ಜೆಡಿಎಸ್ ಶಾಸಕ ರೇವಣ್ಣಗೆ ಡಿಸಿಎಂ ಸ್ಥಾನದ ಆಫರ್! ಯಾರಿಂದ ಗೊತ್ತಾ?
ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ತನಗೆ ರಾಜ್ಯದ ಉಪಮುಖ್ಯಮಂತ್ರಿ ಆಗುವ ಆಫರ್ ಬಂದಿತ್ತು ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೇವಣ್ಣ, ನಾನು ನಾಯಕರ ಮನೆಯೊಂದರಲ್ಲಿ ಇದ್ದೆ. ಆಗ ಒಬ್ಬ ನಾಯಕರು ಫೋನ್ ಮಾಡಿ ದೆಹಲಿಯಿಂದ ಐದು ಮಂದಿಯನ್ನು ಕರೆತರುತ್ತೇನೆ. ನೀವು ಉಪಮುಖ್ಯಮಂತ್ರಿಯಾಗಿ, ನಾನು ಸಿಎಂ ಆಗುತ್ತೇನೆ ಎಂದು ಆಫರ್ ಮುಂದಿಟ್ಟಿದ್ದರು ಎಂದು ಹೇಳಿದ್ದಾರೆ. ನಾವು ಅಧಿಕಾರಕ್ಕೆ ಆಸೆ ಪಟ್ಟಿದ್ದರೆ ಅವತ್ತು ಡಿಸಿಎಂ ಆಗಬಹುದಿತ್ತು ಎಂದು ರೇವಣ್ಣ ಹೇಳಿದ್ದಾರೆ. ಅಂದೇ ನಾಯಕರೊಬ್ಬರು ಡಿಸಿಎಂ ಆಫರ್ ಕೊಟ್ಟಿದ್ದರು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಆ ನಾಯಕ ಯಾರು ಎಂದು ಪ್ರಶ್ನಿಸಿದಾಗ, ಸಮಯ ಬಂದಾಗ ಅದಕ್ಕೆ ಉತ್ತರ ಕೊಡುತ್ತೇನೆ ಎಂದು ರೇವಣ್ಣ ಜಾರಿಕೊಂಡಿದ್ದಾರೆ.

ಯಾವ ಪಕ್ಷದಿಂದ ಬಂದಿತ್ತು? ಯಾವ ನಾಯಕರಿಂದ ಆ ಆಫರ್ ಬಂದಿತ್ತು? ಎಂಬುದನ್ನು ಈಗಲೇ ಹೇಳುವುದಿಲ್ಲ. ಕಾಲ ಬಂದಾಗ ನಾನೇ ಹೇಳುತ್ತೇನೆ ಎಂದಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ನಾವೇನು ಕೆಲಸ ಮಾಡಿದ್ದೇವೆ ಎಂಬುದರ ಬಗ್ಗೆ ಕುಮಾರಸ್ವಾಮಿ ಪ್ರಚಾರ ತಗೊಂಡಿಲ್ಲ. ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಪ್ರಚಾರ ತೆಗೆದುಕೊಂಡಿಲ್ಲ. ರಾಮನಗರ ಹಾಗೂ ಚಿಕ್ಕಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲಿನ ಬಗ್ಗೆ ರೇವಣ್ಣ ಮಾತನಾಡಿದ್ದಾರೆ. ಚನ್ನಪಟ್ಟಣದಲ್ಲಿ ಸೋತ ತಕ್ಷಣ ಗೊಂದಲದ ಗೂಡು ಯಾಕಾಗುತ್ತೆ? ಈಗ ಮಹಾರಾಷ್ಟ್ರ ಸೇರಿ ಕೆಲವು ಕಡೆ ಕಾಂಗ್ರೆಸ್ ಸೋತಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ಈ ಪರಿಸ್ಥಿತಿ ಬಂದಿದೆ. ಆದರೆ ನಮ್ಮದೊಂದು ಪ್ರಾದೇಶಿಕ ಪಕ್ಷ. ನೂರಾರು ಸೀಟುಗಳಿರುವ ಕಡೆ ಕಾಂಗ್ರೆಸ್ ಕೇವಲ ಎರಡಂಕಿ ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ತಮ್ಮ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿದರೂ ಗೆದ್ದಿದ್ದು ಎಷ್ಟು ಸ್ಥಾನ? ಏನೋ ಈಗ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ಭಗವಂತ ಅವರಿಗೆ ಒಳ್ಳೇದು ಮಾಡಲಿ. ಚನ್ನಪಟ್ಟಣದಲ್ಲಿ ಬಾಕಿ ಏನು ಕೆಲಸಗಳು ಉಳಿದಿದೆಯೋ ಅದನ್ನು ಮಾಡಲಿ. ಬಡವರ ಬಗ್ಗೆ ಕಾಂಗ್ರೆಸ್ ಕಾಳಜಿ ವಹಿಸಲಿ. ಮುಂದಿನ ದಿನಗಳಲ್ಲಿ ಅದೇ ಕ್ಷೇತ್ರದ ಜನ ನಮ್ಮ ಕೈಹಿಡಿಯಬಹುದು ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಖಿಲ್‌ಗೆ 85000 ಮತ ನೀಡಿದ್ದಾರೆ. ನಿಖಿಲ್ ನಮ್ರತೆಯಿಂದ ಕೆಲಸ ಮಾಡಿದ. ನಿಖಿಲ್ ಸಂಸದೀಯ ಪಟುಗಳಂತೆ ಮಾತನಾಡಿದ್ದನ್ನು ನಾನು ಗಮನಿಸಿದ್ದೇನೆ. ಜನತೆ ಆಶೀರ್ವಾದ ಮಾಡಿದರೆ ಅವನು ಮತ್ತೆ ಬರುತ್ತಾನೆ. ಈಗ ಜನತೆ ಕಾಂಗ್ರೆಸ್ ಪರವಿದ್ದಿದ್ದರಿಂದ ಅವರು ಗೆದ್ದಿದ್ದಾರೆ ಎಂದಿದ್ದಾರೆ.
ನಾನು ಚನ್ನಪಟ್ಟಣ ಚುನಾವಣೆಯಿಂದ ಅಂತರ ಕಾಯ್ದುಕೊಂಡಿರಲಿಲ್ಲ. ನಾನು ಎರಡು ತಿಂಗಳಿಂದ ನನಗೆ ಫ್ರಾಕ್ಚರ್ ಆಗಿದೆ. ದೇವಸ್ಥಾನ, ಮನೆಯಲ್ಲಿ ಬಿದ್ದು ಗಾಯಗಳಾಗಿವೆ. ನಾನು ಆ ನೋವನ್ನು ಅನುಭವಿಸುತ್ತಿದ್ದೆ. ನಾನು ಕುಮಾರಣ್ಣನ ಜೊತೆ ಮೂರು ದಿನ ಹೋಗಿದ್ದೆ. ನನಗೆ ಆರೋಗ್ಯ ಸ್ಥಿತಿ ಸರಿ ಇಲ್ಲದಿದ್ದಿದ್ದರಿಂದ ನಾನು ಹೋಗಲಿಲ್ಲ. ಮಲಗಲು ಕೂಡ ನನಗೆ ಆಗುತ್ತಿರಲಿಲ್ಲ ಎಂದು ಕಾರಣ ಬಿಚ್ಚಿಟ್ಟಿದ್ದಾರೆ.
ನಾನು ಕುಮಾರಣ್ಣ ಒಡೆದಾಡಿಕೊಂಡಿದ್ದಾರೆ ಎಂದುಕೊಂಡರೆ ತಪ್ಪು. ನಾನು ಬದುಕಿರುವವರೆಗೂ ಕುಮಾರಣ್ಣ ಏನು ಹೇಳ್ತಾರೋ ಹಾಗೇ ನಡೆದುಕೊಳ್ಳುವೆ. ಈ ವಿಚಾರದಲ್ಲಿ ನಾನು ಅಷ್ಟೇ, ನನ್ನ ಮಕ್ಕಳೂ ಅಷ್ಟೇ ಎಂದು ರೇವಣ್ಣ ಹೇಳಿದ್ದಾರೆ. ನಮಗೆ ದೇವೇಗೌಡರು, ಕುಮಾರಸ್ವಾಮಿ ಅವರೇ ನಾಯಕರು.












Click it and Unblock the Notifications