Job Recruitment: ಕೆಇಎ 325 ಹುದ್ದೆಗಳ ನೇಮಕಾತಿ, ಪರೀಕ್ಷೆಯ ಕೀ ಉತ್ತರ ಬಿಡುಗಡೆ, ಮಹತ್ವದ ಸೂಚನೆ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಿ, ಇದೇ ಜನವರಿ 25ರಂದು ಪರೀಕ್ಷೆ ನಡೆಸಿತ್ತು. ಆ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಜನವರಿ 27ರಂದು ಬಿಡುಗಡೆ ಮಾಡಿದೆ. ಕೀ ಉತ್ತರಗಳನ್ನು ಗಮನಿಸಿ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವನ್ನು ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ತಾಂತ್ರಿಕ ಶಿಕ್ಷಣ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಜಲಮಂಡಳಿ, ಕೆಎಸ್ ಡಿಎಲ್, ಕೃಷಿ ಮಾರಾಟ ಇಲಾಖೆ ಸೇರಿದಂತೆ ಒಟ್ಟು 8 ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕ ಹಾಗೂ ಸಮಾನಾಂತರ ಒಟ್ಟು 325 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಜನವರಿ 25ರಂದು ನಡೆಸಲಾದ ಲಿಖಿತ ಪರೀಕ್ಷೆಯ ಕೀ ಉತ್ತರಗಳು ಬಿಡುಗಡೆ ಆಗಿವೆ. ಈ ಕೀ ಉತ್ತರಗಳಿಗೆ ಸಂಬಧಿಸಿದಂತೆ ಪರೀಕ್ಷಾರ್ಥಿಗಳ ಆಕ್ಷೇಪಣೆ ಇದ್ದಲ್ಲಿ ಜನವರಿ 29ರಂದು ಬೆಳಗ್ಗೆ 9ಗಂಟೆ ಒಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಪರೀಕ್ಷಾರ್ಥಿಗಳು ಪ್ರಾಧಿಕಾರದಿಂದ ಪ್ರಕಟಿಸಲಾದ ಈ ಕೀ ಉತ್ತರಗಳಿಗೆ ಆಕ್ಷೇಪಣೆಗಳು ಇದ್ದಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಲಾದ https://cetonline.karnataka.gov.in/kea ಲಿಂಕ್ ಮೂಲಕ ಗುರುವಾರ ಬೆಳಗ್ಗೆ 9 ಘಂಟೆಯೊಳಗೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗೆ 25 ರೂಪಾಯಿ ಅನ್ನು ಪಾವತಿಸಬೇಕು. ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಪ್ರಶ್ನೆ ಸಂಖ್ಯೆ. ವರ್ಷನ್ ಕೋಡ್ ನಮೂದಿಸದೇ ಇರುವ ಅಥವಾ ಅಪೂರ್ಣ/ಆಧಾರ ರಹಿತವಾಗಿರುವ ಹಾಗೂ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು.
ಸಿಇಟಿ-2026 ಮತ್ತು KREIS-2026: ಎಸ್‌ಸಿ ಅಭ್ಯರ್ಥಿಗಳ ಗಮನಕ್ಕೆ
ರಾಜ್ಯ ಸರ್ಕಾರ ತನ್ನ ಆದೇಶದ ಪ್ರಕಾರ ಬೆಂಗಳೂರು ಆಗಸ್ಟ್ 25, 2025 ರಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಒಳಮೀಸಲಾತಿ ಕಲ್ಪಿಸಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ವರ್ಗೀಕರಣ ಮಾಡಿದೆ. ಈ ಕಾರಣದಿಂದ, ಸಿಇಟಿ-2026 ಹಾಗೂ KREIS-2026ಗೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಒಳಮೀಸಲಾತಿ ವಿವರಗಳು ಮುದ್ರಿತವಾಗಿರುವ (ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ) ಜಾತಿ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರ್ ರವರಿಂದ ಪಡೆದು, ಅದರೊಂದಿಗೆ ಆರ್‌ಡಿ ಸಂಖ್ಯೆಯನ್ನು ಸಿಇಟಿ-2026 ರ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸುವಂತೆ ಈಗಾಗಲೇ ಸೂಚಿಸಲಾಗಿದೆ.
ಆದರೆ ಕೆಲವು ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಈ ಮೊದಲೆ ಪಡೆದಿದ್ದ ಅಂದರೆ ಒಳಮೀಸಲಾತಿ ವಿವರಗಳು ಮುದ್ರಿತ ಆಗಿಲ್ಲದಿರುವ ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನೇ ಸಿಇಟಿ 2026 ಹಾಗೂ KREIS-2026 ರ ಅರ್ಜಿಯಲ್ಲಿ ನಮೂದಿಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಆರ್‌ಡಿ ಸಂಖ್ಯೆ ಇರುವ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಮಾತ್ರ ಆಯಾ ವರ್ಗಕ್ಕೆ ನಿಗದಿಯಾಗುವ ಸೀಟುಗಳ ಹಂಚಿಕೆಗೆ ಪರಿಗಣಿಸಲಾಗುವುದು. (ಆರ್‌ಡಿ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು) ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications