ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಸರ್ಕಾರ ಬಂದರೆ ಕೆಂಪೇಗೌಡರ ಹೆಸರಲ್ಲಿ ವಿವಿ: ಕುಮಾರಸ್ವಾಮಿ ಭರವಸೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್ 10 ರಿಂದ 12 ಸ್ಥಾನ ಗಳಿಸಲೇಬೇಕಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಈ ಬಾರಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಅಧಿಕಾರಕ್ಕೆ ಬಂದರೆ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ಶಿಕ್ಷಣ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಬೆಂಗಳೂರಿನ ಬಸವನಗುಡಿಯಲ್ಲಿ ಗುರುವಾರ ಜೆಡಿಎಸ್ 'ಪಂಚರತ್ನ ರಥಯಾತ್ರೆ'ಗೆ ಚಾಲನೆ ನೀಡಿದ ಬಳಿಕ ಬಹಿರಂಗ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ. ಬಿಜೆಪಿಯವರು ಯಾವ ಸಂಕಲ್ಪ ಯಾತ್ರೆ ಆದರೂ ಮಾಡಿಕೊಳ್ಳಲಿ.‌ 2023ಕ್ಕೆ ನಮ್ಮ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದರು.

ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರುತ್ತಾರೆ. ಒಂದು ಮತಕ್ಕೆ 2000 ರೂ. ಜೊತೆಗೆ ಕುಕ್ಕರ್ ಎಂದು ಬರುತ್ತಾರೆ. ಇದೆಲ್ಲ ಹಣ ರಾಜ್ಯದ ಜನರಿಂದ ಲೂಟಿ ಮಾಡಿರುವ ಹಣವಾಗಿದೆ. ಆದರೆ ನಾವು ಯಾರು ದುಡ್ಡು ಲೂಟಿ ಹೊಡೆದಿಲ್ಲ ಎಂದು ಬಿಜೆಪಿ, ಕಾಂಗ್ರೆಸ್‌ಗೆ ಟಾಂಗ್ ನೀಡಿದರು.

ಕೆಂಪೇಗೌಡ ಕೌಶಲ್ಯ ವಿವಿ: ರೈತ ಬಂಧು ಕಾರ್ಯಕ್ರಮ

ಕೆಂಪೇಗೌಡ ಕೌಶಲ್ಯ ವಿವಿ: ರೈತ ಬಂಧು ಕಾರ್ಯಕ್ರಮ

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ, ಅದರಲ್ಲೂ ಭವಿಷ್ಯಕ್ಕೆ ದಿಕ್ಕು ತೋರಿಸುವ ಶಿಕ್ಷಣ ಕೊಡಬೇಕೆಂಬ ಉದ್ದೇಶ ಜೆಡಿಎಸ್‌ ಹೊಂದಿದೆ. ಈ ಉದ್ದೇಶ ಸಾಕಾರಕ್ಕಾಗಿ ನಾಡಪ್ರಭು ಕೆಂಪೇಗೌಡರ ಹೆಸರಲ್ಲಿ ಮಾಗಡಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಅದರಿಂದ ಎಲ್ಲರಿಗೂ ವೃತ್ತಿಪರ ಶಿಕ್ಷಣ ಸಿಗುವಂತಾಗಬೇಕು. ಕಸುಬುಗಳ ಆಧಾರದಲ್ಲಿ ಹಾಗೂ ಸಮಾಜದಲ್ಲಿ ವೃತ್ತಿಪರ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಿ ಬೆಳೆಸಿದವರು ಕೆಂಪೇಗೌಡರು. ಹೀಗಾಗಿ ಅವರ ಹೆಸರಿನಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ರೈತರಿಗಾಗಿಯೂ ಕಾರ್ಯಕ್ರಮ ರೂಪಸಿದ್ದು, ಈ ವರ್ಷ ಭತ್ತದ ಬೆಳೆ ಕಡಿಮೆ ಉತ್ಪಾದನೆ ಆಗಿದೆ. ರೈತರಿಗೆ ಬಿತ್ತನೆಗೆ ಸರ್ಕಾರದಿಂದಲೇ ಸಹಾಯ ಆಗಬೇಕು. ರೈತ ಚೈತನ್ಯ ಕಾರ್ಯಕ್ರಮದಲ್ಲಿ ಅವರಿಗೆ ಅನುಕೂಲ ಆಗುವಂತೆ ಮಾಡಲಾಗಿದೆ. ರೈತ ಬಂಧು ಕಾರ್ಯಕ್ರಮ ತೆಲಂಗಾಣದಲ್ಲಿ ಇದೆ‌‌. ಅದೇ ರೀತಿ ನಮ್ಮ ರಾಜ್ಯದಲ್ಲೂ ಜೆಡಿಎಸ್‍ ಅಧಿಕಾರಕ್ಕೆ ಬಂದರೆ ಮಾಡುತ್ತೇನೆ ಎಂದು ಹೇಳಿದರು.

ಎಲ್ಲರಿಗೂ ಸಮಾನವಾಗಿ ಶಿಕ್ಷಣ ದೊರೆಯಬೇಕು

ಎಲ್ಲರಿಗೂ ಸಮಾನವಾಗಿ ಶಿಕ್ಷಣ ದೊರೆಯಬೇಕು

ಕಾಂಗ್ರೆಸ್‌ನವರಿಂದ ಜನರ ಯಾವ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ಆಗುವುದಿಲ್ಲ. ಇಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗಿದೆ. ಪವಿತ್ರ ದಿನ ಅಂತ ಇಂದು 'ಪಂಚರತ್ನ ರಥಯಾತ್ರೆ'ಗೆ ಚಾಲನೆ ಕೊಡಲಾಗಿದೆ. ಪಂಚರತ್ನ ಕಾರ್ಯಕ್ರಮ ಮಹತ್ವದ ಕಾರ್ಯಕ್ರಮ ಎಂದರು.

ಬಡವ, ಶ್ರೀಮಂತ ಅಂತ ತಾರತಮ್ಯ ಎನ್ನದೆ ಎಲ್ಲರಿಗೂ ಅತ್ಯಾಧುನಿಕ ಶಿಕ್ಷಣ ದೊರೆಯಬೇಕು. ಗ್ರಾಮ ಪಂಚಾಯತಿ, ಪ್ರತಿ ವಾರ್ಡ್ ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಸರ್ಕಾರ ಗುಣಮಟ್ಟದ ಶಿಕ್ಷಣ ಕೊಡಬೇಕು. ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಇದಾಗಿದೆ. ಕೊರೊನಾ ಸಮಯದಲ್ಲಿ ಶಾಲೆ ನಡೆಯದೇ ಇದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯವರು ಫೀಸ್ ಕಟ್ಟಲೇ ಬೇಕು ಅಂತ ಒತ್ತಡ ಹಾಕಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಕಾರ್ಯಕ್ರಮ ರೂಪಿಸಲಾಗಿದೆ. ಅತ್ಯುತ್ತಮ ಶಿಕ್ಷಣ ನೀಡಲು ಈ ಯೋಜನೆ ರೂಪಿಸಲಾಗಿದೆ. ಮಕ್ಕಳಿಗೆ ಇಂಗ್ಲಿಷ್ ಕೂಡ ಅನಿವಾರ್ಯ ಎಂದು ಹೇಳಿದರು.

6000 ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯವಸ್ಥಿತ ಆಸ್ಪತ್ರೆ

6000 ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯವಸ್ಥಿತ ಆಸ್ಪತ್ರೆ

ಆರೋಗ್ಯ ವಿಚಾರವಾಗಿ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಬೇಕು. ಕಾನ್ಸರ್, ಡಯಾಲಿಸಿಸ್ ಗೆ ಲಕ್ಷಾಂತರ ಹಣ ಕಟ್ಟಬೇಕು. ಕೊರೊನಾ ಸಮಯದಲ್ಲಿ ಎಷ್ಟು ಸಾವು ನೋವು ಆಗಿರೋದನ್ನು ನೋಡಿದ್ದೇವೆ. 6000 ಗ್ರಾಮ ಪಂಚಾಯತಿಯಲ್ಲಿ ದೊಡ್ಡ ಆಸ್ಪತ್ರೆ ಕಟ್ಟಬೇಕು. ಪ್ರತಿ ಆಸ್ಪತ್ರೆಯಲ್ಲಿ ವೈದ್ಯರು, ಲ್ಯಾಬ್ ಹೀಗೆ ಎಲ್ಲವೂ ಇರಬೇಕು. ಖಾಸಗಿ ಆಸ್ಪತ್ರೆಯಲ್ಲಿ ಹೊರಗಡೆ ಹೋಗಿ ಎಕ್ಸರೇ ತೆಗೆಸಿ ಅಂತಾರೆ. ಇದು ಬಡವರಿಗೆ ಸಾಧ್ಯವಿಲ್ಲ. ಆರೋಗ್ಯದ ವಿಮೆ ಸರ್ಕಾರವೇ ಮಾಡಬೇಕು.‌ ಗ್ರಾಮ ಮಟ್ಟದಲ್ಲಿ ಹೆರಿಗೆಗೆ ತಕ್ಷಣಕ್ಕೆ ಬೇಕಾದ ಸೌಲಭ್ಯ ದೊರೆಯಬೇಕು ಎಂದು ಭವಿಷ್ಯದ ಯೋಜನೆಗಳ ಕುರಿತು ತಿಳಿಸಿದರು.

ನಿರುದ್ಯೋಗ ನಿವಾರಣೆಗೆ ಜಿಲ್ಲಾಮಟ್ಟದಲ್ಲಿ ಯೋಜನೆ

ನಿರುದ್ಯೋಗ ನಿವಾರಣೆಗೆ ಜಿಲ್ಲಾಮಟ್ಟದಲ್ಲಿ ಯೋಜನೆ

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ನೀಡುವ ಯೋಜನೆ ರೂಪಿಸಿದ್ದೆ. ಆದರೆ ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿತು. 30,000 ಕೋಟಿ ರೂ. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಗದಿತ ವರ್ಗದ ಜನರಿಗೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಹೀಗಿದ್ದರು ಒಬ್ಬ ಮಹಿಳೆ ಬಂದು ಪಾನಿಪೂರಿ ಅಂಗಡಿ ಹಾಕಲು ಆರ್ಥಿಕ ಸಹಾಯ ಕೇಳಿದರು. ಆಕೆ ದಲಿತ ಸಮಾಜದ ಹೆಣ್ಣು ಮಗಳು.‌ ಅವರಿಗೆ ನಾನು ವೈಯಕ್ತಿಕವಾಗಿ ಹತ್ತು ಸಾವಿರ ಕೊಟ್ಟಿದ್ದೇನೆ. ಆದರೆ ಅವರಿಗೆ ಒಟ್ಟು 80 ಸಾವಿರ ಬೇಕಿತ್ತು. ಹೀಗಾಗಿ ನಾನು ಅಂಬೇಡ್ಕರ್ ನಿಗಮಕ್ಕೆ ಪತ್ರ ಬರೆದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ.

ಮನೆ ಇಲ್ಲದವರಿಗೆ ಮನೆ ಕಟ್ಟುವ ಕಾರ್ಯಕ್ರಮ ಹಾಕಿಕೊಂಡಿದ್ದೆ. ಆದರೆ ನಾನು ಬೇರೆಯವರ ಹಂಗಿನಲ್ಲಿದ್ದ ಪರಿಣಾಮ ಯೋಜನೆ ಸಾಕಾರವಾಗಲಿಲ್ಲ. ನಾನು ಮಾಡಿದ ಯೋಜನೆಯನ್ನು ಮುಂದೆ ಬಂದ ಸರ್ಕಾರಗಳು ಗಾಳಿಗೆ ತೂರಿದವು. ನನ್ನ ಮುಂದಿನ ಯೋಜನೆಯಲ್ಲಿ ಮಹಿಳೆಯರು ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶವಿದೆ ಎಂದು ಮೈತ್ರಿ ಸರ್ಕಾರದ ದಿನಗಳನ್ನು ಸ್ಮರಿಸಿದರು.

ಬಿಜೆಪಿ ಸರ್ಕಾರ ಏನು ಮಾಡಿದ್ದಾರೆ. ಕೆಂಪೇಗೌಡರ ಹೆಸರಿನಲ್ಲಿ ಪ್ರವಾಸ ತಾಣ ಮಾಡಲು ಹೊರಟಿದ್ದಾರೆ. ಆಂಧ್ರಪ್ರದೇಶದಲ್ಲಿ ಅಮರಾವತಿ ಕಟ್ಟುತ್ತೇವೆ ಅಂತ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಣ್ಣು ತೆಗೆದುಕೊಂಡು ಬಂದರು ಎಂದು ವ್ಯಂಗ್ಯವಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್‍ ಮುಖಂಡ ಬಾಗೇಗೌಡ, ಅರಮನೆ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

English summary
JDS government come to power, we will established Kempe Gowda skill University, HD Kumaraswamy said after launches JDS Pancharatna Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X