ಉಪ ಲೋಕಾಯುಕ್ತ ಪದಚ್ಯುತಿಗೆ ಜೆಡಿಎಸ್ ಬೆಂಬಲವಿಲ್ಲ
ಬೆಂಗಳೂರು, ನವೆಂಬರ್ 23 : 'ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರ ಪದಚ್ಯುತಿ ಬಗ್ಗೆ ಕಾಂಗ್ರೆಸ್ ಮಂಡನೆ ಮಾಡುವ ನಿರ್ಣಯಕ್ಕೆ ನಮ್ಮ ಬೆಂಬಲವಿಲ್ಲ. ಒಂದು ವೇಳೆ ಸದನದಲ್ಲಿ ಈ ಬಗ್ಗೆ ಪ್ರಸ್ತಾಪವಾದಾಗ ಅದರ ಬಗ್ಗೆ ಚರ್ಚೆ ನಡೆಸಲಾಗುವುದು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, 'ಲೋಕಾಯುಕ್ತವನ್ನು ಹುಟ್ಟು ಹಾಕಿದ್ದು ಜನತಾದಳ ಸರ್ಕಾರ. ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ರಾವ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ'. [ಉಪ ಲೋಕಾಯುಕ್ತ ಪದಚ್ಯುತಿ?]

'ಆದ್ದರಿಂದ, ಭಾಸ್ಕರರಾವ್ ಪದಚ್ಯುತಿಗೊಂಡು ಲೋಕಾಯುಕ್ತ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂಬುದು ನಮ್ಮ ಆಕಾಂಕ್ಷೆ. ಕಾಂಗ್ರೆಸ್ ಮಂಡನೆ ಮಾಡಲು ಹೊರಟಿರುವ ಉಪ ಲೋಕಾಯುಕ್ತ ಪದಚ್ಯುತಿ ನಿರ್ಣಯಕ್ಕೆ ಜೆಡಿಎಸ್ ಪಕ್ಷ ಬೆಂಬಲ ನೀಡುವುದಿಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. [ಲೋಕಾಯುಕ್ತ ಪದಚ್ಯುತಿ ಹೇಗೆ?]
5 ದಿನಗಳ ಅಧಿವೇಶನ ಉಳಿದಿದೆ : '5 ದಿನಗಳ ಅಧಿವೇಶನ ಬಾಕಿ ಉಳಿದಿದೆ. ಈ ಅವಧಿಯಲ್ಲಿ ಕಳಸಾ-ಬಂಡೂರಿ, ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ, ಬರ ಪರಿಹಾರ ಕಾರ್ಯ, ರೈತರ ಆತ್ಮಹತ್ಯೆ ಬಗ್ಗೆ ಚರ್ಚೆ ನಡೆಯಬೇಕು. ಯಾವ ವಿಚಾರವನ್ನು ಆದ್ಯತೆ ಮೇಲೆ ಚರ್ಚಿಸಬಹುದು ಎಂದು ತೀರ್ಮಾನಿಸಲು ಸಭೆ ಕರೆಯಲಾಗಿತ್ತು' ಎಂದು ಹೇಳಿದರು.
ಉಪ ಲೋಕಾಯುಕ್ತ ಪದಚ್ಯುತಿ : ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಅವರ ಜೊತೆ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಪದಚ್ಯುತಿ ನಿರ್ಣಯವನ್ನು ಮಂಡನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ನಿರ್ಣಯಕ್ಕೆ ಬೆಂಬಲ ಕೊಡುತ್ತಿಲ್ಲ.












Click it and Unblock the Notifications