ಐರೆನ್ ಲೆಗ್ ಪಾರ್ಟಿ ಕಾಂಗ್ರೆಸ್..! ಜಾರ್ಖಂಡ್-ಮಹಾರಾಷ್ಟ್ರ ಫಲಿತಾಂಶ ಉಲ್ಲೇಖಿಸಿದ ಜೆಡಿಎಸ್
ಜೆಡಿಎಸ್ ಪಕ್ಷವು ರಾಜ್ಯ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ಪಳೆಯುಳಿಕೆ ಪಾರ್ಟಿ ಕಾಂಗ್ರೆಸ್! ನಶಿಸುತ್ತಿರುವ ಶತಮಾನಗಳ ಪಳೆಯುಳಿಕೆ ಕಾಂಗ್ರೆಸ್ ಪಕ್ಷದ ಪಕಳೆಗಳು ದೇಶಾದ್ಯಂತ ಒಂದೊಂದೇ ಉದುರುತ್ತಿವೆ. ಮಹಾರಾಷ್ಟ್ರದಲ್ಲಿ ನೆಲಕಚ್ಚಿದೆ ಎಂದು ವಾಗ್ದಾಳಿ ನಡೆಸಿದೆ. ಮಹಾರಾಷ್ಟ್ರದಲ್ಲಿ 6ನೇ ಸ್ಥಾನಕ್ಕೆ, ಜಾರ್ಖಂಡ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದೆ. ಆದರೂ ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಗೆದ್ದ ಮೂರು ಬೈಎಲೆಕ್ಷನ್ ಸೀಟುಗಳನ್ನು ಮುಖದ ಮೇಲಿಟ್ಟುಕೊಂಡು ಮೆರೆಯುತ್ತಿದೆ, ಮೆರೆಯಲಿ ಎಂದು ತಿವಿದಿದೆ.
ಮಹಾರಾಷ್ಟ್ರದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. ಕಾಂಗ್ರೆಸ್ಸಿಗರೇ, ಅನ್ಯರ ಬಗ್ಗೆ ಹಗುರವಾಗಿ ಮಾತಾನಾಡುವ ನಿಮ್ಮ ಹರಕು ಬಾಯಿಗಳಿಗೆ, ನಿಮ್ಮ ತೂತುಬಿದ್ದ ಮಡಿಕೆಯಂತಾಗಿರುವ ನಿಮ್ಮ ಪಕ್ಷಕ್ಕೆ ಮೊದಲು ತ್ಯಾಪೆ ಹಚ್ಚಿ. 288 ಸೀಟುಗಳ ಮಹಾರಾಷ್ಟ್ರದಲ್ಲಿ ಹದಿನಾರೇ ಸೀಟಿಗೆ ಬೋರಲು ಬಿದ್ದ ಸೋಕಾಲ್ಡ್ ನ್ಯಾಷನಲ್ ಪಾರ್ಟಿ ನಾಯಕರೇ, ಇನ್ನೊಬ್ಬರ ಬಚ್ಚಲು ಮನೆ ಮೂಸಿ ನೋಡುವ ಚಟ ಬಿಡಿ ಎಂದು ವಾಗ್ದಾಳಿ ನಡೆಸಿದೆ.

ಇನ್ನು ಜಾರ್ಖಂಡ್‌ನಲ್ಲಿ ಜೆಎಂಎಂ ಪರಾವಲಂಬಿಯಾಗಿ ಪರದೇಸಿ ಬಾಳ್ವೆ ಮಾಡಿಕೊಂಡು 81 ಸೀಟಿನ ಪೈಕಿ ಹದಿನಾರಕ್ಕೆ ಅಡ್ಡಡ್ಡ ಬಿದ್ದ ನಿಮ್ಮ ಪಕ್ಷಕ್ಕೆ ಅಲ್ಲಿಯೂ ಜನ ಚಟ್ಟ ಕಟ್ಟಿದ್ದಾರೆ. ಸರಳ ಲೆಕ್ಕ ಕಾಂಗ್ರೆಸ್ಸಿಗರೇ.. 288+81=369. ಇಷ್ಟರಲ್ಲಿ ಒಟ್ಟು ಎಷ್ಟು ಗೆದ್ದಿದ್ದೀರಿ? ಕೇವಲ 32 ಅಷ್ಟೇ. ಅದರಲ್ಲಿಯೂ ಮಹಾರಾಷ್ಟ್ರದಲ್ಲಿ 28 ಛೀ.. ನಿಮ್ಮ ಜನ್ಮಕ್ಕೆ.. ನಿಮಗಿಂತ ನಾವು ಕಳಪೆಯೇ? 224 ಕ್ಷೇತ್ರಗಳಲ್ಲಿ 19 ಗೆದ್ದಿದ್ದೆವು. ಅದೂ ಯಾವ ಮೈತ್ರಿಯೂ ಇಲ್ಲದೆ. ನಾವು ಪ್ರಾದೇಶಿಕ, ನೀವು ಸೋಕಾಲ್ಡ್ ನ್ಯಾಶನಲ್ ಎಂದು ವ್ಯಂಗ್ಯ ಮಾಡಿದೆ.
ಐರೆನ್ ಲೆಗ್ ಪಾರ್ಟಿ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಿದೆ. ಅದಕ್ಕೆ ಬಲಿಯಾದ ಪಕ್ಷ ಉದ್ಧವ್ ಠಾಕ್ರೆಯವರ ಶಿವಸೇನೆ. ಮೈತ್ರಿಗೆ, ಮೈತ್ರಿ ಪಕ್ಷಗಳಿಗೆ ಮಿತ್ರದ್ರೋಹ ಮಾಡುತ್ತಿರುವ ಕಾಂಗ್ರೆಸ್ ಸಂವಿಧಾನವನ್ನೇ ಅಣಕಿಸುತ್ತಿದೆ. ಅನ್ಯರ ಅಣಕವೇ ಮನೆಹಾಳು ಕಾಂಗ್ರೆಸ್ಸಿನ ಕಾಯಕ ಎಂದು ಜೆಡಿಎಸ್ ಹರಿಹಾಯ್ದಿದೆ.
ಸಾಲ ಮಾಡಿ ತುಪ್ಪು ತಿನ್ನಿಸುವುದು ಮುಂದಿನ ಆರ್ಥಿಕ ಬಿಕ್ಕಟ್ಟಿಗೆ ದಾರಿ. ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿರುವುದು ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ. ಗ್ಯಾರಂಟಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಸರ್ಕಾರ ವಿದ್ಯುತ್ ಬಿಲ್ ಕಟ್ಟಲು ದುಡ್ಡಿಲ್ಲದೇ ಪಾಪರ್ ಆಗಿದೆ ಎಂದು ಉಲ್ಲೇಖಿಸಿದೆ.

ದೂರದೃಷ್ಟಿಯ ಕೊರತೆ ದುರಂತಕ್ಕೆ ಕಾರಣವಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವೈಜ್ಞಾನಿಕ ಯೋಜನೆಗಳು ಕರ್ನಾಟಕದಲ್ಲಿಯೂ ಬೊಕ್ಕಸ ಬರಿದು ಮಾಡಿದ್ದು ಆರ್ಥಿಕ ತುರ್ತು ಪರಿಸ್ಥಿತಿಗೆ ತಳ್ಳಿದೆ. ಅಸಮರ್ಥ ಅನುಷ್ಠಾನ, ಸ್ಪಷ್ಟತೆಯ ಕೊರತೆ ಮತ್ತು ದೀರ್ಘಾವಧಿಯ ಯೋಜನೆಗಳಿಲ್ಲದಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ವೈಫಲ್ಯವನ್ನು ತೋರಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದೆ.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಪಾತಳಕ್ಕೆ ತಳ್ಳಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬಡವರಿಗೆ ಶಾಪವಾಗಿ ಪರಿಣಮಿಸಿದೆ. ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವ ಕಾರಣ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಿವೆ ಎಂದು ದೂರಿದೆ.












Click it and Unblock the Notifications