ರಾಜ್ಯಸಭೆ ಸ್ಥಾನದಿಂದ ನಾಸಿರ್ ಹುಸೇನ್ ವಜಾಕ್ಕೆ ಆಗ್ರಹ: ಜೆಡಿಎಸ್ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 28: ಆರೂವರೆ ಕೋಟಿ ಕನ್ನಡಿಗರ ಹೃದಯವಾದ ವಿಧಾನಸೌಧದಲ್ಲಿ ದೇಶದ್ರೋಹದ ಘೋಷಣೆ ಕೂಗಿರುವ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.
ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾದ ಸೈಯ್ಯದ್ ನಾಸಿರ್ ಹುಸೇನ್ ಅವರ ಬೆಂಬಲಿಗರು ದೇಶ ವಿರೋಧಿ ಘೋಷಣೆ ಕೂಗಿರುವ ಆರೋಪದ ಕುರಿತು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು, ಘೋಷಣೆ ಕೂಗುವ ಕಿಡಿಗೇಡಿಗಳು ಹಾಗೂ ಅವರನ್ನು ವಿಧಾನಸೌಧಕ್ಕೆ ಕರೆತಂದಿದ್ದ ನಾಸಿರ್ ಹುಸೇನ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ ಅವರು, ರಾಜ್ಯಸಭೆ ಸ್ಥಾನದಿಂದ ನಾಸಿರ್ ಹುಸೇನ್ ಅವರನ್ನು ವಜಾ ಮಾಡಬೇಕು ಹಾಗೂ ದೇಶದ್ರೋಹದ ಘೋಷಣೆಗಳನ್ನು ಕೂಗಿದ ದ್ರೋಹಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸರಕಾರವನ್ನು ಒತ್ತಾಯ ಮಾಡಿದರು.
ಕಾಂಗ್ರೆಸ್ ಸರ್ಕಾರ ಇಂಥ ಕಿಡಿಗೇಡಿಗಳು, ದ್ರೋಹಿಗಳನ್ನು ವ್ಯವಸ್ಥಿತವಾಗಿ ಪೋಷಣೆ ಮಾಡುತ್ತಿದೆ ಎಂದು ನೇರ ಆರೋಪ ಮಾಡಿದ ಅವರು; ಈವರೆಗೂ ಸರಕಾರ ಇಂಥ ದೇಶದ್ರೋಹಿ ಕೃತ್ಯವನ್ನು ಖಂಡಿಸಿಲ್ಲ. ಬದಲಿಗೆ ಆ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಕ್ಷಣವೇ ದೇಶದ್ರೋಹದ ಘೋಷಣೆಯನ್ನು ಖಂಡಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಆ ಪಕ್ಷದ ಮುಖಂಡರೂ ಖಂಡಿಸುವ ಮಾತಿರಲಿ, ಅವರನ್ನೇ ಸಮರ್ಥನೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪ ಮಾಡಿದರು. ಇನ್ನೂ ರಾಹುಲ್ ಗಾಂಧಿ ಅವರು ಭರತ್ ಜೋಡೋ, ಭಾರತ್ ನ್ಯಾಯ ಯತ್ರೆಗಳನ್ನು ಮಾಡುತ್ತಿದ್ದರೆ, ಅವರದೇ ಪಕ್ಷದ ನಾಯಕರು, ಕಾರ್ಯಕರ್ತರು, ಬೆಂಬಲಿಗರು ದೇಶವನ್ನು ಒಡೆಯುವ ಮಾತನಾಡುತ್ತಿದ್ದಾರೆ ಎಂದು ಅವರು ದೂರಿದರು.
ನಗರ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಜಿ.ಟಿ.ರೇವಣ್ಣ, ಪರಿಶಿಷ್ಟ ವಿಭಾಗದ ವೇಲು, ಯುವ ಘಟಕದ ಯುವ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮಾದೇಗೌಡ ಹಾಗೂ ಮತ್ತು ಎಲ್ಲಾ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಜಿ.ಟಿ.ರೇವಣ್ಣ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಫ್ರೋಜ್ ಬೇಗ್, ಸೈಯದ್ ತಾಸಿನ್, ಕಾರ್ಮಿಕ ಘಟಕದ ಅಧ್ಯಕ್ಷ ಗೋಪಾಲಗೌಡ, ಹಿರಿಯ ಉಪಾಧ್ಯಕ್ಷ ಎಂ. ನಾಗರಾಜು, ಯುವ ಜನತಾದಳದ ನಗರ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್, ಐ.ಟಿ. ಘಟಕದ ಅಧ್ಯಕ್ಷ ಫಣಿರಾಜ್, ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಪ್ರಶಾಂತಿ, ತುಳಸಿರಾಮ್, ಮಾದೇಗೌಡ ಸೇರಿದಂತೆ ಬೆಂಗಳೂರು ವಿವಿಧ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.












Click it and Unblock the Notifications