ಒಕ್ಕಲಿಗ-ದಲಿತ ಜಾತಿ ಸಮೀಕರಣ : ದೇವೇಗೌಡರ ಚಾಣಾಕ್ಷ ನಡೆ!

By: ಕಿಕು
Subscribe to Oneindia Kannada
   ಮುಂಬರುವ ಚುನಾವಣೇಲಿ ಸಿದ್ದುನ ಸೋಲಿಸಲು ಎಚ್ ಡಿ ದೇವೇಗೌಡ್ರ ಹೊಸ ಲೆಕ್ಕಾಚಾರ | Oneindia Kannada

   ಬೆಂಗಳೂರು, ಫೆಬ್ರವರಿ 11 : ಇಡೀ ದೇಶದ ಜನತೆಯ ಚಿತ್ತ 2018ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ಹರಿದಿದೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದ ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

   ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕವನ್ನು ಉಳಿಸಿಕೊಳ್ಳುವ ಹಪಹಪಿಗೆ ಬಿದ್ದಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಕಳೆದ ವರ್ಷ ಪಂಜಾಬ್ ಹಾಗೂ ಗೋವಾದಲ್ಲಿ ಪಕ್ಷ ಸೋಲು ಕಂಡಿದೆ.

   ವರುಣಾದಲ್ಲಿ ಯತೀಂದ್ರ ಅವರ ಗೆಲುವು ಸುಲಭವೇ?

   ಕಳೆದ ವಾರ ಮುಕ್ತಾಯಗೊಂಡ ರಾಜಸ್ಥಾನ ಉಪ ಚುನಾವಣೆಗಳಲ್ಲಿ ಸೋತಿರುವ ಬಿಜೆಪಿ, 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿ ಪರೀಕ್ಷೆಯಂತಿರುವ ಕರ್ನಾಟಕ ವಿಧಾನಸಭೆಯ ಚುನಾವಣೆಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡಿದೆ.

   5 ಜಿಲ್ಲೆಗಳಲ್ಲಿ ಒಬಿಸಿ ಸಮಾವೇಶ ನಡೆಸಲಿದೆ ಜೆಡಿಎಸ್‌

   ಬಿಜೆಪಿ ಸೋತರೆ ದೇಶದ ಎಲ್ಲ ವಿರೋಧ ಪಕ್ಷಗಳಿಗೆ ಹೋರಾಟದ ಶಕ್ತಿ ತಾವೇ ತುಂಬಿಕೊಟ್ಟಂತಾಗುತ್ತದೆ. ವಾಸ್ತವದಲ್ಲಿ ಬಿಜೆಪಿಗೆ ತಾನು ಗೆಲ್ಲದಿದ್ದರೂ, ಕಾಂಗ್ರೆಸ್ ಸೋಲಿಸಿ, ರಾಜ್ಯವನ್ನು ಕಾಂಗ್ರೆಸ್ ಮುಕ್ತವಾಗಿಸಿ, ಜೆಡಿಎಸ್ ಜೊತೆ ಕೈ ಜೋಡಿಸಿ ಸರ್ಕಾರದ ಭಾಗವಾದರೂ ಸಾಕು ಎಂಬಂತಿದೆ. ಇನ್ನು ಜೆಡಿಎಸ್ ವಿಚಾರಕ್ಕೆ ಬರುವುದಾದರೆ, ಹತ್ತು ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಿಂದ ದೂರ ಉಳಿದಿರುವ ಕುಮಾರಸ್ವಾಮಿಗೆ ಇದು ಗೆಲ್ಲಲೇಬೇಕಾದ ಚುನಾವಣೆ....

   ಆನೆ-ತೆನೆಹೊತ್ತ ಮಹಿಳೆ ದೋಸ್ತಿ: ಎಲ್ಲೆಲ್ಲಿ ಬಿಎಸ್ಪಿ ಸ್ಪರ್ಧೆ?

   ಮೈತ್ರಿ ಲೆಕ್ಕಾಚಾರ

   ಮೈತ್ರಿ ಲೆಕ್ಕಾಚಾರ

   2018ರ ಚುನಾವಣೆ ಘೋಷಣೆ ಮೊದಲೇ ಚುನಾವಣಾ ಪೂರ್ವ ಮೈತ್ರಿಯ ಘೋಷಣೆ ಆಗಿದೆ. ಮಾಜಿ ಪ್ರಧಾನಿ ದೇವೇಗೌಡರ ಜಾತ್ಯತೀತ ಜನತಾದಳ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯವತಿಯವರ ಬಹುಜನ ಸಮಾಜ ಪಕ್ಷದೊಂದಿಗಿನ ಸೀಟು ಹಂಚಿಕೆಯ ಹೊಂದಾಣಿಕೆ. ಈಗಾಗಲೇ ಘೋಷಿಸಿರುವಂತೆ 20 ಕ್ಷೇತ್ರಗಳಲ್ಲಿ ಬಿಎಸ್ಪಿ ಹಾಗು ಇನ್ನುಳಿದ 204 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ದಿಸಲಿದೆ.

   ಬಿಎಸ್‌ಪಿಗೆ ಅಸ್ತಿತ್ವವಿಲ್ಲ

   ಬಿಎಸ್‌ಪಿಗೆ ಅಸ್ತಿತ್ವವಿಲ್ಲ

   ಮೇಲ್ನೋಟಕ್ಕೆ ಮಾಯಾವತಿ ಅವರಿಗಾಗಲೇ, ಬಿಎಸ್ಪಿಗಾಗಲೀ ಕರ್ನಾಟಕದಲ್ಲಿ ಅಸ್ತಿತ್ವವಿಲ್ಲ.ಕಳೆದ ಚುನಾವಣೆಯಲ್ಲಿ ಸ್ವತಂತ್ರವಾಗಿ 175 ಕ್ಷೇತ್ರಗಳಲ್ಲಿ ಸ್ಪರ್ದಿಸಿದ್ದ ಬಿಎಸ್ಪಿ ಶೇಕಡಾ 1.16 ರಷ್ಟು ಮತಗಳನ್ನು ಪಡೆದಿತ್ತು. ನಿಖರವಾಗಿ ಹೇಳುವುದಾದರೆ, ಯಾವುದೇ ಪ್ರಚಾರ ಹಾಗು ಚುನಾವಣಾ ಖರ್ಚು ವೆಚ್ಚಗಳಿಲ್ಲದೇ 284768 ಮತಗಳನ್ನು ಪಡೆಯುವಲ್ಲಿ ಯಶಸ್ಸು ಕಂಡಿತ್ತು.

   ದಲಿತ ಓಟಿನ ಲೆಕ್ಕಾಚಾರ

   ದಲಿತ ಓಟಿನ ಲೆಕ್ಕಾಚಾರ

   ಕರ್ನಾಟಕ ರಾಜಕಾರಣದ ಮಟ್ಟಿಗೆ ದಲಿತ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಶೇಕಡಾ 22 ರಷ್ಟಿರುವ ಪರಿಶಿಷ್ಟ ಜಾತಿ ಹಾಗು ಪಂಗಡದ ಮತದಾರರು ತಮ್ಮ ಅಭ್ಯುದಯಕ್ಕಾಗಿ ದುಡಿಯುವ ಪಕ್ಷ, ಗೆಲ್ಲುವ ಸ್ಥಿತಿಯಲ್ಲಿಲ್ಲದ ಕಾರಣದಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. 2013ರ ಚುನಾವಣೆಯಲ್ಲಿ ಬಿಎಸ್ಪಿ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಸರಾಸರಿ 2000 ದಷ್ಟು ಮತಗಳನ್ನು ಪಡೆದಿತ್ತು.

   ಎನ್.ಮಹೇಶ್ 2ನೇ ಸ್ಥಾನ

   ಎನ್.ಮಹೇಶ್ 2ನೇ ಸ್ಥಾನ

   ಕೊಳ್ಳೇಗಾಲದಲ್ಲಿ ಬಿಎಸ್ಪಿ ಯಿಂದ ಸ್ಪರ್ಧಿಸಿದ್ದ ಎನ್.ಮಹೇಶ್ ಕಾಂಗ್ರೆಸ್‌ನ ಎಸ್.ಜಯಣ್ಣ ವಿರುದ್ಧ 37,209 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಹಾಗೆಯೇ ಎಚ್.ಡಿ.ಕೋಟೆಯ ಚಿಕ್ಕಣ್ಣ, 18210 ಮತಗಳನ್ನು, ಬೀದರ್ ದಕ್ಷಿಣದಲ್ಲಿ ಅಬ್ದುಲ್ ಮೆನನ್ 16015 ಮತಗಳನ್ನು, ಚಾಮರಾಜನಗರದ ನಂಜುಂಡಸ್ವಾಮಿ 9278 ಮತಗಳನ್ನು ಪಡೆದ ಪ್ರಮುಖರು.

   ಹೀಗೆಯೇ ಬಿಎಸ್ಪಿ ಇನ್ನೂ ಸುಮಾರು 8-10 ವಿಧಾನಸಭಾ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಮತಗಳನ್ನು ಪಡೆದು ಪ್ರಬಲ ಸ್ಪರ್ಧೆ ಒಡ್ಡಿ ಅನೇಕ ಕ್ಷೇತ್ರಗಳಲ್ಲಿ ಫಲಿತಾಂಶ ಏರುಪೇರಿಗೆ ಕಾರಣವಾಯಿತು. 2013ರ ಕ್ಷೇತ್ರವಾರು ಮತಗಳ ವಿಶ್ಲೇಷಣೆಯಲ್ಲಿ ಕಾಣಸಿಗುವ ವಿಚಾರವೆಂದರೆ, ಜೆಡಿಎಸ್ ಸುಮಾರು 16 ಕ್ಷೇತ್ರಗಳಲ್ಲಿ 323 ಮತಗಳಿಂದ 5000 ಮತಗಳ ಅಂತರದಿಂದ ಹಾಗು 11 ಕ್ಷೇತ್ರಗಳಲ್ಲಿ 10000 ಮತಗಳ ಅಂತರದಿಂದ ಸೋಲುಕಂಡಿತ್ತು.

   ಜೆಡಿಎಸ್‌ಗೆ ಲಾಭವೇನು?

   ಜೆಡಿಎಸ್‌ಗೆ ಲಾಭವೇನು?

   ಕೇವಲ ಅಂಕಿ-ಅಂಶಗಳ ಲೆಕ್ಕಾಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಒಕ್ಕಲಿಗ-ದಲಿತ ಜಾತಿ ಸಮೀಕರಣ ಜೆಡಿಎಸ್ ಗೆ ಲಾಭವಾಗುವುದರಲ್ಲಿ ಅನುಮಾನವಿಲ್ಲ. ಆದರೆ, ಅದು ಸುಲಭದ ಭೇಟೆಯಲ್ಲ. ಹಾಗೆಂದ ಮಾತ್ರಕ್ಕೆ ದಕ್ಕುವುದಿಲ್ಲವೆಂದಲ್ಲ. ಇಂತಹ ಇಳಿವಯಸ್ಸಿನಲ್ಲಿಯೂ ವಾರದಲ್ಲಿ ಎರಡೆರಡು ಬಾರಿ ದೆಹಲಿಗೆ ತೆರಳಿ ಇಂತಹ ಮೈತ್ರಿಗೆ ಅಂಕಿತ ಹಾಕಿ ಬಂದರು ದೊಡ್ಡಗೌಡರು. ಸರಿಯಾದ ಕಾರ್ಯತಂತ್ರ ಹೆಣೆದು, ಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟು, ಮಾಯಾವತಿಯವರ ಖ್ಯಾತಿಯನ್ನು ಆಯಕಟ್ಟಿನ ಕ್ಷೇತ್ರಗಳ ಪ್ರಚಾರದಲ್ಲಿ ಬಳಸಿಕೊಂಡರೆ 25 ಹೆಚ್ಚು ಕ್ಷೇತ್ರಗಳನ್ನು ಜೆಡಿಎಸ್ ಹೆಚ್ಚಿಸಿಕೊಳ್ಳಬಹುದು.

   ಬಿಎಸ್‌ಪಿಗೆ ಲಾಭವೇನು?

   ಬಿಎಸ್‌ಪಿಗೆ ಲಾಭವೇನು?

   ಬಿಎಸ್ಪಿ ಪಕ್ಷದ ಹುರಿಯಾಳುಗಳು ಗೆಲ್ಲುವ ಸಾಧ್ಯತೆಗಳೇ ಇಲ್ಲದಿರುವಾಗಲೂ ಇಂತಿಷ್ಟು ಮತಗಳು ಪಡೆಯುತ್ತಿರುವ ಪಕ್ಷಕ್ಕೆ, ತಮ್ಮ ಪಕ್ಷ (ಬಿಎಸ್ಪಿ) ಅಧಿಕಾರಕ್ಕೆ ಬರುವ ಸಾಧ್ಯತೆಗಳು (ಜೆಡಿಎಸ್ ಜೊತೆಗೂಡಿ) ಗೋಚರಿಸುವಾಗ ಹೆಚ್ಚು ಮತಗಳು ಕ್ರೊಢೀಕರಣವಾಗುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ಪೂರಕವೆಂಬಂತೆ ಕೆಲ ವರ್ಷಗಳಿಂದ ಕಾಂಗ್ರೆಸ್ ನಲ್ಲೆದ್ದಿರುವ ದಲಿತ ಮುಖ್ಯಮಂತ್ರಿಯ ಕೂಗು, ಎಡಗೈ - ಬಲಗೈ ಗುಂಪುಗಳಲ್ಲಿನ ಅಸಮಾಧಾನಗಳು ಹಾಗು ಬಿಜೆಪಿಗೆ ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದಾಗಿಯೂ ಹೆಚ್ಚೇನು ಅನುಕೂಲವಾಗದ ಪರಿಸ್ಥಿತಿ ಹಾಗು ಬಿಜೆಪಿಯ ದಲಿತರಲ್ಲಿ ರಾಜ್ಯಮಟ್ಟದ ನಾಯಕರಿಲ್ಲದಿರುವುದೂ, ಜೆಡಿಎಸ್ ಗೆ ವರವಾಗಬಹುದು.

   ಸಿದ್ದರಾಮಯ್ಯ, ಯತೀಂದ್ರರಿಗೂ ಸೋಲಾಗಬಹುದು

   ಸಿದ್ದರಾಮಯ್ಯ, ಯತೀಂದ್ರರಿಗೂ ಸೋಲಾಗಬಹುದು

   ಒಕ್ಕಲಿಗ-ದಲಿತ ಸಮುದಾಯಗಳ ಜಾತಿ ಸಮೀಕರಣವಾದರೆ, ಸ್ವತಃ ಸಿಎಂ ಸಿದ್ದರಾಮಯ್ಯನವರಿಗೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಾಗಬಹುದು. ಈಗಾಗಲೇ ಇಂತಹ ಲೆಕ್ಕಾಚಾರಗಳು ಕಾಂಗ್ರೆಸ್‌ನ ಪಡೆಸಾಲೆಯಲ್ಲಿ ನಡೆಯುತ್ತಿವೆ ಎಂಬ ಸುದ್ದಿಯಾಗಿದೆ. ಒಕ್ಕಲಿಗ ಪ್ರಾಬಲ್ಯವಿರುವ ಚಾಮುಂಡೇಶ್ವರಿಯಲ್ಲಿ ಶೇಕಡಾ 10 ರಿಂದ 20 ರಷ್ಟು ದಲಿತ ಮತಗಳು ಜೆಡಿಎಸ್ ಪರವಾದರೂ, ತಮ್ಮ ಹಳೆಯ ಸ್ನೇಹಿತ ಜಿ.ಟಿ.ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಪರಾಭವಗೊಳ್ಳಬಹುದು. ಕಳೆದ ನವೆಂಬರ್ ತಿಂಗಳಲ್ಲೇ ಕುಮಾರಪರ್ವ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಎದುರಿಗೆ ರಣಕಹಳೆ ಊದಿರುವ ಜಿ.ಟಿ.ಡಿ., ಬಿಎಸ್ಪಿ ಯೊಂದಿಗಿನ ಮೈತ್ರಿಯಿಂದ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಂತಿದೆ.

   ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ

   ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ

   ಹಾಗೆಯೇ ವರುಣಾದಲ್ಲಿ ಒಂದಷ್ಟು ದಲಿತ ಸಮುದಾಯದ ಮತಗಳು ಜೆಡಿಎಸ್ ಗೆ ವರ್ಗವಾದರೆ, ಡಾ.ಯತೀಂದ್ರ ಹಾಗು ಕಾಪು ಸಿದ್ದಲಿಂಗ ಸ್ವಾಮಿ ನಡುವಿನ ಹೋರಾಟ ಮತ್ತಷ್ಟು ರಂಗೇರಲಿದೆ. ಇದೆಲ್ಲದರ ಲೆಕ್ಕಾಚಾರದಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾದಿಂದ ಚಾಮುಂಡೇಶ್ವರಿಗೆ ಕ್ಷೇತ್ರ ಬದಲಾವಣೆಯ ಸಾಹಸಕ್ಕೆ ಕೈ ಹಾಕದೆ ಇರವು ಸಾಧ್ಯತೆಯೇ ಹೆಚ್ಚಿದೆ.

   ಮಾಯಾವತಿ ಮೈತ್ರಿಗೆ ಒಪ್ಪಿದ್ದು ಏಕೆ?

   ಮಾಯಾವತಿ ಮೈತ್ರಿಗೆ ಒಪ್ಪಿದ್ದು ಏಕೆ?

   ಕಳೆದ 20 ವರ್ಷಗಳಿಂದ ಚುನಾವಣಾ ಪೂರ್ವ ಮೈತ್ರಿಗೆ ಒಲ್ಲೆ ಎನ್ನುತ್ತಿದ್ದ ಮಾಯಾವತಿ, ದೇವೇಗೌಡರ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿರುವುದು ಆಶ್ಚರ್ಯ ಹಾಗು 2019ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಕುಗಳ ಕುತೂಹಲಗಳನ್ನು ಹುಟ್ಟುಹಾಕಿದೆ. ನಾಲ್ಕು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಬ್ರಾಹ್ಮಣ, ದಲಿತ ಜಾತಿಯ ವಿಶೇಷ ಸಮೀಕರಣದಲ್ಲಿ ಯಶಸ್ಸು ಕಂಡಿದ್ದ ಮಾಯಾವತಿ, ಜೆಡಿಎಸ್ ಜೊತೆಗಿನ ಮೈತ್ರಿ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಚಿಂತನೆಗಳಿಗೆ ನಾಂದಿ ಹಾಡಿದಂತೆ ಕಾಣುತ್ತಿದೆ.

   ಸಿಪಿಐ, ಸಿಪಿಎಂ ಜೊತೆಗೂ ಮಾತುಕತೆ

   ಸಿಪಿಐ, ಸಿಪಿಎಂ ಜೊತೆಗೂ ಮಾತುಕತೆ

   2018ರ ಕರ್ನಾಟಕ ಚುನಾವಣೆಗೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಯೇತರರ ಜೊತೆಗೆ ಕೈಜೋಡಿಸಿ, ಸರ್ಕಾರ ರಚಿಸುವಷ್ಟು ಕ್ಷೇತ್ರಗಳಲ್ಲಿ ಗೆಲ್ಲುವ ಇರಾದೆಯೊಂದಿಗೆ ಸಿಪಿಐ ಹಾಗು ಸಿಪಿಎಂ ಜೊತೆಗೂ ಚುನಾವಣಾ ಪೂರ್ವ ಹೊಂದಾಣಿಕೆಗಾಗಿ ಮಾತುಕತೆಗೆ ಮುಂದಾಗಿದೆ. ಇದೂ ಸಫಲವಾದಲ್ಲಿ ಜೆಡಿಎಸ್ ಮತ್ತಷ್ಟು ಬಲವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Janata Dal-Secular (JD-S) and the Bahujan Samaj Party (BSP) announced an alliance for the upcoming Karnataka Assembly elections 2018. How it will impact on elections?.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ