Janardhana Reddy VS Sriramulu: ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ: ಶ್ರೀರಾಮುಲು ಸ್ಪೋಟಕ ಹೇಳಿಕೆ
ಬೆಂಗಳೂರು, ಜನವರಿ 22: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಹಾಗೂ ರಾಜ್ಯಾಧ್ಯಕ್ಷ ಬದಲಾವಣೆ ಗುಸು ಗುಸು ನಡೆಯುತ್ತಿದ್ರೆ, ಬಿಜೆಪಿ ಕೋಟೆಯಲ್ಲಿ ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಪಕ್ಷದೊಳಗೆ ಜಿದ್ದಾಜಿದ್ದಿ ನಡೆಯುತ್ತಿದೆ. ಸದ್ಯ ಕಮಲ ಕೋಟೆ ಕೊತ ಕೊತ ಕುದಿಯುತ್ತಿದ್ದು, ಅಧ್ಯಕ್ಷ ಸ್ಥಾನದ ಕುರ್ಚಿಗಾಗಿ ಬಿಜೆಪಿಯಲ್ಲಿ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಎಂಟ್ರಿಯಾಗಿದೆ.
ಬಿಜೆಪಿ ಶಾಸಕರು ಹಾಗೂ ಮುಖಂಡರ ಜೊತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಸರಣಿ ಸಭೆಯನ್ನ ನಡೆಸಿದ್ರು. ಸರಣಿ ಸಭೆ ಬಳಿಕ ಕೋರ್ ಕಮಿಟಿ ಸಭೆಯಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರ ಮಾತಿಗೆ ಮಾಜಿ ಸಚಿವ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ತೊರೆಯುವ ಮಾತುಗಳನ್ನಾಡಿದ್ದಾರೆ.

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪಚುನಾವಣೆಯ ಚರ್ಚೆ ಬಂದಾಗ ರಾಧಾ ಮೋಹದಾಸ್ ಅಗರವಾಲ್ ಅವರು ಬಂಗಾರು ಹನುಮಂತು ಸೋಲಿಗೆ ಮಾಜಿ ಸಚಿವ ಶ್ರೀರಾಮುಲು ಕಾರಣ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ವಿರುದ್ಧ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ಖಾಸಗಿ ವಾಹಿನಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಮಾತನಾಡಿ, ಜನಾರ್ದನ ರೆಡ್ಡಿ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪೋಟಕವಾದ ಆರೋಪ ಮಾಡಿದ್ದಾರೆ. ಜನಾರ್ಧನ್ ರೆಡ್ಡಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಪಕ್ಷದಲ್ಲಿ ಜನಾರ್ದನ ರೆಡ್ಡಿ ಅಂದುಕೊಂಡಂತೆ ನಡೆಯಬೇಕೆಂಬ ಮನಸ್ಥಿತಿ ಇದೆ. ನನ್ನ ಬಗ್ಗೆ ಜನಾರ್ಧನ ರೆಡ್ಡಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಜನಾರ್ಧನ ರೆಡ್ಡಿ ಯಾಕೆ ನನ್ನ ಬಗ್ಗೆ ಮಾತನಾಡಲಿಲ್ಲ. ನನ್ನ ಹೃದಯಕ್ಕೆ ಗಾಯ ಮಾಡುವ ಕೆಲಸ ಮಾಡಿದ್ದಾರೆ. ರಾಧಾ ಮೋಹನ್ ದಾಸ್ ಆರೋಪದಿಂದ ನನಗೆ ನೋವಾಗಿದೆ. ನಾನು ಕೆಲಸ ಮಾಡಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ನನ್ನ ಬಗ್ಗೆ ತಿಳಿದುಕೊಂಡು ಅವರು ಮಾತನಾಡಬೇಕಿತ್ತು ಎಂದು ಮಾಜಿ ಸಚಿವ ಶ್ರೀರಾಮುಲು ಅವರು ಅಸಮಾಧಾನ ಹೊರಹಾಕಿದ್ದಾರೆ.
ಉಪಚುನಾವಣೆಯಲ್ಲಿ ನಾನು ಪಕ್ಷದ ಅಭ್ಯರ್ಥಿಯಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕೇಳಿದರೆ ನನ್ನ ಕೆಲಸದ ಬಗ್ಗೆ ಜನರು ಹೇಳುತ್ತಾರೆ. ನಾನು ಕೆಲಸ ಮಾಡಿಲ್ಲ ಅಂತ ಜನಾರ್ಧನ್ ರೆಡ್ಡಿ ಹೇಳಿರುವುದು ಸ್ಪಷ್ಟವಾಗಿದೆ. ನನ್ನ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು, ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ಧನ ರೆಡ್ಡಿ ಪ್ರಯತ್ನಿಸಿದ್ದಾರೆ. ನನಗೆ ಸಂಕಟ ಆಗಿದ್ದಕ್ಕೆ ನಾನು ಪಕ್ಷ ಬಿಡುವುದಾಗಿ ಹೇಳಿದ್ದೇನೆ. ಆದರೆ ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಮನಸ್ಸಿನಲ್ಲಿ ಆ ಬಗ್ಗೆ ನೋವು ಇದೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.
ಸಂಡೂರು ಕ್ಷೇತ್ರದಲ್ಲಿ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ ಮೋಸ ಮಾಡಿ ನಾನು ಎಂದಿಗೂ ಕೆಲಸ ಮಾಡಿಲ್ಲ. ರಾಧಾ ಮೋಹನ್ದಾಸ್ ಅವರು ಉತ್ತರ ಪ್ರದೇಶದವರು. ಇಲ್ಲಿನ ಕೆಲವು ವಿಚಾರಗಳು ಅವರಿಗೆ ಗೊತ್ತಿರುವುದಿಲ್ಲ. 30 ವರ್ಷದ ರಾಜಕಾರಣದಲ್ಲಿ ನನ್ನ ವಿರುದ್ಧ ಯಾವುದೇ ಆರೋಪವಿಲ್ಲ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಒಳ್ಳೆಯದಲ್ಲ ಅಂತ ಹೇಳಿದ್ದೇನೆ ಸಭೆಯಲ್ಲಿ ಈ ವಿಚಾರವನ್ನು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ ಎಂದು ಶ್ರೀರಾಮುಲು ತಿಳಿಸಿದರು.












Click it and Unblock the Notifications