ಮೈಸೂರು: ದೇವೇಗೌಡರು ಜೆಡಿಎಸ್ ಬಿಡ್ತಾರಾ?

ಆದರೆ ಈ ದೇವೇಗೌಡರು ದೊಡ್ಡ ಗೌಡ್ರು ಯಾನೆ ಜೆಡಿಎಸ್ ಪಕ್ಷದ ಪುರಾತನ ಅಧ್ಯಕ್ಷರಾಗಿರುವ ಎಚ್ ಡಿ ದೇವೇಗೌಡರು ಅಲ್ಲ. ಬದಲಿಗೆ ಅವರದೇ ಪಕ್ಷದ ಮತ್ತೊಬ್ಬ ದೇವೇಗೌಡರು. ಅಂದರೆ ಪಕ್ಷ ಜಿಗಿಯುವ ಚಟವಿರುವ ಜಿಟಿ ದೇವೇಗೌಡರು.
ಬುಧವಾರ ನಗರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಮೈಸೂರು ತಾಲೂಕು ಮಿನಿ ವಿಧಾನಸೌಧ ಉದ್ಘಾಟನೆ ಸಹಿತ ಹಲವು ಅಭಿವೃದ್ಧಿ ಕಾರ್ಯಕ್ರಮ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ನೆರವು ವಿತರಣೆ ಸಮಾರಂಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರು.
ಹೊಗಳಿಕೆಯ ಝಲಕು ಹೀಗಿದೆ:
'ಮುಖ್ಯಮಂತ್ರಿಯಾದ ಅರ್ಧ ತಾಸಿನಲ್ಲೇ ಬಡವರ ಪರ ಕಾರ್ಯಕ್ರಮ ಜಾರಿ ಮಾಡಿದ ದಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ. 1978ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿದ್ದ ಸಿದ್ದರಾಮಯ್ಯ ಬರುತ್ತಾರೆ ಎಂದರೆ ಅಧಿಕಾರಿಗಳು ನಡುಗುತ್ತಿದ್ದರು ಎಂದು ಸಿದ್ದರಾಮಯ್ಯ ಬೆಳೆದು ಬಂದ ದಾರಿ ನೆನಪಿಸಿಕೊಂಡ ಜಿಟಿಡಿ, ಸಿದ್ರಾಮಯ್ನೋರು ದಕ್ಷ ಮುಖ್ಯಮಂತ್ರಿ, ಜನಪ್ರಿಯ ಮುಖ್ಯಮಂತ್ರಿ, ಅಧಿಕಾರಕ್ಕೆ ಬಂದ ಅರ್ಧ ತಾಸಿನಲ್ಲಿ ಅನ್ನಭಾಗ್ಯ, ಸಾಲಮನ್ನಾದಂತಹ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೀರಿ. ತಮಗೆ ಚಾಮುಂಡೇಶ್ವರಿ ದೇವಿ ಐದು ವರ್ಷ ಸಂಪೂರ್ಣ ಅಧಿಕಾರ ನಡೆಸುವಂತೆ ಕರುಣಿಸಲಿ, ಆರೋಗ್ಯ ಕೊಡಲಿ ಎಂದು ಹೃದಯ ತುಂಬಿ ಹಾರೈಸಿದರು.
ತಾವು ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದೀರಿ. ಈಗ ವರುಣಾ ಸಿಕ್ಕಿದೆ. ಆದರೆ ತಾವು ಹಿಂದಿದ್ದ ಕ್ಷೇತ್ರದ 30 ಹಳ್ಳಿಗಳು ಕುಡಿಯುವ ನೀರಿನ ಬವಣೆಯಿಂದ ಬಳಲುತ್ತಿವೆ, ಇದನ್ನು ನೀಗಿಸಿ ಎಂದು ಮನವಿ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳೆರಡು ತಮ್ಮ ಎರಡು ಕಣ್ಣಂತೆ ಭಾವಿಸಿ. ಯಾವುದೇ ಅಧಿಕಾರಿಗಳನ್ನು ತನ್ನ ಕ್ಷೇತ್ರಕ್ಕೆ ಹಾಕಿ. ಇಂಥವರು ಬೇಕೆಂದು ಲೆಟರ್ ಕೊಡುವುದಿಲ್ಲ. ಆದರೆ ಅಭಿವೃದ್ಧಿ ಕೆಲಸಗಳು ಆಗಲಿ. ಹಿಂದಿನ ಮುಖ್ಯಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಸಾವಿರಾರು ಕೋಟಿ ರೂ. ನೀಡಿದ್ದಾರೆ. ನೀವು ಕೂಡ ಮೈಸೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಮನವಿ ಮಾಡಿದರು.
ವರುಣಾ ನಾಲೆ ಅಭಿವೃದ್ಧಿಯಾಗಿಲ್ಲ, ನಾಗೇಗೌಡರ ಕಾಲದಲ್ಲಿ 300 ಕೋಟಿ ರೂ.ಅಚ್ಚುಕಟ್ಟು ಅಭಿವೃದ್ಧಿಗೆ ಬಿಡುಗಡೆ ಆದ ಬಳಿಕ ಮತ್ತೆ ಹಣ ಬಂದಿಲ್ಲ. ಬೀರಿಹುಂಡಿ, ದೊಡ್ಡಮಾರನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಲ್ಲಿ ಬರಗಾಲವಿದೆ. ಹಿಂದಿನ ಸರಕಾರದ ವಸತಿ ಫಲಾನುಭವಿಗಳಿಗೆ ಬಿಲ್ ಕೊಡಿಸಿ, ಕನಿಷ್ಠ ಎರಡು ಲೀಟರ್ ಸೀಮೆ ಎಣ್ಣೆಯನ್ನು ಬಡವರಿಗೆ ಕೊಡಿ ಎಂದು ಸಿಎಂಗೆ ಮನವಿ ಮಾಡಿದರು.
ಶಿವ ಸತ್ಯ ನುಡಿಸಿದ್ದಾನೆ:
ಜಿಟಿಡಿ ಮಾತು ಮುಗಿಸುತ್ತಿದ್ದಂತೆ ಮೈಸೂರು ಸಂಸದ ಅಡಗೂರು ಎಚ್ ವಿಶ್ವನಾಥ್ ಅವರು ಮಾತನಾಡಿ, ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಅರ್ಧ ತಾಸಿನಲ್ಲಿ ತಾವು ಯಾರ ಪರವೆಂದು ಜನರಿಗೆ ತೋರಿಸಿದ್ದಾರೆ ಎಂದು ಹೇಳಿದರು.
ಜಿಟಿಡಿ ಸಿಎಂಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಹಳ್ಳಿಕಡೆ ಮಾತೊಂದಿದೆ. ಒಮ್ಮೊಮ್ಮೆ ಶಿವ ಸತ್ಯ ನುಡಿಸುತ್ತಾನೆ ಎಂದು, ಅದೇ ರೀತಿ ಜಿಟಿಡಿ ಬೇರೆ ಪಕ್ಷದವರಾದರೂ ಸಿಎಂ ಬಗ್ಗೆ ಸತ್ಯದ ಮಾತುಗಳನ್ನಾಡಿದ್ದಾರೆ. ಹಿಂದೆ ಅವರೊಟ್ಟಿಗೆ ಕೆಲಸ ಮಾಡಿದ್ದವರೆಂದು ಹೇಳಿದರು. ಹಾಗೇಯೇ ಸಿಎಂ ಸಿದ್ದರಾಮಯ್ಯ ಕುರಿತು ತಾವು ಶಿವನಿದ್ದಂತೆ ವರ ಕೊಡುವ ಭರದಲ್ಲಿ ತಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿ ಕೊಳ್ಳುವ ವರ ಕೊಡಬೇಡಿ ಎಂದು ಜಿಟಿಡಿ ಬೇಡಿಕೆಗಳ ಕುರಿತು ಪರೋಕ್ಷ ಎಚ್ಚರಿಕೆ ನೀಡಿದ್ದು ಗಮನಾರ್ಹವಾಗಿತ್ತು.












Click it and Unblock the Notifications