ಲೋಕಸಭೆ ಚುನಾವಣೆ : ಜಯದೇವ ಮಾಜಿ ನಿರ್ದೇಶಕ ಡಾ ಮಂಜುನಾಥ್ ಚುನಾವಣಾ ಕಣಕ್ಕಿಳಿಸಲು ಪ್ಲಾನ್?- ಈ ಕ್ಷೇತ್ರದಿಂದ ಸ್ಪರ್ಧೆ ?
ಬೆಂಗಳೂರು, ಫೆಬ್ರವರಿ 6: ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರ ಅಧಿಕಾರವಧಿ ಜನವರಿ 30ರಂದ ಕೊನೆಗೊಂಡಿತ್ತು. ಅವರನ್ನು ಸಂಸ್ಥೆಯಿಂದ ಗೌರವ ಪೂರ್ವಕವಾಗಿ ಬೀಳ್ಕೊಡಲಾಗಿತ್ತು.ಆದರೆ, ಇದೀಗ ಲೋಕಸಭಾ ಚುಣಾವಣೆಯಲ್ಲಿ ಡಾ. ಮಂಜುನಾಥ್ ಅವರನ್ನ ಕಣಕ್ಕಿಳಿಸುವ ಕುರಿತು ಸಾಕಷ್ಟು ಚರ್ಚೆಗಳು ಕೇಳಿ ಬಂದಿದೆ.
ಹೌದು, ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕರಾಗಿದ್ದ ಡಾ. ಸಿಎನ್ ಮಂಜುನಾಥ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರಲು ದಳಪತಿಗಳು ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನಲೆ ಬಿಜೆಪಿ ಜೊತೆಗೆ ಮೈತ್ರಿಯಾಗಿರುವ ಜೆಡಿಎಸ್ ಗೆ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳು ಬಿಜೆಪಿ ಹಾಗೂ 4 ಕ್ಷೇತ್ರಗಳು ಜೆಡಿಎಸ್ ಗೆ ಸಿಗಲಿವೆ. ಹೀಗಾಗಿ ಸಿಗುವ ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದ್ರೂ ಒಂದು ಕ್ಷೇತ್ರದಿಂದ ಡಾ. ಮಂಜುನಾಥ್ ಅವರನ್ನ ಕಣಕ್ಕಿಳಿಸುವ ಕುರಿತು ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ.

ಡಾ. ಮಂಜುನಾಥ್ ಅವರು ವೈಧ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಎಲ್ಲಾ ಪಕ್ಷದ ನಾಯಕರಿಗೂ ಡಾ ಮಂಜುನಾಥ್ ಅವರು ಚಿರಪರಿಚಿತರು, ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರನ್ನ ಕಣಕ್ಕಿಳಿಸುವ ಕುರಿತು ಜೆಡಿಎಸ್ ನಾಯಕರು ಕಸರತ್ತು ನಡೆಸುತ್ತಿರುವುದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಮಂಜುನಾಥ್ ಮನವೊಲಿಕೆಗೆ ದಳಪತಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ನಿಂದ ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಲೆಕ್ಕಾಚಾರವನ್ನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಒಕ್ಕಲಿಗರ ಭದ್ರಕೋಟೆಯಾದ ಬೆಂಗಳೂರು ಗ್ರಾಮಾಂತರ ಅಥವಾ ಬೆಂಗಳೂರು ಉತ್ತರದಿಂದ ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ಕಮಲದಳ ನಾಯಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬೆಂಗಳೂರು ನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಡಿ ವಿ ಸದಾನಂದಗೌಡರ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ.
ಈ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಿಂದ ಜೆಡಿಎಸ್ ಅಥವಾ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಂಜುನಾಥ್ ಕಣಕ್ಕಿಳಿದರೆ ಗೆಲುವಿನ ಹಾದಿ ಸುಗಮ ಎಂಬುದು ಉಭಯ ಪಕ್ಷಗಳ ನಾಯಕರ ಅಂದಾಜು. ಡಾ. ಮಂಜುನಾಥ್ ರಾಜ್ಯದಾದ್ಯಂತ ಮನೆಮಾತಾಗಿದ್ದಾರೆ. ಮಂಜುನಾಥ್ ಅವರು ರಾಜಕೀಯಕ್ಕೆ ಬಂದರೆ ಎನ್ಡಿಎ ಮೈತ್ರಿಗೆ ಒಂದು ಆಸ್ತಿ ಆದಂತೆ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಉತ್ತರ ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಮಾಡುವ ಬಗ್ಗೆ ಬಿಜೆಪಿ ನಾಯಕರ ಜೊತೆ ಜೆಡಿಎಸ್ ನಾಯಕರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಹೀಗಾಗಿ ಡಾ ಮಂಜುನಾಥ್ ಮನವೊಲಿಕೆಗೆ ದಳಪತಿಗಳು ಸಾಕಷ್ಟು ಪ್ರಯತ್ನವನ್ನೂ ನಡೆಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications