ್ದರೂ ಮಾಹಿತಿ ಕೊರತೆಯಿಂದ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುವ ವಿದ್ಯಾರ್ಥಿಗಳನ್ನು ಹುಡುಕಿ, ಅವರಿಗೆ ನೆರವಾಗುವುದೇ ಇವರ ಗುರಿ.

Job Recruitment: ಕೆಇಎ 325 ಹುದ್ದೆಗಳ ನೇಮಕಾತಿ, ಪರೀಕ್ಷೆಯ ಕೀ ಉತ್ತರ ಬಿಡುಗಡೆ, ಮಹತ್ವದ ಸೂಚನೆ
ಸ್ವಂತ ಖರ್ಚಿನಲ್ಲಿ ಸೇವೆ
ನಾಯಕ್ ಅವರಿಗೆ ಬರುವ ಮಾಸಿಕ ಪಿಂಚಣಿ ಸುಮಾರು 40,000 ರೂ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಅವರು ಬಡ ವಿದ್ಯಾರ್ಥಿಗಳ ಸೇವೆಗಾಗಿಯೇ ಮೀಸಲಿಡುತ್ತಾರೆ. ತಮ್ಮ ಹಳೆಯ ಹೋಂಡಾ ಡ್ರೀಮ್ ಬೈಕ್ ಏರುವ ಇವರು, ವರ್ಷಕ್ಕೆ ಸುಮಾರು 350ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ. ಪದವಿ ಕಾಲೇಜು, ಪಾಲಿಟೆಕ್ನಿಕ್, ಐಟಿಐ ಮತ್ತು ಬಿ.ಎಡ್ ಕಾಲೇಜುಗಳಿಗೆ ತೆರಳಿ, ಅಲ್ಲಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳನ್ನು ಭೇಟಿಯಾಗಿ ಲಭ್ಯವಿರುವ ಸ್ಕಾಲರ್‌ಶಿಪ್‌ಗಳ ಬಗ್ಗೆ ಮಾಹಿತಿ ನೀಡುತ್ತಾರೆ.
ದೂರದ ಊರುಗಳಿಗೆ ಹೋಗಲು ಸಾರ್ವಜನಿಕ ಸಾರಿಗೆಯನ್ನೂ ಬಳಸುತ್ತಾರೆ. ಬಡ ಕೃಷಿ ಕುಟುಂಬದಲ್ಲಿ ಜನಿಸಿದ ನಾರಾಯಣ ನಾಯಕ್ ಅವರು, ಬಾಲ್ಯದಲ್ಲಿ ಶಾಲೆಗೆ ಹೋಗಲು ಮೈಲುಗಟ್ಟಲೆ ನಡೆಯಬೇಕಿತ್ತು. ಶಿಕ್ಷಣ ಮುಂದುವರಿಸಲು ಮನೆಯಲ್ಲಿ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರಂತೆ. ತಾವು ಅನುಭವಿಸಿದ ಕಷ್ಟ ಇಂದಿನ ಮಕ್ಕಳಿಗೆ ಬರಬಾರದು ಎಂಬ ಉದ್ದೇಶದಿಂದ, ಹಿಂದಿ ಮತ್ತು ಕನ್ನಡದಲ್ಲಿ ಎಂ.ಎ ಹಾಗೂ ಬಿ.ಎಡ್ ಪದವಿ ಪಡೆದ ನಂತರ, ಶಿಕ್ಷಕ ವೃತ್ತಿಯ ಮೂಲಕ ಸಮಾಜ ಸೇವೆಗೆ ಇಳಿದರು.
ಅಧಿಕಾರಿಗಳ ಪ್ರಶಂಸೆ
ಅರ್ಜಿ ತುಂಬುವುದರಿಂದ ಹಿಡಿದು, ಸರ್ಕಾರಿ ಕಚೇರಿಗಳಲ್ಲಿ ಫಾಲೋ-ಅಪ್ ಮಾಡುವವರೆಗೆ ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳಿಗೆ ನಾರಾಯಣ ನಾಯಕ್ ಸಾಥ್ ನೀಡುತ್ತಾರೆ. ಇವರ ಈ ನಿಸ್ವಾರ್ಥ ಸೇವೆಯಿಂದ ಗ್ರಾಮೀಣ ಭಾಗದಲ್ಲಿ ಶಾಲಾ ಡ್ರಾಪ್‌ಔಟ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಇವರ ನೆರವಿನಿಂದ ಓದಿದ ಎಷ್ಟೋ ವಿದ್ಯಾರ್ಥಿಗಳು ಇಂದು ಎಂಜಿನಿಯರ್‌ಗಳು, ಡಾಕ್ಟರ್‌ಗಳು ಆಗಿದ್ದಾರೆ.
ನಿಜಕ್ಕೂ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ನಾರಾಯಣ ನಾಯಕ್ ಅವರ ಸೇವೆ ಎಲ್ಲರಿಗೂ ಮಾದರಿ.












Click it and Unblock the Notifications