40 ಪರ್ಸೆಂಟ್ ಕಮೀಷನ್ ಆರೋಪ; ಸರ್ಕಾರಕ್ಕೆ ಕೋರ್ಟ್‌ ಖಡಕ್ ಎಚ್ಚರಿಕೆ

ಬೆಂಗಳೂರು, ಫೆಬ್ರವರಿ 14: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನ್‌ ದಾಸ್‌ ಅವರ ಸಮಿತಿಗೆ ವರದಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಮತ್ತೆ 6 ವಾರಗಳ ಗಡುವು ನೀಡಿದೆ.

ಸಮಿತಿ ರಚನೆ ಆದೇಶ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿ ಹಲವು ಗುತ್ತಿಗೆ ಕಂಪನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಗಡುವಿನಲ್ಲಿ ವರದಿ ನೀಡದೆ ಹೋದರೆ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿಸಲು ಆದೇಶ ನೀಡಬೇಕಾಗುತ್ತದೆಂದು ಎಚ್ಚರಿಗೆ ನೀಡಿದೆ.

Justice Nagamohan Das Committee HC Fixed 6 Week Deadline To Submit Report

ಸಮಿತಿಗೆ 45 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಲು 2023ರ ಡಿ.13ರಂದು ನಿರ್ದೇಶಿಸಿದ್ದರೂ ಈವರೆಗೂ ವಿಚಾರಣೆಯೇ ಆರಂಭವಾಗದಿರುವುದಕ್ಕೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು. ಆದರೂ ರಾಜ್ಯ ಅಡ್ವೋಕೇಟ್‌ ಜನಲರ್‌ ಕೆ. ಶಶಿಕಿರಣ್‌ ಶೆಟ್ಟಿ ಅವರ ಮನವಿ ಮೇರೆಗೆ ಮತ್ತೆ ಆರು ವಾರ ಕಾಲಾವಾಶ ನೀಡಿತು.

ಅಲ್ಲದೆ, ಮುಂದಿನ ಆರು ವಾರಗಳಲ್ಲಿ ವಿಚಾರಣಾ ಸಮಿತಿ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆವರದಿ ಸಲ್ಲಿಸಬೇಕು. ಪುನಃ ಕಾಲಾವಕಾಶ ನೀಡುವುದಿಲ್ಲ. ಇದೇ ಕೊನೆಯ ಬಾರಿಗೆ ಕಾಲಾವಕಾಶ ನೀಡಲಾಗುತ್ತಿದೆ. ಒಂದು ವೇಳೆ‌ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸದೆ ಹೋದರೆ, ಗುತ್ತಿಗೆದಾರರಿಗೆ ಶೇ.100ರಷ್ಟು ಬಿಲ್‌ ಪಾವತಿಸುವಂತೆ ಸರ್ಕಾರಕ್ಕೆ ಆದೇಶಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 2ಕ್ಕೆ ಮುಂದೂಡಿತು.

ಏಕೆ ವಿಳಂಬ ?: ಮಂಗಳವಾರ ಬೆಳಗಿನ ಕಲಾಪದಲ್ಲಿ ಅರ್ಜಿ ವಿಚಾರಣೆಗೆ ಬಂದಾಗ, ಸಮಿತಿ ವಿಚಾರಣೆ ಪೂರ್ಣಗೊಳಿಸಿದೆಯೇ? ಎಂದು ಸರ್ಕಾರವನ್ನು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರದ ಪರ ರಾಜ್ಯ ಅಡ್ವೋಕೇಟ್‌ ಜನಲರ್‌ ಹಾಜರಾಗಿ, ಸಮಿತಿ ಇನ್ನೂ ವಿಚಾರಣೆಯನ್ನೇ ಆರಂಭಿಸಿಲ್ಲ ಎಂದರು.

ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಏನು, ಇನ್ನೂ ವಿಚಾರಣೆಯೇ ಆರಂಭವಾಗಿಲ್ಲವೇ?. 45 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಹಿಂದೆಯೇ ನಿರ್ದೇಶಿಸಿತ್ತಲ್ಲವೇ? ವಿಚಾರಣೆ ಪೂರ್ಣಗೊಳಿಸಲು 45 ದಿನ ಸಾಕಾಗುವುದಿಲ್ಲವೇ? ಏಕೆ ಇನ್ನೂ ವಿಚಾರಣೆ ಆರಂಭವಾಗಿಲ್ಲ ಎಂದು ಮರು ಪ್ರಶ್ನೆ ಹಾಕಿತು.

ನ್ಯಾಯಮೂರ್ತಿಗಳು, ವಿಚಾರಣೆ ವಿಳಂಬವಾದರೆ ಗುತ್ತಿಗೆದಾರರ ಸ್ಥಿತಿ ಏನಾಗಬೇಕು?. ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲಸ ಮಾಡಲಾಗಿದೆ ಎಂಬ ಕಾರಣಕ್ಕೆ ಬಿಲ್ ಪಾವತಿ ತಡೆ ಹಿಡಿಯಲಾಗುತ್ತಿದೆಯೇ? ಅವರಿಗೆ ಯಾವಾಗ ಬಿಲ್‌ ಪಾವತಿಸುತ್ತೀರಿ?. ವಿಚಾರಣೆ ತಡೆವಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಬಿಲ್‌ ಪಾವತಿಸುವಲ್ಲಿ ವಿಳಂಬ ಮಾಡುವುದನ್ನು ಒಪ್ಪಲಾಗದು. ದಾಖಲೆಗಳನ್ನು ಸಲ್ಲಿಸಬೇಕಾಗಿರುವ ಕರ್ತವ್ಯದಲ್ಲಿ ಲೋಪ ಎಸಗಿರುವ ನೋಡಲ್ ಅಧಿಕಾರಿ ಯಾರು? ಅವರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು ಎಂದು ಹೇಳಿತು.

ಮಧ್ಯಾಹ್ನದ ಕಲಾಪದಲ್ಲಿ ಅಡ್ವೋಕೇಟ್ ಜನರಲ್‌ ಉತ್ತರಿಸಿ, ಆರೋಪ ಇರುವ ಕಾಮಗಾರಿಗಳಲ್ಲಿ ಶೇ.50ರಷ್ಟು ಮತ್ತು ಆರೋಪ ಇಲ್ಲದ ಕಾಮಗಾರಿಗಳಿಗೆ ಶೇ.75ರಷ್ಟ ಬಿಲ್‌ ಪಾವತಿಸಲಾಗಿದೆ. ಸಮಿತಿ ವಿಚಾರಣೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಕೋರಿದರು. ಅರ್ಜಿದಾರರ ಪರ ವಕೀಲರು, ಯಾವ ಗುತ್ತಿಗೆದಾರರಿಗೂ ಶೇ.75ರಷ್ಟು ಬಿಲ್‌ ಪಾವತಿಯಾಗಿಲ್ಲ ಎಂದು ತಿಳಿಸಿದರು. ಕೊನೆಗೆ ಸಮಿತಿ ವಿಚಾರಣೆ ಪೂರ್ಣಗೊಳಿಸಲು ಆರು ವಾರ ಕಾಲಾವಕಾಶ ನೀಡಿ ನ್ಯಾಯಪೀಠ ಆದೇಶಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+